Homeರಾಜಕೀಯಶೀಘ್ರದಲ್ಲೇ ಸಂಪುಟ ವಿಸ್ತರಣೆ ಸಾಧ್ಯತೆ

ಶೀಘ್ರದಲ್ಲೇ ಸಂಪುಟ ವಿಸ್ತರಣೆ ಸಾಧ್ಯತೆ

Cabinet expansion likely soon

ಬೆಂಗಳೂರು, ಜೂ. 22- ಸಚಿವ ಸಂಪುಟ ವಿಸ್ತರಣೆಗೆ ಮತ್ತೆ ಒತ್ತಡಗಳು ಕೇಳಿ ಬರುತ್ತಿದ್ದು ರಾಜ್ಯ ನಾಯಕರು ಮೂರ್ನಾಲ್ಕು ದಿನಗಳಲ್ಲಿ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಲಿದ್ದಾರೆ.ವಿಧಾನಪರಿಷತ್‌, ರಾಜ್ಯಸಭೆ ಚುನಾವಣೆ ಮುಗಿದಿದೆ. ಕೆಪಿಸಿಸಿಯ ನೂತನ ಅಧ್ಯಕ್ಷರು ಪದಪಗ್ರಹಣ ಮಾಡಿದ್ದಾರೆ. ರಾಜಕೀಯವಾಗಿ ಎಲ್ಲಾ ಪ್ರಮುಖ ಘಟನೆಗಳು ಮುಗಿದಿದ್ದು, ಇನ್ನೂ ಸಂಪುಟ ವಿಸ್ತರಣೆ ಮಾತ್ರ ಬಾಕಿಯಿದೆ.

ಆಗಸ್ಟ್‌ ತಿಂಗಳಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣಾ ನೆರವೇರಿಸಲು ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಬೇಕಿದೆ. ಅದಕ್ಕೂ ಮುನ್ನ ಸಂಪುಟದಲ್ಲಿ ಖಾಲಿ ಇರುವ 20 ಸ್ಥಾನಗಳನ್ನು ಭರ್ತಿ ಮಾಡಬೇಕು. ಜೊತೆಗೆ ವಿಧಾನಪರಿಷತ್ತಿನಲ್ಲಿ ಖಾಲಿಯಾಗಿರುವ 4 ಸ್ಥಾನಗಳಿಗೂ ಸದಸ್ಯರನ್ನು ನಾಮ ನಿರ್ದೇಶನ ಮಾಡಬೇಕಿದೆ. ಈ ನಿಟ್ಟಿನಲ್ಲಿ ಹೈಕಮಾಂಡ್‌ ಜೊತೆ ಚರ್ಚೆ ನಡೆಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ತೆರಳುವ ಸಾಧ್ಯತೆ ಇದೆ. ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಕೂಡ ದೆಹಲಿಗೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇರುವ 20 ಸ್ಥಾನಗಳಿಗೆ ಕಾಂಗ್ರೆಸ್‌‍ನ 120 ಶಾಸಕರು ಸಚಿವ ಆಕಾಂಕ್ಷಿಗಳಾಗಿದ್ದು, ದಿನೇ ದಿನೇ ಒತ್ತಡಗಳು ಹೆಚ್ಚಾಗುತ್ತಿವೆ. ಹಿರಿಯ ಶಾಸಕರುಗಳು ತಮಗೆ ಅವಕಾಶ ನೀಡಬೇಕು ಎಂದು ಪಟ್ಟುಹಿಡಿದಿದ್ದರೆ, ಯುವ ಶಾಸಕರು ಸಂಪುಟದಲ್ಲಿ ತಮನ್ನೂ ಪರಿಗಣಿಸುವಂತೆ ಒತ್ತಾಯಿಸಿದ್ದಾರೆ.
ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದರಿಂದ ಸಾಮಾಜಿಕ ನ್ಯಾಯ ಹಾಗೂ ಪ್ರಾದೇಶಿಕ ಪ್ರಾತಿನಿದ್ಯತೆ ನೀಡುವುದು ಅನಿವಾರ್ಯವಾಗಿದೆ.

ಈ ನಡುವೆ ರಾಜ್ಯದಲ್ಲಿ ಶಕ್ತಿ ಕೇಂದ್ರಗಳು ಹೆಚ್ಚಾಗಿದ್ದು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಮ ಬೆಂಬಲಿಗರಿಗೆ ಮಣೆ ಹಾಕಲು ನಿರ್ಧರಿಸಿದ್ದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿಂಬಾಲಕರ ಪಟ್ಟಿ ಕೂಡ ದೊಡ್ಡದಿದೆ. ಎಲ್ಲವನ್ನೂ ಅಳೆದು ತೂಗಿ ಸಂಭಾಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಮೊದಲು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ, ಸಂಪುಟ ಸೇರಲು ಹಲವಾರು ಮಂದಿ ಕಸರತ್ತು ನಡೆಸಿದ್ದರು. ಆದರೆ ಅದಕ್ಕೆ ಡಿ.ಕೆ.ಶಿವಕುಮಾರ್‌ ಅವಕಾಶ ನೀಡಲಿಲ್ಲ. ಅಧಿಕಾರ ಹಸ್ತಾಂತರವಾದ ಬಳಿಕ ಮೊದಲ ಹಂತದ ಸಂಪುಟ ವಿಸ್ತರಣೆಯಲ್ಲಿ ಹಿರಿಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಸಂಪೂರ್ಣವಾಗಿ ಹೊಸ ಮುಖಗಳಿಗೆ ಅದರಲ್ಲೂ 3ಕ್ಕಿಂತ ಹೆಚ್ಚು ಬಾರಿ ಗೆದ್ದಿರುವ ಶಾಸಕರಿಗೆ ಆದ್ಯತೆ ನೀಡಲು ಚರ್ಚೆಗಳು ನಡೆಯುತ್ತಿವೆ. ಇದೇ ತಿಂಗಳ 23 ಅಥವಾ 25ರಂದು ಸಂಪುಟ ವಿಸ್ತರಣೆಯಾಗಲಿದೆ ಎಂದು ಕಾಂಗ್ರೆಸ್‌‍ ನಾಯಕರು ಹೇಳಿಕೊಳ್ಳುತ್ತಿದ್ದರು. ನಾಳೆ ಜೂನ್‌ 23 ದಿನವಾಗಿದ್ದು ಸಂಪುಟ ವಿಸ್ತರಣೆಯ ಲಕ್ಷಣಗಳಿಲ್ಲ. ಮೂಲಗಳ ಪ್ರಕಾರ ಜೂನ್‌ 25ಕ್ಕೆ ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ಹಾಗೂ ಬಿ.ಕೆ.ಹರಿಪ್ರಸಾದ್‌ ದೆಹಲಿಗೆ ತೆರಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ದೆಹಲಿಯಲ್ಲಿ ವರಿಷ್ಠ ನಾಯಕರ ಜೊತೆ ಚರ್ಚೆಯ ವೇಳೆ ರಾಜ್ಯದ ಮೂರು ನಾಯಕರು ತಮ ಬೆಂಬಲಿಗರ ಪಟ್ಟಿಯನ್ನು ಹೈಕಮಾಂಡ್‌ಗೆ ತಲುಪಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚಿನ ದಿನಗಳಲ್ಲಿ ಅಧಿಕಾರ ಹಸ್ತಾಂತರ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗಳಂತಹ ಪ್ರಮುಖ ವಿದ್ಯಾನಾನಗಳನ್ನು ಯಾವುದೇ ವಿವಾದಗಳಾಗದಂತೆ ಸಮಚಿತ್ತವಾಗಿ ನಿಭಾಯಿಸುವಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಯಶಸ್ವಿಯಾಗಿದ್ದರು. ಅದಕ್ಕಾಗಿ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಣದೀಪ್‌ ಸಿಂಗ್‌ ಸುರ್ಜೇವಾಲ ಅವರನ್ನು ಅಭಿನಂದಿಸಿದರು.

ಈ ಮೊದಲಿನ ಪರಿಸ್ಥಿತಿಗಳನ್ನು ನಿಭಾಯಿಸಿದಷ್ಟು ಸುಲಭವಾಗಿ ಸಂಪುಟ ವಿಸ್ತರಣೆಯನ್ನು ಸರಿದೂಗಿಸಲು ಕಷ್ಟಸಾಧ್ಯ ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ಸಂಪುಟ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ದೊಡ್ಡದಿದೆ. ಅವರನ್ನು ಸರಿದೂಗಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಇದು ಕಾಂಗ್ರೆಸ್‌‍ನ ಪಾಲಿಗೆ ದೊಡ್ಡ ಸವಾಲು ಎಂದು ಭಾವಿಸಲಾಗಿದೆ.

ಡಿ.ಕೆ.ಶಿವಕುಮಾರ್‌ ಅವರು ಸದ್ಯಕ್ಕೆ ಸಂಪುಟ ವಿಸ್ತರಣೆಯ ತಂಟೆಗೆ ಹೋಗದೇ ಸ್ವಲ್ಪ ದಿನ ಕಾಲ ಮುಂದೂಡುವ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಅದಕ್ಕೆ ಅವಕಾಶ ನೀಡದಂತೆ ಶೀಘ್ರದಲ್ಲೇ ಸಂಪುಟ ವಿಸ್ತರಣೆ ಮಾಡಬೇಕೆಂದು ಪಕ್ಷದ ಆಂತರಿಕ ವಲಯದಲ್ಲಿ ತೀವ್ರ ಒತ್ತಡ ಕೇಳಿ ಬರುತ್ತಿದೆ.

RELATED ARTICLES

Latest News