Thursday, April 16, 2026
Homeರಾಜ್ಯಸಿಎಂ ಬಣದ ಶಾಸಕರ ವಿದೇಶ ಪ್ರವಾಸ : ಡಿಸಿಎಂ ಬಣದ ಬೆಂಬಲಿಗರು ಸಿಡಿಮಿಡಿ

ಸಿಎಂ ಬಣದ ಶಾಸಕರ ವಿದೇಶ ಪ್ರವಾಸ : ಡಿಸಿಎಂ ಬಣದ ಬೆಂಬಲಿಗರು ಸಿಡಿಮಿಡಿ

Siddaramaiah

ಬೆಂಗಳೂರು, ಫೆ.18- ಶಾಸಕರು ವಿದೇಶಿ ಪ್ರವಾಸ ಕೈಗೊಂಡಾಕ್ಷಣ ಸರ್ಕಾರವೂ ಬೀಳುವುದಿಲ್ಲ, ಮುಖ್ಯಮಂತ್ರಿಯೂ ಬದಲಾಗುವುದಿಲ್ಲ ಎಂದು ಡಿ.ಕೆ.ಶಿವಕುಮಾರ್‌ ಬಣದ ಶಾಸಕರು ವ್ಯಂಗ್ಯವಾಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯಅವರ ಬಣದ ಶಾಸಕರ ವಿದೇಶಿ ಪ್ರವಾಸಕ್ಕೆ ಡಿ.ಕೆ.ಶಿವಕುಮಾರ್‌ ಬೆಂಬಲಿಗರು ಸಿಡಿಮಿಡಿಗೊಂಡಿದ್ದಾರೆ. ಅಧಿಕಾರ ಹಂಚಿಕೆಯಲ್ಲಿ ಹೈಕಮಾಂಡ್‌ ತೀರ್ಮಾನವೇ ಅಂತಿಮ ಎಂದು ಹೇಳಲಾಗುತ್ತಿದೆ. ಆದರೆ ಹೈಕಮಾಂಡ್‌ ತನ್ನ ಸ್ವ ಇಚ್ಛೆಯನ್ನು ವ್ಯಕ್ತ ಪಡಿಸಿ ಕರ್ನಾಟಕದಲ್ಲಿ ಅನಗತ್ಯವಾಗಿ ಪ್ರಬಲ ಸಮುದಾಯಗಳ ಕೆಂಗಣ್ಣಿಗೆ ಗುರಿಯಾಗಬಾರದು ಎಂಬ ಕಾರಣಕ್ಕೆ ಜಾಣ ನಡೆ ಅನುಸರಿಸುತ್ತಿದೆ.

ತೀರಾ ವಿಪರೀತಕ್ಕೆ ಹೋದಾಗ ಶಾಸಕಾಂಗ ಸಭೆ ಕರೆದು ಬಲಾಬಲ ಆಧಾರದ ಮೇಲೆ ತೀರ್ಮಾನ ಮಾಡಿ ಕೈ ತೊಳೆದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ಒಳಗೊಳಗೆ ಶಾಸಕರ ಬೆಂಬಲವನ್ನು ಕ್ರೋಢಿಕರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ರಣತಂತ್ರ ರೂಪಿಸಿದ್ದಾರೆ. ತಮ ಬೆಂಬಲಿಗರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ವಿದೇಶಿ ಪ್ರವಾಸದ ಆಮಿಷವೊಡ್ಡಲಾಗಿದೆ ಎಂಬ ಆರೋಪಗಳಿವೆ.

ಶಾಸಕರು ಸ್ವಂತ ಖರ್ಚಿನಲ್ಲಿ ವಿದೇಶ ಪ್ರವಾಸ ಕೈಗೊಂಡಿದ್ದಾರೆ ಎಂದು ನಂಬಿಸುವ ಪ್ರಯತ್ನ ನಡೆದಿದೆ. ಇಷ್ಟು ದಿನ ಸುಮನ್ನಿದ್ದ ಶಾಸಕರು ಅದರಲ್ಲೂ ಅಧಿಕಾರ ಹಂಚಿಕೆಯ ಚರ್ಚೆಗಳು ಕಾವೇರಿದ ಸಂದರ್ಭದಲ್ಲೇ ಪ್ರವಾಸಕ್ಕೆ ತೆರಳುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಏಕಕಾಲಕ್ಕೆ ಶಾಸಕರ ಗುಂಪು ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್‌ಗೆ ತೆರಳುತ್ತಿರುವುದು ಪೂರ್ವ ನಿಯೋಜಿತ ಎನಿಸುತ್ತಿದೆ. ವಿದೇಶಿ ಪ್ರವಾಸಕ್ಕೆ ಕೆಲ ಬಿಲ್ಡರ್‌ಗಳು ಪರೋಕ್ಷವಾಗಿ ಪ್ರಾಯೋಜಕತ್ವ ನೀಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಶಾಸಕರ ವಿದೇಶಿ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿರುವ ಮಂಡ್ಯ ಕ್ಷೇತ್ರದ ಶಾಸಕ ಗಣಿಗ ರವಿಕುಮಾರ್‌, ಕೆಲ ಶಾಸಕರು ವಿದೇಶ ಪ್ರವಾಸ ಕೈಗೊಂಡರೆ ಮುಖ್ಯಮಂತ್ರಿಯಾಗಲಿ, ಸರ್ಕಾರವಾಗಲಿ ಬದಲಾಗುವುದಿಲ್ಲ. ಕಾಂಗ್ರೆಸ್‌‍ ಹೈಕಮಾಂಡ್‌ ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.

ಶಾಸಕರು ವಿದೇಶಕ್ಕೆ ಏಕೆ ಹೋಗಿದ್ದಾರೋ ಗೊತ್ತಿಲ್ಲ. ಸರ್ಕಾರದ ಖರ್ಚಿನಲ್ಲಿ ಅಥವಾ ಸ್ವಂತ ಖರ್ಚಿನಲ್ಲಾದರೂ ಹೋಗಿರಲಿ. ಧೈರ್ಯವಾಗಿ ಅಥವಾ ಕದ್ದು ಹೋಗಿರಲಿ. ಶಾಸಕರು ವಿದೇಶದಲ್ಲಿ ಟೂರ್‌ ಹೊಡೆದಾಕ್ಷಣ ಯಾವುದೇ ಬದಲಾವಣೆಯಾಗುವುದಿಲ್ಲ. ಮುಖ್ಯಮಂತ್ರಿಯನ್ನು ಅಧಿಕಾರದಿಂದ ಕೆಳಗಿಳಿಸಲಾಗುವುದಿಲ್ಲ ಅಥವಾ ಸರ್ಕಾರ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ಅಧಿಕಾರ ಹಂಚಿಕೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ನಡುವೆ ನಡೆದಿರುವ ಮಾತುಕತೆ. ಹೈಕಮಾಂಡ್‌ ಮಾತ್ರ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ. ಒಂದು ವೇಳೆ ನಾನು ಐವತ್ತು ಮಂದಿ ಶಾಸಕರನ್ನು ವಿದೇಶಕ್ಕೆ ಕರೆದುಕೊಂಡು ಹೋದ ತಕ್ಷಣ ಸರ್ಕಾರ ಅಥವಾ ಮುಖ್ಯಮಂತ್ರಿ ಬದಲಾಯಿಸಲಾಗುವುದಿಲ್ಲ. ನಾನು ಮಂಡ್ಯದಲ್ಲೇ ಇದ್ದರೂ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಮತ್ತೊಂದೆಡೆ ಕುಣಿಗಲ್‌ ಕ್ಷೇತ್ರದ ಶಾಸಕ ಎಚ್‌.ಡಿ.ರಂಗನಾಥ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ ತಯಾರಿಕೆ ಪ್ರಕ್ರಿಯೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಹೈನುಗಾರಿಕೆ, ಕೃಷಿ ಸೇರಿದಂತೆ ಹಲವು ವಿಷಯಗಳ ತಿಳುವಳಿಕೆಗಾಗಿ ಶಾಸಕರು ಸ್ವಂತ ಖರ್ಚಿನಲ್ಲಿ ವಿದೇಶ ಪ್ರವಾಸಕ್ಕೆ ಹೋಗಬಹುದು. ಅದು ತಪ್ಪಲ್ಲ ಎಂದಿದ್ದಾರೆ.

ಗುಂಪಿನ ಭಾಗವಾಗಿ ಶಾಸಕರು ವಿದೇಶ ಪ್ರವಾಸ ಹೋಗಿದ್ದರೆ ನನ್ನನ್ನು ಯಾರಾದರೂ ಕರೆಯುತ್ತಿದ್ದರು. ಆದರೆ ನನ್ನನ್ನು ಯಾರೂ ಕರೆದಿಲ್ಲ. ಹಾಗಾಗಿ ಇದು ಗುಂಪುಗಾರಿಕೆಯ ಪ್ರವಾಸ ಎಂದು ನನಗೆ ಎನ್ನಿಸುವುದಿಲ್ಲ ಎಂದು ಹೇಳಿದ್ದಾರೆ.ಒಟ್ಟಿನಲ್ಲಿ ಶಾಸಕರ ವಿದೇಶಿ ಪ್ರವಾಸ ಬಲಾಬಲ ಪ್ರದರ್ಶನದ ವೇದಿಕೆಯಂತೆ ಪರಿಗಣಿಸಲ್ಪಡುತ್ತಿದೆ.

RELATED ARTICLES

Latest News