Thursday, April 16, 2026
Homeರಾಜ್ಯಬಿಜೆಪಿಗಿಂತಲೂ ಕಾಂಗ್ರೆಸ್‌‍ ಸರ್ಕಾರದಲ್ಲಿ ಮಿತಿಮೀರಿದ ಕಮೀಷನ್‌ ಕಿರುಕುಳ : ಗುತ್ತಿಗೆದಾರರ ಆರೋಪ

ಬಿಜೆಪಿಗಿಂತಲೂ ಕಾಂಗ್ರೆಸ್‌‍ ಸರ್ಕಾರದಲ್ಲಿ ಮಿತಿಮೀರಿದ ಕಮೀಷನ್‌ ಕಿರುಕುಳ : ಗುತ್ತಿಗೆದಾರರ ಆರೋಪ

Excessive commission harassment in Congress government more than BJP: Contractors

ಬೆಂಗಳೂರು,ಫೆ.18- ಹಿಂದಿನ ಬಿಜೆಪಿ ಸರ್ಕಾರಕ್ಕಿಂತ ಹಾಲಿ ಕಾಂಗ್ರೆಸ್‌‍ ಸರ್ಕಾರ ವಿವಿಧ ಇಲಾಖೆಗಳಲ್ಲಿ ನಡೆದಿರುವ ಕಾಮಗಾರಿಗಳ ಹಣ ಬಿಡುಗಡೆಗೆ ಹೆಚ್ಚಿನ ಕಮಿಷನ್‌ ತೆಗೆದುಕೊಳ್ಳುತ್ತಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘ ಗಂಭೀರ ಆರೋಪ ಮಾಡಿದೆ.

ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದ್ದ ಕಮಿಷನ್‌ಗಿಂತಲೂ ಈಗ ಕಾಂಗ್ರೆಸ್‌‍ ಸರ್ಕಾರದ ಅವಧಿಯಲ್ಲಿ ಹೆಚ್ಚಿನ ಕಮಿಷನ್‌ ಕೊಟ್ಟರೆ ಮಾತ್ರ ಹಣ ಬಿಡುಗಡೆಯಾಗುತ್ತದೆ. ಇಲ್ಲದಿದ್ದರೆ ಯಾವ ಕಾಮಗಾರಿಯ ಹಣ ಬಿಡುಗಡೆಯಾಗುವುದಿಲ್ಲ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್‌.ಮಂಜುನಾಥ್‌ ಆರೋಪ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌‍ ಸರ್ಕಾರದ ಅವಧಿಯಲ್ಲಿ ಪ್ರತಿಯೊಂದಕ್ಕೂ ಕಮಿಷನ್‌ ಕೊಟ್ಟರೆ ಮಾತ್ರ ಹಣ ಬಿಡುಗಡೆಯಾಗುತ್ತದೆ. ಇಲ್ಲದಿದ್ದರೆ ನಯಾಪೈಸೆ ಬಿಡುಗಡೆಯಾಗುವುದಿಲ್ಲ. ಕಾಮಗಾರಿ ನಡೆಸಿರುವ ನಾವು ಎಲ್ಲಿಗೆ ಹೋಗಬೇಕೆಂದು ಅವರು ಪ್ರಶ್ನಿಸಿದರು.

ಇದೇ ಕಾಂಗ್ರೆಸ್‌‍ ಸರ್ಕಾರ ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಅಂದು ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿದ್ದ ಕೆಂಪಣ್ಣ ಅವರನ್ನು ಬಳಸಿಕೊಂಡು ಸಿದ್ದರಾಮಯ್ಯಅಧಿಕಾರಕ್ಕೆ ಬಂದರು. ಈಗ ಹಳೆಯ ಸರ್ಕಾರಕ್ಕಿಂತ ಹೆಚ್ಚು ಕಮಿಷನ್‌ ಕೊಡುವ ಸ್ಥಿತಿ ಇದೆ. ನಮ ಪರಿಸ್ಥಿತಿಯಂತೂ ಯಾರಿಗೂ ಹೇಳತೀರದಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಸರ್ಕಾರದಿಂದ ನಮಗೆ ಬರೋಬ್ಬರಿ 37 ಸಾವಿರ ಕೋಟಿ ರೂ. ಬರಬೇಕಿದೆ. ಹಳೆಯ ಬಿಲ್‌ಗೂ ಕಮಿಷನ್‌ ಕೊಟ್ಟರೆ ಮಾತ್ರ ಹಣ ಬಿಡುಗಡೆ ಮಾಡುತ್ತಿದ್ದಾರೆ. ನಗರಾಭಿವೃದ್ಧಿ ಇಲಾಖೆಯಲ್ಲಿ ಮಧ್ಯವರ್ತಿಗಳ ಮೂಲಕ ಕೆಲಸ ಆಗುತ್ತದೆ ಎಂದು ಮಂಜುನಾಥ್‌ ಗಂಭೀರ ಆರೋಪ ಮಾಡಿದರು.

ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ ತಮಗೆ ಬೇಕಾದವರಿಗೆ ಟೆಂಡರ್‌ ಕೊಡುತ್ತಿದ್ದಾರೆ. ಎಂಜಿನಿಯರ್‌ಗಳ ಖಾಸಗಿ ಕಚೇರಿಗೆ ಕರೆಸಿಕೊಂಡು ಟೆಂಡರ್‌ ಕೊಡುತ್ತಿದ್ದಾರೆ. ಇಂತವರನ್ನು ಸಿಎಂ ಹೇಗೆ ಸಹಿಸಿಕೊಂಡಿದ್ದಾರೆ ದೇವರಿಗೆ ಗೊತ್ತು ಎಂದು ಆಶ್ಚರ್ಯ ವ್ಯಕ್ತಪಡಿಸಿದರು. ಲೋಕೋಪಯೋಗಿ ಸಚಿವ ಸಚಿವ ಸತೀಶ್‌ ಜಾರಕಿಹೊಳಿಯವರು ಸ್ವಲ್ಪ ನಮ ಕಷ್ಟಗಳಿಗೆ ಸ್ಪಂದಿಸುತ್ತಾರೆ. ಉಳಿದವರ ಬಗ್ಗೆ ಮುಂದಿನ ದಿನಗಳಲ್ಲಿ ಬಹಿರಂಗಪಡಿಸುತ್ತೇನೆ ಎಂದು ಮಂಜುನಾಥ್‌ ಹೇಳಿದರು.

RELATED ARTICLES

Latest News