Homeರಾಜಕೀಯಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ವರಿಷ್ಠರಿಗೆ ವಿವರಣೆ ನೀಡಲು ರಾಜ್ಯ ಬಿಜೆಪಿ ನಾಯಕರು ದೆಹಲಿಗೆ

ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ವರಿಷ್ಠರಿಗೆ ವಿವರಣೆ ನೀಡಲು ರಾಜ್ಯ ಬಿಜೆಪಿ ನಾಯಕರು ದೆಹಲಿಗೆ

Cross-voting in council elections: State BJP leaders to Delhi to explain to superiors

ಬೆಂಗಳೂರು, ಜೂ.22- ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಅಡ್ಡ ಮತದಾನ ನಡೆಸಿದ ಪ್ರಕರಣ ಕುರಿತು ವಿವರಣೆ ನೀಡಲು ರಾಜ್ಯ ಬಿಜೆಪಿ ನಾಯಕರು ದೆಹಲಿಗೆ ತೆರಳಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಡಾ. ರಾಧಾ ಮೋಹನ್‌ ಅಗರ್ವಾಲ್‌‍, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಅವರುಗಳು ದೆಹಲಿಗೆ ತೆರಳಿದ್ದು ಪಕ್ಷದ ಪ್ರಮುಖರನ್ನು ಭೇಟಿಯಾಗಿ ಮಾಹಿತಿ ನೀಡಲಿದ್ದಾರೆ.

ನಾಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನಬೀನ್‌ ಅವರನ್ನು ಭೇಟಿ ಮಾಡಲಿರುವ ಈ ಮೂವರು ನಾಯಕರು ಅಡ್ಡ ಮತದಾನ ನಡೆಸಿದ ಪ್ರಕರಣ ಹಾಗೂ ಇತ್ತೀಚಿನ ಪಕ್ಷದ ಬೆಳವಣಿಗೆಗಳ ಕುರಿತಂತೆ ಸಮಗ್ರವಾದ ಮಾಹಿತಿಯನ್ನು ನೀಡಲಿದ್ದಾರೆ.

ಅಡ್ಡಮತದಾನದ ಹಿಂದಿನ ವಾಸ್ತವಾಂಶಗಳು, ಯಾವ ಶಾಸಕರು ಪಕ್ಷದ ವಿಪ್‌ ಉಲ್ಲಂಘಿಸಿದ್ದಾರೆ ಎಂಬಿತ್ಯಾದಿ ವಿಷಯಗಳ ಬಗ್ಗೆ ವರಿಷ್ಠರು ಮಾಹಿತಿ ಪಡೆಯಲಿದ್ದಾರೆ. ಇದರ ಆಧಾರದ ಮೇಲೆ ಮುಂದಿನ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

ಪಕ್ಷದ ಹೈಕಮಾಡ್‌ನ ಈ ನಡೆ, ಪಕ್ಷದಲ್ಲಿ ಶಿಸ್ತನ್ನು ಮರುಸ್ಥಾಪಿಸುವ ಮತ್ತು ಅಡ್ಡಮತದಾನ ಮಾಡಿದವರ ವಿರುದ್ಧ ಕಠಿಣ ನಿರ್ಧಾರ ಕೈಗೊಳ್ಳುವ ಸಂದೇಶವನ್ನು ನೀಡಿದೆ. ವಿಧಾನ ಪರಿಷತ್‌ ಚುನಾವಣೆಯಲ್ಲಿ ನಡೆದ ಅಡ್ಡಮತದಾನದ ವಿಷಯವು ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಈ ಸಂಬಂಧ ಬಿಜೆಪಿ ಹೈಕಮಾಂಡ್‌ ರಾಜ್ಯ ನಾಯಕರಿಗೆ ಸಮನ್ಸ್ ನೀಡಿತ್ತು.

ವಿಧಾನ ಪರಿಷತ್‌ ಚುನಾವಣೆಯಲ್ಲಿ ನಡೆದ ಅಡ್ಡಮತದಾನದ ಬಗ್ಗೆ ವಿವರಣೆ ನೀಡಲು ಹಾಗೂ ಈ ಹಿನ್ನಡೆಗೆ ಕಾರಣಗಳನ್ನು ವಿವರಿಸಲು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನಬಿನ್‌ ಅವರು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್‌ ದಾಸ್‌‍ ಅಗರ್ವಾಲ್‌ ಅವರಿಗೆ ನಾಳೆ ದೆಹಲಿಗೆ ಬರುವಂತೆ ಸೂಚಿಸಿದ್ದರು.

ಜೂನ್‌ 18 ರಂದು ನಡೆದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಎನ್‌ಡಿಎ (ಬಿಜೆಪಿ-ಜೆಡಿಎಸ್‌‍) ಮೈತ್ರಿಕೂಟದ ನಿರೀಕ್ಷೆಯಂತೆ ಮತಗಳು ಬಾರದಿರುವುದು ಪಕ್ಷದ ಹೈಕಮಾಂಡ್‌ಗೆ ತೀವ್ರ ಅಸಮಾಧಾನ ತಂದಿದೆ. ಸುಮಾರು 11 ಶಾಸಕರು ಅಡ್ಡಮತದಾನ ಮಾಡಿರಬಹುದು ಎಂದು ಅಂದಾಜಿಸಲಾಗಿದೆ.

ಈ ಅಡ್ಡಮತದಾನದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಬಿಜೆಪಿ ಘಟಕ, ಸತ್ಯಾಸತ್ಯತೆಯನ್ನು ಪತ್ತೆಹಚ್ಚಲು ಮೂವರು ಸದಸ್ಯರ ಸಮಿತಿಯನ್ನು ರಚಿಸಿದೆ.
ಸಮಿತಿಯಲ್ಲಿ ಸಿ.ಟಿ. ರವಿ (ವಿಧಾನ ಪರಿಷತ್‌ ಸದಸ್ಯ), ಎನ್‌. ಮಹೇಶ್‌ (ರಾಜ್ಯ ಉಪಾಧ್ಯಕ್ಷ) ಮತ್ತು ಮಹೇಶ್‌ ತೆಂಗಿನಕಾಯಿ (ಶಾಸಕ) ಇದ್ದಾರೆ.

ಈ ಸಮಿತಿಯು ಜೂ.25ರ ಒಳಗೆ ವರದಿ ಸಲ್ಲಿಸಬೇಕೆಂದು ಸೂಚಿಸಲಾಗಿದೆ. ಬಿ.ವೈ. ವಿಜಯೇಂದ್ರ ಅವರು, ಪಕ್ಷದ ಶಿಸ್ತನ್ನು ಉಲ್ಲಂಘಿಸಿ ಅಡ್ಡಮತದಾನ ಮಾಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮತ್ತು ಯಾರನ್ನೂ ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅತ್ತ ಮಾಜಿ ಸಿಎಂ ಬಸವರಾಜ ಬೊಮಾಯಿ ಅವರು, ಕಾಂಗ್ರೆಸ್‌‍ನ ಆಮಿಷಕ್ಕೆ ಬಲಿಬಿದ್ದು ಕೆಲ ಶಾಸಕರು ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ವಿದ್ಯಮಾನವು ರಾಜ್ಯ ಬಿಜೆಪಿ ಘಟಕದಲ್ಲಿ ಮುಂದಿನ ದಿನಗಳಲ್ಲಿ ನಾಯಕತ್ವದ ಬದಲಾವಣೆ ಅಥವಾ ಶಿಸ್ತುಕ್ರಮಗಳಿಗೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

RELATED ARTICLES

Latest News