ಬೆಂಗಳೂರು, ಮಾ.10- ದೆಹಲಿ ಭೇಟಿಯ ಬಳಿಕ ಬೆಂಗಳೂರಿಗೆ ವಾಪಸಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷದ ಶಾಸಕರಿಗೆ, ಸಂಸದರಿಗೆ ಹಾಗೂ ವಿಧಾನ ಪರಿಷತ್ ಮತ್ತು ರಾಜ್ಯಸಭಾ ಸದಸ್ಯರಿಗೆ ಇಂದು ಔತಣಕೂಟ ನಡೆಸುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷಗಳ ಅಧಿಕಾರಾವಧಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಔತಣಕೂಟ ಆಯೋಜಿಸಿದ್ದು, ಇದರಲ್ಲಿ ಭಾಗವಹಿಸುವವರ ಸಂಖ್ಯೆ ಆಧರಿಸಿ ಡಿ.ಕೆ.ಶಿವಕುಮಾರ್ ಅವರ ಅಧಿಕಾರದ ಭವಿಷ್ಯ ನಿರ್ಧಾರವಾಗುತ್ತದೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಅವರ ಭೇಟಿಗಾಗಿ ಡಿ.ಕೆ.ಶಿವಕುಮಾರ್ ಎಲ್ಲಿಲ್ಲದ ಪ್ರಯತ್ನ ನಡೆಸಿದ್ದಾರೆ. ಆದರೆ ಅದು ಔಪಚಾರಿಕವಾಗಿಯೂ ಸಾಧ್ಯವಾಗಿಲ್ಲ. ಈ ಮೊದಲು ಸುಮಾರು 12ಕ್ಕೂ ಹೆಚ್ಚು ಬಾರಿ ಕಳೆದೆರಡು ತಿಂಗಳಿಂದೀಚೆಗೆ ಡಿ.ಕೆ.ಶಿವಕುಮಾರ್ ದೆಹಲಿ ಯಾತ್ರೆ ನಡೆಸಿದ್ದಾರೆ. ಆದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮಾತ್ರ ಸುಲಭಸಾಧ್ಕಕ್ಕೆ ಭೇಟಿಯಾಗುತ್ತಿದ್ದಾರೆ. ಪ್ರಿಯಾಂಕ ಗಾಂಧಿ ಕೂಡ ಭೇಟಿಗೆ ಲಭ್ಯವಾಗುತ್ತಿದ್ದರೂ ಕೂಡ ಡಿ.ಕೆ.ಶಿವಕುಮಾರ್ ಅವರಿಗೆ ರಾಜಕೀಯವಾಗಿ ಹೆಚ್ಚಿನ ಲಾಭವಾಗುತ್ತಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇನೆ ಎಂದು ಪದೇ ಪದೇ ಹೇಳುತ್ತಾ ರಾಹುಲ್‌ಗಾಂಧಿ ಸೂಚನೆ ನೀಡಿದರೆ, ಅಧಿಕಾರ ಬಿಟ್ಟುಕೊಡುವುದಾಗಿ ಪಟ್ಟು ಹಿಡಿದಿದ್ದಾರೆ. ಆದರೆ ಡಿ.ಕೆ.ಶಿವಕುಮಾರ್ ಅವರಿಗೆ ರಾಹುಲ್ ಅವರ ಭೇಟಿ ಸಾಧ್ಯವಾಗುತ್ತಿಲ್ಲ. ಕಳೆದ ಡಿಸೆಂಬರ್‌ನಲ್ಲಿ ಕೇರಳ ಪ್ರವಾಸಕ್ಕಾಗಿ ಆಗಮಿಸಿದ್ದ ರಾಹುಲ್ ಗಾಂಧಿಯವರನ್ನು ಡಿ.ಕೆ.ಶಿವಕುಮಾರ್ ಮೈಸೂರು ವಿಮಾನ ನಿಲ್ದಾಣದಲ್ಲಿ ಅಕ್ಷರಶಃ ಅಡ್ಡ ಹಾಕಿ ಮಾತನಾಡಿಸುವ ಪ್ರಯತ್ನ ಮಾಡಿದ್ದರು. ಆ ವೇಳೆ ದೆಹಲಿಗೆ ಆಗಮಿಸುವಂತೆ ರಾಹುಲ್‌ಗಾಂಧಿ ಆಹ್ವಾನ ನೀಡಿದ್ದರು. ದೆಹಲಿಗೆ ತೆರಳಿದ್ದರೂ ಕೂಡ ಮತ್ತೆ ರಾಹುಲ್‌ಗಾಂಧಿ ಭೇಟಿ ಸಾಧ್ಯವಾಗಿಲ್ಲ.
ಈ ಬಾರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಬೆಂಗಳೂರಿನಿಂದ ಕಲಬುರಗಿ, ಕಲಬುರಗಿಯಿಂದ ದೆಹಲಿಗೆ ವಿಶೇಷ ವಿಮಾನದಲ್ಲಿ ಡಿ.ಕೆ.ಶಿವಕುಮಾರ್ ಪ್ರಯಾಣ ಮಾಡಿದರು. ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಇಲ್ಲಿಯವರೆಗೂ ಸಹಕಾರ ನೀಡಿದ್ದಕ್ಕಾಗಿ ಧನ್ಯವಾದ ಹೇಳುವ ಇರಾದೆಯನ್ನು ಡಿ.ಕೆ.ಶಿವಕುಮಾರ್ ಹೊಂದಿದ್ದರು.
ಆದರೆ ಸೌಜನ್ಯದ ಭೇಟಿ ಕೂಡ ಸಾಧ್ಯವಾಗಿಲ್ಲ. ಬರಿಗೈಯಲ್ಲೇ ದೆಹಲಿಯಿಂದ ವಾಪಸಾಗಿರುವ ಡಿ.ಕೆ.ಶಿವಕುಮಾರ್, ಸಂಜೆ ಕಾಂಗ್ರೆಸ್‌ನ ಜನಪ್ರತಿನಿಧಿಗಳಿಗೆ ಔತಣಕೂಟ ಆಯೋಜಿಸಿದ್ದಾರೆ. ಇದರಲ್ಲಿ ಭಾಗವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗರಿಗೂ ಆಹ್ವಾನ ನೀಡಲಾಗಿದೆ. ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ.
ಎಲ್ಲರೂ ಒಟ್ಟಾಗಿ ಇದ್ದೇವೆ ಎಂದು ಪದೇ ಪದೇ ಸಮರ್ಥಿಸಿಕೊಳ್ಳುವ ಪ್ರಯತ್ನಗಳಾಗುತ್ತಿವೆ. ಮೇಲ್ನೋಟಕ್ಕೆ ಒಗ್ಗಟ್ಟಿನಂತೆ ಕಂಡು ಬಂದರೂ ಕೂಡ ಒಳಗೊಳಗೆ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಪ್ರತ್ಯೇಕ ಬಣಗಳ ಮುಸುಕಿನ ಗುದ್ದಾಟ ಇರುವುದಂತೂ ಸತ್ಯ. ಇಂದು ಸಿದ್ದರಾಮಯ್ಯ ಅವರ ಬಣ ಸಚಿವರು, ಶಾಸಕರು ಔತಣಕೂಟದಲ್ಲಿ ಭಾಗವಹಿಸಿದ್ದೇ ಆದರೆ ಅಧಿಕಾರದ ಕಿತ್ತಾಟ ತಾತ್ಕಾಲಿಕವಾಗಿ ಮುಂದೂಡಿಕೆಯಾಗಿದೆ ಎಂದು ಪ್ರತಿಪಾದಿಸಬಹುದಾಗಿದೆ.
ಒಂದು ವೇಳೆ ಸಿದ್ದರಾಮಯ್ಯಅವರ ಬಣ ಔತಣಕೂಟದಿಂದ ದೂರ ಉಳಿದರೆ, ಆದು ಅಧಿಕಾರ ಹಂಚಿಕೆಯ ಸಂಘರ್ಷ ತಾರಕ ಸ್ಥಿತಿಯಲ್ಲಿದೆ ಎಂಬುದನ್ನು ಅಲ್ಲಗೆಳೆಯಲಾಗುವುದಿಲ್ಲ.
