Tuesday, April 21, 2026
Homeರಾಜ್ಯನಜೀರ್‌-ಜಮೀರ್‌ ಭೇಟಿ : ಜೆಡಿಎಸ್‌‍ ಸೇರ್ಪಡೆಗೆ ಸಲಹೆ..?

ನಜೀರ್‌-ಜಮೀರ್‌ ಭೇಟಿ : ಜೆಡಿಎಸ್‌‍ ಸೇರ್ಪಡೆಗೆ ಸಲಹೆ..?

Nazir-Zamir meet: Advice to join JDS..?

ಬೆಂಗಳೂರು, ಏ.15- ದಾವಣಗೆರೆ ದಕ್ಷಿಣ ವಿಧಾನಸಭೆಯ ಉಪಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ವಜಾಗೊಂಡ ವಿಧಾನಪರಿಷತ್‌ ಸದಸ್ಯ ನಜೀರ್‌ ಅಹಮದ್‌ ಅವರ ಮನೆಗೆ ವಸತಿ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ಸಚಿವ ಜಮೀರ್‌ ಅಹಮದ್‌ ಖಾನ್‌ ಭೇಟಿ ನೀಡಿ ಮಾತುಕತೆ ನಡೆಸಿದರು.

ಜಮೀರ್‌ ಅವರ ಈ ನಡೆಗೆ ಕಾಂಗ್ರೆಸ್‌‍ನಲ್ಲಿ ತೀವ್ರ ಅಸಮಾಧಾನಗಳು ಕೇಳಿ ಬಂದಿವೆ. ಹೈಕಮಾಂಡ್‌ ಖುದ್ದು ಪರಿಶೀಲನೆ ನಡೆಸಿ, ಆದೇಶ ನೀಡಿದ ಬಳಿಕ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ನಜೀರ್‌ ಅಹಮದ್‌ ಅವರನ್ನು ವಜಾಗೊಳಿಸಲಾಗಿದೆ.

ಹೈಕಮಾಂಡ್‌ನ ನಿಲುವಿಗೆ ವಿರುದ್ಧವಾಗಿ ನಜೀರ್‌ ಅವರ ಮನೆಗೆ ಜಮೀರ್‌ ಅಹಮದ್‌ ಖಾನ್‌ ಭೇಟಿ ನೀಡಿದ್ದಾರೆ ಎಂಬ ವ್ಯಾಖ್ಯಾನಗಳು ನಡೆಯುತ್ತಿವೆ. ಇಂದು ಬೆಳಗ್ಗೆ ನಜೀರ್‌ ಅವರ ಜಯಮಹಲ್‌ ಹತ್ತಿರ ಇರುವ ಸರ್ಕಾರಿ ನಿವಾಸಕ್ಕೆ ಜಮೀರ್‌ ಭೇಟಿ ನೀಡಿದರು. ಈ ವೇಳೆ ಇಬ್ಬರ ನಡುವೆ ರಹಸ್ಯ ಮಾತುಕತೆ ನಡೆದಿದೆ. ರಾಜ್ಯದಲ್ಲಿ ನಡೆಯುತ್ತಿರುವ ಷಡ್ಯಂತ್ರಗಳ ಬಗ್ಗೆ ದೆಹಲಿಗೆ ಹೋಗಿ ಹೈಕಮಾಂಡ್‌ ಗಮನಕ್ಕೆ ತರುವಂತೆ ಜಮೀರ್‌ ಸಲಹೆ ಮಾಡಿದ್ದಾರೆ ಎನ್ನಲಾಗಿದೆ.

2026ರ ಜೂನ್‌ಗೆ ನಜೀರ್‌ ಅಹಮದ್‌ ಅವರ ವಿಧಾನಪರಿಷತ್‌ ಸದಸ್ಯತ್ವ ಮುಕ್ತಾಯವಾಗಲಿದೆ. ಎರಡೂವರೆ ತಿಂಗಳು ಮಾತ್ರ ಅಧಿಕಾರಾವಧಿ ಇರುವುದರಿಂದ ಮತ್ತೊಂದು ಅವಧಿಗೆ ವಿಧಾನಪರಿಷತ್‌ ಸದಸ್ಯರಾಗಲು ನಜೀರ್‌ ಪ್ರಯತ್ನಿಸಿದರು. ಆದರೆ ದಾವಣಗೆರೆ ಉಪಚುನಾವಣೆ ಅವರ ರಾಜಕೀಯ ಭವಿಷ್ಯವನ್ನೇ ಮಂಕುಗೊಳಿಸಿದೆ. ಜಮೀರ್‌ ಅವರ ಮಾತು ಕೇಳಿ, ಪಕ್ಷ ವಿರುದ್ಧವಾಗಿ ನಡೆದುಕೊಂಡ ನಜೀರ್‌ ಅವರ ರಾಜಕೀಯ ಈಗ ಕವಲುದಾರಿಯಲ್ಲಿದೆ.

ಕರ್ನಾಟಕದ ಮಟ್ಟಿಗೆ ಅಲ್ಪಸಂಖ್ಯಾತರಿಗೆ ಅವಕಾಶ ಕಲ್ಪಿಸಬಲ್ಲ ಬೇರೆ ಪಕ್ಷಗಳಿಲ್ಲ ಎಂಬ ಚಿಂತೆ ನಜೀರ್‌ ಅವರನ್ನು ಕಾಡುತ್ತಿದೆ. ಅನಿವಾರ್ಯವಾಗಿ ಕಾಂಗ್ರೆಸ್‌‍ನಲ್ಲೇ ಉಳಿಯಬೇಕು. ಇಲ್ಲ ಬಿಜೆಪಿ-ಜೆಡಿಎಸ್‌‍ನತ್ತ ಮುಖ ಮಾಡಬೇಕು. ಬಿಜೆಪಿಯಲ್ಲಿ ಅಲ್ಪಸಂಖ್ಯಾತರಿಗೆ ಅವಕಾಶಗಳ ಸಂಖ್ಯೆ ಕಡಿಮೆ. ಜೆಡಿಎಸ್‌‍ ಪಕ್ಷವೂ ಎನ್‌ಡಿಎ ಸೇರಿದ ಮೇಲೆ ಅಲ್ಪಸಂಖ್ಯಾತರ ಮೇಲೆ ಹೆಚ್ಚಿನ ಒಲವು ವ್ಯಕ್ತಪಡಿಸಿದಂತೆ ಕಂಡು ಬಂದಿಲ್ಲ. ಹೀಗಾಗಿ ನಜೀರ್‌ ಅವರಿಗೆ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿದೆ.

ಕ್ಯಾಬಿನೆಟ್‌ ದರ್ಜೆಯ ಸ್ಥಾನಮಾನ, ವಿಧಾನಪರಿಷತ್‌ ಸದಸ್ಯತ್ವ ಎಲ್ಲವೂ ಏಕಾಏಕಿ ಬುಡಮೇಲಾಗಿದೆ. ಕೋಲಾರ ಜಿಲ್ಲೆಯ ರಾಜಕಾರಣದ ಮಟ್ಟಿಗೆ ನಜೀರ್‌ ಅಪ್ರಸ್ತುತ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಮೂಲಗಳ ಪ್ರಕಾರ ಜಮೀರ್‌ ಅವರು ನಜೀರ್‌ ಅಹಮದ್‌ ಅವರನ್ನು ಜೆಡಿಎಸ್‌‍ ಪಕ್ಷಕ್ಕೆ ಸೇರುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್‌‍ ಪಕ್ಷದಲ್ಲಿ ದಿನೇ ದಿನೇ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗುತ್ತಿದೆ. ಮುಂದಿನ ದಿನಗಳಲ್ಲಿ ತಾವು ಕೂಡ ಜೆಡಿಎಸ್‌‍ ಸೇರುವ ಬಗ್ಗೆ ಪರಿಶೀಲನೆ ನಡೆಸಲಿದ್ದು, ಕಾಂಗ್ರೆಸ್‌‍ನಲ್ಲಿನ ಬೆಳವಣಿಗೆಗಳನ್ನು ಪರಾಮರ್ಶಿಸಿ ನಿರ್ಣಯಿಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

RELATED ARTICLES

Latest News