ಬೆಂಗಳೂರು,ಏ.15- ಎಣ್ಣೆ ಪದಾರ್ಥಗಳ ಸೇವನೆ ಕಡಿಮೆ ಮಾಡಿ ಪ್ರತಿಯೊಬ್ಬರೂ ಆರೋಗ್ಯದ ಕಡೆ ಕಾಳಜಿ ವಹಿಸಬೇಕು. ಸಿರಿಧಾನ್ಯಗಳನ್ನು ಬಳಕೆ ಮಾಡುವ ಮೂಲಕ ದೇಶೀಯ ಉತ್ಪನ್ನಗಳನ್ನು ಹೆಚ್ಚು ಖರೀದಿಸಿ ಸ್ವದೇಶಿ ಆಹಾರದ ಕಡೆ ಗಮನ ಕೊಡಬೇಕೆಂದು ಪ್ರಧಾನಿ ನರೇಂದ್ರಮೋದಿ ಅವರು ದೇಶದ ಜನತೆಗೆ ಕರೆ ಕೊಟ್ಟಿದ್ದಾರೆ.
ಅನ್ನ, ಅಕ್ಷರ, ಆಶ್ರಯ, ಆರೋಗ್ಯ, ಆಧ್ಯಾತ , ಪರಿಸರ, ಅನುಕಂಪ, ಗೋರಕ್ಷಣೆ, ಅನುಬಂಧ ಮತ್ತು ಸ್ವಚ್ಚತೆ ಸೇವೆಯ ಬಗ್ಗೆಯೂ ಕರೆ ಕೊಟ್ಟ ಮೋದಿಯವರು, ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಕಿವಿಮಾತು ಹೇಳಿದರು.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ನಡೆದ ಶ್ರೀ ಗುರು ಭೈರವೈಕ್ಯ ಮಂದಿರ ಲೋಕಾರ್ಪಣೆ ಸಮಾವೇಶದಲ್ಲಿ ಅವರು ಮಾತನಾಡಿದರು.
ತಮ 20 ನಿಮಿಷಗಳ ಭಾಷಣದಲ್ಲಿ ಮೋದಿಯವರು, ಕರ್ನಾಟಕದ ಸಂಸ್ಕೃತಿ, ತತ್ವಜ್ಞಾನ, ತಂತ್ರಜ್ಞಾನ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾಗಿದ್ದ ಪದಭೂಷಣ ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಸಮಾಜಸೇವೆ ಹಾಗೂ ಅದರ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಶ್ರೀಮಠದ ಪ್ರಸ್ತುತ ಪೀಠಾಧ್ಯಕ್ಷರಾಗಿರುವ ಡಾ.ಶ್ರೀ.ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಮುಕ್ತಕಂಠದಿಂದ ಹೊಗಳಿದರು.
ಎಲ್ಲಾ ನನ್ನ ಸಹೋದರ, ಸಹೋದರಿಯರಿಗೆ ನಮನಗಳು ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿಯವರು, ಮಂಡ್ಯ ಜಿಲ್ಲೆ ಕಬ್ಬಿಗೆ ಹೆಸರುವಾಸಿ. ಇಲ್ಲಿನ ಜನರ ಮಾತು ಕೂಡ ಕಬ್ಬಿನಷ್ಟೇ ಸಿಹಿ. ಶ್ರೀಮಠಕ್ಕೆ ಬರುವುದೆಂದರೆ ನನಗೆ ಹೊಸ ಆಧ್ಯಾತಿಕ ಲೋಕವನ್ನೇ ಸೃಷ್ಟಿಸುತ್ತದೆ ಎಂದು ಬಣ್ಣಿಸಿದರು.
ಕರ್ನಾಟಕ ಕೇವಲ ತಂತ್ರಜ್ಞಾನಕ್ಕೆ ಮಾತ್ರ ಹೆಸರುವಾಸಿಯಾಗಿಲ್ಲ. ಇದು ತತ್ವಜ್ಞಾನಕ್ಕೂ ಕೂಡ ಪ್ರಖ್ಯಾತಿ ಪಡೆದಿದೆ. 1800 ವರ್ಷಗಳ ಇತಿಹಾಸಿವಿರುವ ಆದಿಚುಂಚನಗಿರಿ ಪೀಠ ಅನ್ನ, ಅಕ್ಷರ, ಆರೋಗ್ಯ ಸೇರಿದಂತೆ ವಿವಿಧ ಸೇವೆಗಳ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಅವರು ಕೊಂಡಾಡಿದರು.
ಮಠದ ಹಿಂದಿನ ಪೀಠಾಧ್ಯಕ್ಷರಾಗಿದ್ದ ಡಾ.ಶ್ರೀ.ಬಾಲಗಂಗಾಧರನಾಥ ಸ್ವಾಮೀಜಿಯವರು ಕೇವಲ ಸಮಾಜಸೇವೆಗೆ ತಮ ಜೀವನವನ್ನು ಮುಡುಪಾಡಿಗಿಟ್ಟಿರಲಿಲ್ಲ. ಪರಿಸರ ಹಾಗೂ ನವಿಲುಗಳ ಸಂರಕ್ಷಣೆಗಾಗಿ ಸಮಾಜದಲ್ಲಿ ದೊಡ್ಡ ಆಂದೋಲನವನ್ನೇ ಪ್ರಾರಂಭಿಸಿದ್ದರು. ನವಿಲು ಭಗವಾನ್ ಸುಬ್ರಹಣ್ಯನ ವಾಹನ. ಅದನ್ನು ರಕ್ಷಣೆ ಮಾಡುವುದು ಇಂದಿನ ಪ್ರಜೆಗಳ ಕರ್ತವ್ಯ ಎಂದು ಮೋದಿಯವರು ಸಲಹೆ ಮಾಡಿದರು.
ನಮ ಸರ್ಕಾರ ಪ್ರತಿಯೊಬ್ಬರಿಗೂ ಉಚಿತವಾಗಿ ಆರೋಗ್ಯ ಸೇವೆಯನ್ನು ನೀಡುತ್ತದೆ. ಆಯುಷಾನ್ ಭಾರತ್ ಯೋಜನೆ ಮೂಲಕ ಉಚಿತವಾಗಿ ವೈದ್ಯಕೀಯ ಸೇವೆ ನೀಡುತ್ತಿದ್ದೇವೆ. ಅದೇ ರೀತಿ ಆದಿಚುಂಚನಗಿರಿ ಮಠವು ಆರೋಗ್ಯ ಕ್ಷೇತ್ರದಲ್ಲಿ ಅಪಾರವಾದ ಸುಧಾರಣೆಯನ್ನು ಮಾಡಿದೆ. ಇದು ನಮೆಲ್ಲರಿಗೂ ಪ್ರೇರಣೆ ಎಂದರು.
ತತ್ವಜ್ಞಾನ ಮತ್ತು ತಂತ್ರಜ್ಞಾನದ ಸಮೃದ್ಧಿ ಕರ್ನಾಟಕದ ಮಣ್ಣಿನ ಗುಣ ಎಂದು ಬಣ್ಣಿಸಿದ ಮೋದಿಯವರು, ಈ ಮಣ್ಣು ತತ್ವಜ್ಞಾನ ಮತ್ತು ತಂತ್ರಜ್ಞಾನ ಎರಡರಲ್ಲೂ ಸಮೃದ್ಧವಾಗಿದೆ. ಇಲ್ಲಿ ದರ್ಶನದ ಆಳವೂ ಇದೆ, ಟೆಕ್ನಾಲಜಿಯ ಶಕ್ತಿಯೂ ಇದೆ ಎಂದರು.
ಆದಿಚುಂಚನಗಿರಿ ಮಠವು ಕಳೆದ ಎರಡು ಸಾವಿರ ವರ್ಷಗಳಿಂದ ಭಾರತದ ನೈತಿಕ ಮತ್ತು ಆಧ್ಯಾತಿಕ ಮೌಲ್ಯಗಳನ್ನು ಜೀವಂತವಾಗಿರಿಸಿರುವ ಸಾಕ್ಷಾತ್ ರೂಪ ಎಂದು ಹೇಳಿದರು.
ಬಾಲಗಂಗಾಧರನಾಥ ಶ್ರೀಗಳು ಕೇವಲ ಆಧ್ಯಾತಿಕ ಮಾರ್ಗದರ್ಶನಕ್ಕೆ ಸೀಮಿತವಾಗಿರಲಿಲ್ಲ. ಗ್ರಾಮೀಣ ಭಾಗದಿಂದ ಬಂದಿದ್ದರಿಂದ ಅವರಿಗೆ ಹಳ್ಳಿಯ ಯುವಕರ ಆಕಾಂಕ್ಷೆ ಮತ್ತು ಸವಾಲುಗಳ ಅರಿವಿತ್ತು. ಭಕ್ತಿ ಎಂದರೆ ಸಮಾಜದಿಂದ ದೂರ ಹೋಗುವುದಲ್ಲ, ಸಮಾಜದ ಜವಾಬ್ದಾರಿ ತೆಗೆದುಕೊಳ್ಳುವುದು ಎಂದು ಅವರು ತೋರಿಸಿಕೊಟ್ಟರು. ಬಡಮಕ್ಕಳಿಗೆ ಎಂಜಿನಿಯರಿಂಗ್, ಮೆಡಿಕಲ್ ಶಿಕ್ಷಣ ನೀಡುವ ಮೂಲಕ ಅವರು ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ ಎಂದು ಗುಣಗಾನ ಮಾಡಿದರು.
ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರನ್ನು ಸರಿಸಿದ ಮೋದಿ ಅವರು, ಅವರು ಶಾರೀರಿಕವಾಗಿ ನಮ ಜೊತೆ ಇಲ್ಲ ಅಷ್ಟೇ. ಆದರೆ ಅವರು ಇಲ್ಲಿ ಎಲ್ಲರ ಮನಸ್ಸಿನಲ್ಲೂ ಅಚ್ಚಳಿಯದೇ ಉಳಿದಿದ್ದಾರೆ ಎಂದು ಭಾವುಕರಾದರು.
ಇದೇ ವೇಳೆ ಪ್ರಧಾನಿ ಮೋದಿ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಜಂಟಿಯಾಗಿ ಸೌಂದರ್ಯ ಲಹರಿ ಮತ್ತು ಶಿವ ಮಹಿಮ್ನಾ ಸ್ತೋತ್ರಂ ಎಂಬ ಧಾರ್ಮಿಕ ಗ್ರಂಥವನ್ನು ಲೋಕಾರ್ಪಣೆ ಮಾಡಿದರು.ಪ್ರಧಾನಿಯವರಿಗೆ ರೇಷೆ ಶಾಲು, ಬೆಳ್ಳಿಯ ನವಿಲು ನೀಡಿ ಸನಾನಿಸಲಾಯಿತು.
ವೇದಿಕೆಯಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ.ನಿರ್ಮಲಾನಂದನಾಥ ಸ್ವಾಮೀಜಿ, ಗುಜರಾತ್‌ನ ರಾಜ್‌ಕೋಟ್‌ನ ಅರ್ಷ ವಿದ್ಯಾಮಂದಿರದ ಜಗದ್ಗುರು ಸ್ವಾಮಿ ಪರಮಾತಾನಂದ ಸರಸ್ವತಿ ಜೀ, ರಾಜ್ಯಪಾಲ ಥಾವರ್‌ಚಂದ್ ಗೆಹೋಟ್, ಮಾಜಿ ಪಧಾನಿ ಎಚ್.ಡಿ.ದೇವೇಗೌಡ, ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
