ಬೆಂಗಳೂರು,ಏ.15-ಆದಿಚುಂಚನಗಿರಿ ಮಹಾಸಂಸ್ಥಾನ ಮಠದ 71ನೇ ಪೀಠಾಧ್ಯಕ್ಷರಾಗಿದ್ದ ಭೈರವೈಕ್ಯ ಪರಮಪೂಜ್ಯ ಡಾ. ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಗೆ ಮರಣೋತ್ತರ ಭಾರತ ರತ್ನ ಘೋಷಿಸುವಂತೆ ಶಾಸಕರಾದ ದಿನೇಶ್ ಗೂಳಿಗೌಡ ಹಾಗೂ ಶರತ್ ಬಚ್ಚೇಗೌಡ ಅವರು ಮನವಿ ಮಾಡಿದ್ದಾರೆ.
ಈ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಶಾಸಕರು ಪತ್ರ ಬರೆದಿದ್ದಾರೆ.
ಮುನ್ನೂರು ವರ್ಷಗಳಲ್ಲಿ ಮಾಡಬಹುದಾದ ಮಹತ್ಕಾರ್ಯ ಗಳನ್ನು ಕೇವಲ ಮೂವತೂರು ವರ್ಷಗಳಲ್ಲಿ ಸಾಧಿಸಿದ ಯುಗ ಯೋಗಿ. ಅವರ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕೊಡುಗೆಗಳನ್ನು ಪರಿಗಣಿಸಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ನೀಡಬೇಕೆಂಬುದು ಕೋಟ್ಯಂತರ ಭಕ್ತರ ಹಾಗೂ ಕನ್ನಡಿಗರ ಆಶಯವಾಗಿದೆ.
ಶ್ರೀಗಳಿಗೆ ಭಾರತ ರತ್ನ ನೀಡುವಂತೆ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರುಗಳು ಗೌರವಾನ್ವಿತ ಪ್ರಧಾನ ಮಂತ್ರಿಗಳಿಗೆ ಮನವರಿಕೆ ಮಾಡಿಕೊಡಬೇಕು. ಶೀಘ್ರವಾಗಿ ಪ್ರಶಸ್ತಿ ಘೋಷಣೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.
