ಬೆಂಗಳೂರು: ನೈಜ ಜಗತ್ತಿನ ಸಮಸ್ಯೆಗಳಿಗೆ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು, ಪ್ರಮುಖ ಐಟಿ ಸಂಸ್ಥೆ ‘ಕಾಗ್ನಿಜೆಂಟ್’ ತನ್ನ ಪ್ರತಿಷ್ಠಿತ ‘ಟೆಕ್ನೋವರ್ಸ್ ಹ್ಯಾಕಥಾನ್ 2026’ಗೆ ಚಾಲನೆ ನೀಡಿದೆ.
ಈ ಹಿಂದೆ ಪ್ರಾದೇಶಿಕ ಮಟ್ಟಕ್ಕೆ ಸೀಮಿತವಾಗಿದ್ದ ಈ ಸ್ಪರ್ಧೆಯು, ತನ್ನ ಮೂರನೇ ಆವೃತ್ತಿಯಲ್ಲಿ ರಾಷ್ಟ್ರೀಯ ಮಟ್ಟಕ್ಕೇರಿದೆ. ಭಾರತದಾದ್ಯಂತ 400ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳಿಂದ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ 20,000ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಹ್ಯಾಕಥಾನ್‌ನಲ್ಲಿ ಪಾಲ್ಗೊಂಡು ತಮ್ಮ ತಾಂತ್ರಿಕ ಕೌಶಲ್ಯವನ್ನು ಪ್ರದರ್ಶಿಸಲಿದ್ದಾರೆ.
ನೈಜ ಜಗತ್ತಿನ ಸಮಸ್ಯೆಗಳಿಗೆ ಎಐ ಪರಿಹಾರ
ಕಾಗ್ನಿಜೆಂಟ್ ಇಂಡಿಯಾದ ಗ್ಲೋಬಲ್ ಆಪರೇಷನ್ಸ್ ಅಧ್ಯಕ್ಷ ಹಾಗೂ ಸಿಎಂಡಿ ರಾಜೇಶ್ ವಾರಿಯರ್ ಈ ಕುರಿತು ಮಾತನಾಡಿ, ಈ ಹ್ಯಾಕಥಾನ್ ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಜ್ಞಾನವನ್ನು ನೈಜ ಜಗತ್ತಿನ ಅನ್ವಯಿಕಗಳಿಗೆ ಅಪ್ಲಿಕೇಷನ್‌ಗಳಿಗೆ ಬಳಸುವ ಅಪೂರ್ವ ಅವಕಾಶವನ್ನು ನೀಡುತ್ತದೆ. ಸ್ಪರ್ಧಿಗಳು ಕಾಗ್ನಿಜೆಂಟ್‌ನ ತಜ್ಞರೊಂದಿಗೆ ನೇರವಾಗಿ ಸಂವಹನ ನಡೆಸಿ, ಉದ್ಯಮಗಳು ಹೊಸತನವನ್ನು ಹೇಗೆ ಅಳವಡಿಸಿಕೊಳ್ಳುತ್ತವೆ ಎಂಬುದನ್ನು ಕಲಿಯಲಿದ್ದಾರೆ. ಬ್ಯಾಂಕಿಂಗ್, ವಿಮೆ, ಆರೋಗ್ಯ, ಜೀವ ವಿಜ್ಞಾನ, ಚಿಲ್ಲರೆ ವ್ಯಾಪಾರ (ರೀಟೇಲ್), ಉತ್ಪಾದನೆ, ಸಂವಹನ, ಮಾಧ್ಯಮ ಮತ್ತು ತಂತ್ರಜ್ಞಾನ ಹಾಗೂ ಇಂಧನ ಕ್ಷೇತ್ರಗಳ ಸಮಸ್ಯೆಗಳಿಗೆ ಕೃತಕ ಬುದ್ಧಿಮತ್ತೆ ಬಳಸಿ ಪರಿಹಾರ ರೂಪಿಸುವುದು ಈ ಸ್ಪರ್ಧೆಯ ಪ್ರಮುಖ ಉದ್ದೇಶವಾಗಿದೆ. ಜೊತೆಗೆ, ಈ ಹ್ಯಾಕಥಾನ್‌ನಲ್ಲಿ ಶೇ.50ರಷ್ಟು ಮಹಿಳಾ ಭಾಗವಹಿಸುವಿಕೆಯನ್ನು ಕಡ್ಡಾಯಗೊಳಿಸಿದೆ. ಪ್ರತಿ ಕಾಲೇಜಿನಿಂದ ಎಷ್ಟು ತಂಡಗಳು ಬೇಕಾದರೂ ಭಾಗವಹಿಸಬಹುದು. ಆದರೆ, ನಾಲ್ಕು ಸದಸ್ಯರ ಪ್ರತಿಯೊಂದು ತಂಡದಲ್ಲಿ ಕನಿಷ್ಠ ಇಬ್ಬರು ಮಹಿಳಾ ವಿದ್ಯಾರ್ಥಿಗಳು ಇರುವುದು ಕಡ್ಡಾಯವಾಗಿದೆ.
ಮೇ ತಿಂಗಳಿನಲ್ಲಿ ಫಿನಾಲೆ
ಈ ಬೃಹತ್ ಹ್ಯಾಕಥಾನ್ ಪ್ರಕ್ರಿಯೆಗಳು ಮೇ ತಿಂಗಳಲ್ಲಿ ಮುಕ್ತಾಯಗೊಳ್ಳಲಿದ್ದು, ಪುಣೆಯಲ್ಲಿರುವ ಕಾಗ್ನಿಜೆಂಟ್ ಕ್ಯಾಂಪಸ್‌ನಲ್ಲಿ ನಡೆಯುವ ಅದ್ಧೂರಿ ಸಮಾರಂಭದಲ್ಲಿ ಅಗ್ರ ಮೂರು ತಂಡಗಳನ್ನು ವಿಜೇತರೆಂದು ಘೋಷಿಸಿ ಸನ್ಮಾನಿಸಲಾಗುತ್ತದೆ.
2030ರೊಳಗೆ 20 ಲಕ್ಷ ಜನರಿಗೆ ಕೌಶಲ್ಯ ತರಬೇತಿ
ಜನರೇಟಿವ್ ಎಐ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಜನರಿಗೆ ಕೌಶಲ್ಯ ಒದಗಿಸುವ ಉದ್ದೇಶದಿಂದ ಕಾಗ್ನಿಜೆಂಟ್ 2023 ರಲ್ಲಿ ‘ಸಿನಾಪ್ಸ್’ ಎಂಬ ಉಪಕ್ರಮವನ್ನು ಆರಂಭಿಸಿತ್ತು. ವಿಶ್ವಾದ್ಯಂತ 10 ಲಕ್ಷ ಜನರಿಗೆ ತರಬೇತಿ ನೀಡುವ ಗುರಿಯನ್ನು 2026ರ ಗುಡುವಿಗೂ ಮುನ್ನವೇ ಸಾಧಿಸಿರುವ ಸಂಸ್ಥೆ, ಇದೀಗ 2030ರ ಅಂತ್ಯದ ವೇಳೆಗೆ ಒಟ್ಟು 20 ಲಕ್ಷ ಜನರಿಗೆ ಕೌಶಲ್ಯ ತರಬೇತಿ ನೀಡುವ ಹೊಸ ಗುರಿಯನ್ನು ಹಾಕಿಕೊಂಡಿದೆ.
