ಬೆಂಗಳೂರು,ಏ.15- ಸಂಪುಟ ಪುನರ್ ರಚನೆಯಾಗಬೇಕೆಂದು ಹಠ ಹಿಡಿದಿದ್ದ ಹಿರಿಯ ಶಾಸಕರು ಇಂದು ಅಯೋಧ್ಯೆಗೆ ಭೇಟಿ ನೀಡಿದ್ದು ಶ್ರೀರಾಮನ ದರ್ಶನ ಪಡೆದಿದ್ದಾರೆ. ಹಿರಿಯ ಶಾಸಕ ಟಿ.ಬಿ.ಜಯಚಂದ್ರ, ಹಂಪನಗೌಡ ಬಾದರ್ಲಿ, ವೈ.ವಿ. ಪಾಟೀಲ್, ಜಿ.ಎಸ್.ಪಾಟೀಲ್, ಬಸವರಾಜ್ ಶಿವಣ್ಣನವರ್, ಬಿ. ಶಿವಣ್ಣ, ಡಿ.ಜಿ.ಶಾಂತನಗೌಡ, ಜಿ.ಟಿ.ಪಾಟೀಲ್, ಯಶ್ವಂತರಾಯಗೌಡ, ಕೆ.ಷಡಕ್ಷರಿ, ಅಶೋಕ್ ಪಟ್ಟಣ್, ರಾಘವೇಂದ್ರ ಹಿಟ್ನಾಳ್ ಸೇರಿದಂತೆ ಒಟ್ಟು 15 ಶಾಸಕರು ಅಯೋಧ್ಯೆಗೆ ಭೇಟಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಟಿ.ಬಿ.ಜಯಚಂದ್ರ ಅಯೋಧ್ಯೆಗೆ ಭೇಟಿ ನೀಡಬೇಕು. ಶ್ರೀರಾಮನ ದರ್ಶನ ಪಡೆಯಬೇಕು ಎಂಬುದು ತಮ ಜೀವಮಾನದ ಕನಸಾಗಿತ್ತು. ಅದು ಇಂದು ನನಸಾಗಿದೆ ಎಂದು ಹೇಳಿಕೊಂಡಿದ್ದಾರೆ.
ಅಯೋಧ್ಯೆಗೂ-ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ. ಬಾಲರಾಮನ ಪ್ರತಿಮೆಯನ್ನು ವಿನ್ಯಾಸಗೊಳಿಸಿದ್ದು, ಕರ್ನಾಟಕದ ಶಿಲ್ಪಿ. ಯೋಗಿರಾಜ್. ರಾಮಾಯಣದಲ್ಲಿ ರಾಮನ ಭಂಟ ಆಂಜನೇಯ ಹುಟ್ಟಿದ್ದು ಕಿಷ್ಕಿಂಧೆಯಲ್ಲಿ. ಹೀಗಾಗಿ ಕರ್ನಾಟಕ ಮತ್ತು ಅಯೋಧ್ಯೆ ನಡುವೆ ಉತ್ತಮ ಸಂಬಂಧಗಳಿವೆ ಎಂದು ಹೇಳಿದರು.
ದೆಹಲಿಯಲ್ಲಿ ವಾಸ್ತವ್ಯ: 20ಕ್ಕೂ ಹೆಚ್ಚು ಶಾಸಕರು ಭಾನುವಾರದಿಂದಲೂ ದೆಹಲಿಯಲ್ಲೇ ಬೀಡು ಬಿಟ್ಟಿದ್ದು, ಹೈಕಮಾಂಡ್‌ನ ನಾಯಕರೆಲ್ಲಾ ವಿವಿಧ ಚುನಾವಣೆಗಳ ಕಾರ್ಯದೊತ್ತಡದಲ್ಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಕರ್ನಾಟಕದವರೇ ಆಗಿದ್ದರಿಂದಾಗಿ ಹಿರಿಯ ಶಾಸಕರ ನಿಯೋಗಕ್ಕೆ ಶನಿವಾರವೇ ಸಮಯ ಕೊಟ್ಟು ಭೇಟಿ ಮಾಡಿದ್ದರು. ಆದರೆ ಈವರೆಗೂ ರಾಹುಲ್‌ಗಾಂಧಿ, ಕೆ.ಸಿ.ವೇಣುಗೋಪಾಲ್, ರಣದೀಪ್‌ಸಿಂಗ್ ಸುರ್ಜೇವಾಲ ಶಾಸಕರ ನಿಯೋಗವನ್ನು ಭೇಟಿ ಮಾಡಿಲ್ಲ.
ಮಲ್ಲಿಕಾರ್ಜುನ್ ಖರ್ಗೆಯವರಿಂದ ಸಂಪುಟ ಪುನರ್ ರಚನೆ ಭರವಸೆ ದೊರೆತಿದೆ. ಇದು ಒಂದು ಹಂತದಲ್ಲಿ ಹಿರಿಯ ಶಾಸಕರಿಗೆ ಸಂತಸ ತಂದಿದ್ದರೆ, ಮತ್ತೊಂದು ರೀತಿಯಲ್ಲಿ ಯಾರಿಗೆ ಅವಕಾಶ ಸಿಗುತ್ತದೆ ಎಂಬ ಗೊಂದಲ ಹೆಚ್ಚಾಗಿದೆ. ಸಚಿವ ಸಂಪುಟದಲ್ಲಿ ಈಗಾಗಲೇ ಅವಕಾಶ ಪಡೆದವರನ್ನು ಬದಲಾವಣೆ ಮಾಡಿ, ಹೊಸಬರಿಗೆ ಮತ್ತು ಯುವ ಉತ್ಸಾಹಿಗಳಿಗೆ ಅವಕಾಶ ನೀಡಬೇಕೆಂಬುದು ಹಿರಿಯ ಶಾಸಕರ ಅಭಿಪ್ರಾಯಗಳಾಗಿವೆ.
ಮಲ್ಲಿಕಾರ್ಜುನ್ ಖರ್ಗೆಯವರು ಸಂಪುಟ ಪುನರ್ ರಚನೆಯಾಗಲಿದೆ ಎಂದು ಹೇಳಿದ್ದಾರೆ. ಆದರೆ ರಾಹುಲ್‌ಗಾಂಧಿಯವರ ಕಡೆಯಿಂದ ಈವೆರಗೂ ಯಾವುದೇ ಸಂದೇಶ ತಲುಪಿಲ್ಲ. ಹೀಗಾಗಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿ, ರಾಹುಲ್‌ಗಾಂಧಿ ಅವರ ಅಭಿಪ್ರಾಯವನ್ನು ಪಡೆದುಕೊಳ್ಳಲು ಶಾಸಕರ ನಿಯೋಗ ಬಯಸಿದೆ. ಹೀಗಾಗಿ ದೆಹಲಿಯಲ್ಲೇ ಬೀಡುಬಿಟ್ಟು ವರಿಷ್ಠರ ಭೇಟಿಗಾಗಿ ಕಾದು ಕುಳಿತಿದ್ದಾರೆ.
