ಬೆಂಗಳೂರು, ಮೇ 9- ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಪತ್ರಗಳ ಮರು ಎಣಿಕೆಯ ವಿವಾದ ಈಗ ಧಾರ್ಮಿಕ ಆಯಾಮ ಪಡೆದುಕೊಂಡಿದ್ದು, 2023ರಲ್ಲಿ ನಡೆದಿದ್ದ ಮತ ಎಣಿಕೆಯಲ್ಲಿ ಯಾವುದೇ ಪಕ್ಷಪಾತ ಅಥವಾ ಲೋಪಗಳಾಗಿರಲಿಲ್ಲ ಎಂದು ಕಾಂಗ್ರೆಸ್ ಪಕ್ಷದಿಂದ ಮತ ಎಣಿಕೆಯ ಏಜೆಂಟ್ ಅಗಿದ್ದ ಸುಧೀರ್ಕುಮಾರ್ ಮುರೊಳ್ಳಿ ದೇವರ ಮುಂದೆ ಪ್ರಮಾಣ ಮಾಡಿದ್ದಾರೆ.
ಇಂದು ಬೆಳಗ್ಗೆ ಟಿ.ಡಿ.ರಾಜೇಗೌಡ ಹಾಗೂ ಪಕ್ಷದ ಇತರ ಮುಖಂಡರ ಜೊತೆಯಲ್ಲಿ ಶೃಂಗೇರಿ ಕ್ಷೇತ್ರದ ಕೊಪ್ಪದ ಅಧಿದೇವತೆ ವೀರಭದ್ರಸ್ವಾಮಿ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿ, ಪ್ರದಕ್ಷಿಣೆ ಬಳಿಕ ಪ್ರಮಾಣ ಮಾಡಿದ್ದಾರೆ.
2023ರ ಮೇ 13ರಂದು ನಡೆದ ಶೃಂಗೇರಿ ಕ್ಷೇತ್ರದ ಮತ ಎಣಿಕೆಯಲ್ಲಿ ಎಟಿಬಿಪಿಎಸ್, ಅಂಚೆ ಮತಪತ್ರ ಹಾಗೂ ಎಲೆಕ್ಟ್ರಾನಿಕ್ ಮತಪತ್ರ ಗಳು ಎಂಬ ಮೂರು ರೀತಿಯ ಮತಗಳ ಎಣಿಕೆ ಯಾಯಿತು. ಜೆಡಿಎಸ್ನ ಅಭ್ಯರ್ಥಿ ಸುಧಾಕರ್ ಶೆಟ್ಟಿ ಮತ್ತು ಅದೇ ಪಕ್ಷದ ಏಜೆಂಟ್ ಕಣಿವೆ ವಿನಯ್, ಬಿಜೆಪಿಯ ಏಜೆಂಟ್ ಬಿ.ಎಸ್.ಸತೀಶ್, ಕಾಂಗ್ರೆಸ್ ಏಜೆಂಟಾಗಿದ್ದ ತಾವು ಹಾಗೂ ಪಕ್ಷೇತರ ಅಭ್ಯರ್ಥಿಗಳು ಮತ್ತು ಅವರ ಏಜೆಂಟರಿಗೆ ಅಂದಿನ ಸಹಾಯಕ ಚುನಾವಣಾಧಿಕಾರಿಗಳು ಮತ ಪತ್ರಗಳನ್ನು ತೋರಿಸಿ ಆಯಾ ಆಭ್ಯರ್ಥಿಗಳ ಮತ ಬುಟ್ಟಿಗೆ ಹಾಕಿದ್ದರು.
ಆ ಸಂದರ್ಭದಲ್ಲಿ 279 ಮತಗಳು ಅಮಾನ್ಯಗೊಂಡಿದ್ದವು. ಕಾಂಗ್ರೆಸ್ಗೆ 201 ಮತಗಳ ಮುನ್ನಡೆಯಿದೆ ಎಂದು ಖಚಿತವಾದ ಬಳಿಕ ಟಿ.ಡಿ.ರಾಜೇಗೌಡ ಅವರು ಮತ ಎಣಿಕೆ ಕೇಂದ್ರದ ಒಳಗೆ ಬಂದರು ಎಂದು ವಿವರಿಸಿದರು.
ಮತ ಎಣಿಕೆ ಸಂದರ್ಭದಲ್ಲೇ ತಿರಸ್ಕೃತವಾದ 279 ಅಂಚೆ ಮತಗಳ ಮರು ಎಣಿಕೆಗೆ ಬಿಜೆಪಿಯ ಅಭ್ಯರ್ಥಿ ಡಿ.ಎನ್.ಜೀವರಾಜ್ ಮನವಿ ಮಾಡಿದ್ದರು. ಆದರೆ ಚುನಾವಣಾಧಿಕಾರಿಗಳು ಸಮತಿಸಲಿಲ್ಲ. ನಂತರ ಅವರು 19 ವಿವಾದಿತ ಅಂಶಗಳನ್ನು ಪ್ರಸ್ತಾಪಿಸಿ ಹೈಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯ 279 ಅಮಾನ್ಯಗೊಂಡ ಮತಗಳ ಮರು ಎಣಿಕೆಗೆ ನಿರ್ದೇಶನ ನೀಡಿತ್ತು. ಒಂದು ವೇಳೆ ನಾವು ತಪ್ಪು ಮಾಡಿದ್ದೇ ಆಗಿದ್ದರೆ, ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿ ಕಾಲಹರಣ ಮಾಡಬಹುದಿತ್ತು. ಆದರೆ ನಮಗೆ ಅಂತಹ ಯಾವ ಉದ್ದೇಶಗಳೂ ಇರಲಿಲ್ಲ. ಟಿ.ಡಿ.ರಾಜೇಗೌಡ ಅವರು 201 ಮತಗಳ ಅಂತರದಲ್ಲಿ ಪ್ರಾಮಾಣಿಕವಾಗಿ ಗೆಲುವು ಕಂಡಿದ್ದರು ಎಂದು ವಿವರಿಸಿದರು.
ಇತೀಚೆಗೆ ಮೇ 2 ರಂದು ನಡೆದ ಮರು ಮತ ಎಣಿಕೆಯಲ್ಲಿ 2023ರಲ್ಲಿ ತಿರಸ್ಕೃತಗೊಂಡಿದ್ದ 279 ಮತಗಳ ಪೈಕಿ 8 ಮತಗಳುಮಾನ್ಯಗೊಂಡಿದ್ದವು. ಅದರಲ್ಲೂ ರಾಜೇಗೌಡರಿಗೆ 3, ಜೀವರಾಜ್ ಅವರಿಗೆ 2 ಮತಗಳು ಮತ್ತು ಉಳಿದವು ಪಕ್ಷೇತರ ಅಭ್ಯರ್ಥಿಗಳಿಗೆ ಸಲ್ಲಿಕೆಯಾಗಿದ್ದವು. ಮರು ಮತ ಎಣಿಕೆಯಲ್ಲೂ ರಾಜೇಗೌಡ ಅವರು ಜೀವರಾಜ್ಗಿಂತ ಒಂದು ಮತ ಹೆಚ್ಚು ಪಡೆದಿದ್ದರು ಎಂದು ವಿವರಿಸಿದ್ದಾರೆ.
ಮುಂದುವರೆದ ಮತ ಎಣಿಕೆಯಲ್ಲಿ ಮೊದಲನೇ ಬಂಡಲ್ ಅನ್ನು ಬಿಚ್ಚಿದ್ದಾಗ 25 ಮತಗಳು, 2ನೇ ಬಂಡಲ್ನಲ್ಲಿ 170, 3ನೇ ಬಂಡಲ್ನಲ್ಲಿ 25, 4ನೇ ಬಂಡಲ್ನಲ್ಲಿ 7 ಮತಗಳು ಮಲ್ಟಿಪಲ್ ಎಂಟ್ರಿಯಾಗಿ ಸಾರಸಗಟಾಗಿ ಅಮಾನ್ಯಗೊಂಡಿವೆ. ಅಷ್ಟು ಬಂಡಲ್ಗಳು ಯಾವುದೇ ಸೀಲ್ಗಳಿಲ್ಲದೇ ಮುಕ್ತವಾಗಿದ್ದವು ಎಂದು ಸುಧೀರ್ಕುಮಾರ್ ಮುರೊಳ್ಳಿ ಪ್ರಮಾಣ ಮಾಡಿದ್ದಾರೆ.
2023ರಲ್ಲಿ ಟಿ.ಡಿ.ರಾಜೇಗೌಡ ಅವರ ಗೆಲುವ ಪ್ರಾಮಾಣಿಕವಾಗಿತ್ತು. ನಾವ್ಯಾರೂ ರಾಜೇಗೌಡ ಅವರಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಕೆಲಸ ಮಾಡಿರಲಿಲ್ಲ. ಆಗಿನ ಸಂದರ್ಭದಲ್ಲಿನ ಮತ ಎಣಿಕೆಯ ವೇಳೆ ಬಿಜೆಪಿಯ ಏಜೆಂಟ್ ಆಗಿದ್ದ ಬಿ.ಎಸ್.ಸತೀಶ್ ನಿನ್ನೆ ಮಂದರ್ಥಿಯಲ್ಲಿನ ತಾಯಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರಮಾಣ ಮಾಡಿ ಅಂಚೆಮತ ಪತ್ರಗಳು ಸರಿಯಾಗಿದ್ದವು ಎಂದು ದೃಢೀಕರಿಸಿದ್ದಾರೆ. ಉಳಿದ ಏಜೆಂಟರೂ ಮತ್ತು ಅಭ್ಯರ್ಥಿಗಳು ಇದೇ ರೀತಿ ಪ್ರಮಾಣ ಮಾಡಬೇಕೆಂದು ಸುಧೀರ್ಕುಮಾರ್ ಮುರೊಳ್ಳಿ ಮನವಿ ಮಾಡಿದ್ದಾರೆ. ಯಾರಾದರೂ ತಪ್ಪು ಮಾಡಿದ್ದರೆ, ಅನ್ಯಾಯ ಮಾಡಿದ್ದರೆ ದೇವರು ಅವರನ್ನು ಶಿಕ್ಷಿಸಲಿ ಎಂದು ಪ್ರಾರ್ಥಿಸಿದ್ದಾರೆ.
