ಬೆಂಗಳೂರು,ಮೇ9- ಕರ್ನಾಟಕ ರಾಜಕಾರಣದ ಬಿಜೆಪಿ ಪಾಲಿನ ಆಪತ್ಭಾಂದವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಾರ್ವಜನಿಕ ಜೀವನಕ್ಕೆ ಕಾಲಿಟ್ಟು 50 ವಸಂತಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಆಯೋಜಿಸಿದ್ದ ಬಿಎಸ್‌ವೈ ಅಭಿಮಾನೋತ್ಸವವು ಬಿಜೆಪಿಯ ಶಕ್ತಿ ಪ್ರದರ್ಶನದ ವೇದಿಕೆಯಾಗಿ ಪರಿಣಮಿಸಿತು.
ಮಧ್ಯ ಕರ್ನಾಟಕದ ಕೋಟೆನಾಡು ಚಿತ್ರದುರ್ಗದಲ್ಲಿ ನಡೆದ ಬಿಎಸ್‌ವೈ ಅಭಿಮಾನೋತ್ಸವ ಕೇವಲ ಅಭಿಮಾನಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಬದಲಿಗೆ ಮುಂಬರುವ 2028ರ ವಿಧಾನಸಭೆ ಚುನಾವಣೆಗೆ ಬಿಜೆಪಿ ಇಲ್ಲಿಂದಲೇ ರಣ ಕಹಳೆ ಮೊಳಗಿಸಿತು.
ಐತಿಹಾಸಿಕ ಸಮಾವೇಶವು ಕೇವಲ ವ್ಯಕ್ತಿಯೊಬ್ಬರ ಸಮಾರಂಭವಾಗಿ ಉಳಿಯದೆ ಬದಲಿಗೆ ವಿಧಾನಸಭೆ ಚುನಾವಣೆಯ ಸಮರಕ್ಕೆ ಕಮಲ ಪಡೆ ಹೂಡುತ್ತಿರುವ ರಣಕಹಳೆಯಾಗಿ ಗೋಚರಿಸಿತು.

ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಮಾನಿಗಳು ದಾವಣಗೆರೆಯಲ್ಲಿ ನಡೆಸಿದ್ದ ಸಿದ್ದರಾಮೋತ್ಸವ ಮಾದರಿಯಲ್ಲೇ ಯಡಿಯೂರಪ್ಪನವರ ಅಭಿಮಾನಿಗಳು ನಡೆಸಿದ ಬಿಎಸ್‌ವೈ ಅಭಿಮಾನೋತ್ಸವವು ಬಿಜೆಪಿಯ ಮುಂದುವರೆದ ಚುನಾವಣಾ ಕಾರ್ಯತಂತ್ರದ ಭಾಗವಾಗಿತ್ತು.
ಬೆಂಗಳೂರು, ಮೈಸೂರು, ತುಮಕೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಶಿವಮೊಗ್ಗ, ದಾವಣಗೆರೆ, ಬೆಳಗಾವಿ, ಬಳ್ಳಾರಿ, ರಾಯಚೂರು, ಕೊಪ್ಪಳ, ಕಲಬುರಗಿ ಸೇರಿದಂತೆ ನಾಡಿನ ಮೂಲೆ ಮೂಲೆಗಳಿಂದಲೂ ಆಗಮಿಸಿದ ಲಕ್ಷಾಂತರ ಕಾರ್ಯಕರ್ತರು ಬಿಜೆಪಿಗೆ ಜೈಕಾರ ಹಾಕುವ ಮೂಲಕ ರಾಜ್ಯದಲ್ಲಿ ಯಾವುದೇ ವೇಳೆ ಚುನಾವಣೆ ನಡೆದರೆ ಸಿದ್ದವಿದ್ದೇವೆ ಎಂಬ ಸಂದೇಶ ರವಾನಿಸಿದರು.
ಸಾಲು ಸಾಲು ಚುನಾವಣೆಗಳಿಂದ ಸೋತು ಕಂಗೆಟ್ಟಿದ್ದ ಬಿಜೆಪಿಗೆ ಬಿಎಸ್‌ವೈ ಅಭಿಮಾನೋತ್ಸವು ಒಂದು ರೀತಿ ತನ್ನ ಸಂಘಟನೆಯ ಬೇರುಗಳನ್ನು ವಿಸ್ತರಿಸಲು ಇದು ವೇದಿಕೆಯಾಗಿಯೂ ಪರಿಣಮಿಸಿತ್ತು.
ಪಕ್ಷದ ಬೇರುಗಳನ್ನು ಗಟ್ಟಿಗೊಳಿಸಿ ರಾಜ್ಯಾದ್ಯಂತ ತನ್ನದೇ ಆದ ಅಭಿಮಾನಿಗಳನ್ನು ಹೊಂದಿದ್ದ ಯಡಿಯೂಪ್ಪನವರಿಗೆ ಅಭಿಮಾನ ಸಲ್ಲಿಸುವ ನೆಪದಲ್ಲಿ ಬಿಜೆಪಿ ತನ್ನ ಸಂಘಟನಾ ಶಕ್ತಿಯನ್ನು ಪ್ರದರ್ಶಿಸಲು ಸಮರ್ಥವಾಗಿ ಬಳಸಿಕೊಂಡಿತು.

2028ರ ವಿಧಾನಸಭೆ ಚುನಾವಣೆಯಲ್ಲಿ ಒಗ್ಗಟ್ಟು ಹಾಗೂ ಸಾಮೂಹಿಕ ನಾಯಕತ್ವದಡಿ ಪಕ್ಷವನ್ನು ಅಧಿಕಾರಕ್ಕೆ ತರಲು ನಾಯಕರುಗಳು ಸ್ವಹಿತಾಸಕ್ತಿಯನ್ನು ಮರೆತು ಚುನಾವಣೆಗೆ ಸಿದ್ದರಾಗಿ ಎಂದು ಪರೋಕ್ಷವಾಗಿ ಕೇಂದ್ರ ಗೃಹಸಚಿವ ಅಮಿತ್ ಷಾ ಸಂದೇಶವನ್ನು ರವಾನಿಸಿದರು.
ಪಶ್ಚಿಮ ಬಂಗಾಳ, ಪಾಂಡೇಚರಿ ಮತ್ತು ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬೀಗುತ್ತಿರುವ ಬಿಜೆಪಿ, ದಕ್ಷಿಣ ಭಾರತದ ಹೆಬ್ಬಾಗಿಲು ಕರ್ನಾಟಕದ ಮೂಲಕವೇ ಮತ್ತೊಮೆ ಅಧಿಕಾರಕ್ಕೆ ಬರಲು ವೇದಿಕೆಯನ್ನು ಸಮರ್ಪಕವಾಗಿ ಬಳಸಿಕೊಂಡಿತು.
ಯಡಿಯೂರಪ್ಪ ಅವರ 50 ವರ್ಷಗಳ ಸಾರ್ಥಕ ರಾಜಕೀಯ ಬದುಕಿನ ಈ ಸಂಭ್ರಮವು ಕೇವಲ ವೈಯಕ್ತಿಕ ಸಾಧನೆಯಾಗದೆ ಹೊಸ ಮನ್ವಂತರದ ಮುನ್ನುಡಿ ಬರೆದಿದೆ ಎಂದು ಕಾರ್ಯಕರ್ತರು ಮಾತನಾಡುತ್ತಿದ್ದರು.
ಬಿಜೆಪಿಯ ಕಾರ್ಯಕರ್ತರಲ್ಲಿ ಸುಪ್ತವಾಗಿರುವ ಆವೇಶವನ್ನು ಬಡಿದೆಬ್ಬಿಸಿದ್ದು ಕೋಟೆ ನಾಡಿನಿಂದ ಕಾರ್ಯಕರ್ತರಿಗೆ ಹೊಸ ಹುಮಸ್ಸು, ಹುರುಪು ಬಂದಿದ್ದು ಬಿಜೆಪಿಯಲ್ಲಿ ನವಚೈತನ್ಯ ಮೂಡಿಸಿದೆ.
ವಿಜಯೇಂದ್ರ ಅವರಿಗೆ ಆನೆಬಲಸಮಾವೇಶದ ಕೇಂದ್ರಬಿಂದು ಆಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಈ ವೇದಿಕೆಯು ಒಂದು ಹೊಸ ಸಂದೇಶವನ್ನು ನೀಡಿದೆ.
ಪಕ್ಷಾತೀತವಾಗಿ ಹಾಗೂ ಜಾತ್ಯತೀತವಾಗಿ ಬೆಳೆದ ಸಮಾವೇಶವು ವಿಜಯೇಂದ್ರ ಅವರನ್ನು ಭವಿಷ್ಯದ ನಾಯಕ ಎಂದು ಬಿಂಬಿಸಲು ವೇದಿಕೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಯಿತು. ಅವರ ನಾಯಕತ್ವದ ಕುರಿತು ಪಕ್ಷದೊಳಗಿದ್ದ ಅಪಸ್ವರಕ್ಕೆ ಈ ಕಾರ್ಯಕ್ರಮವು ಪೂರ್ಣ ವಿರಾಮ ಹಾಕಿದಂತಾಗಿದೆ.
ಬಿಜೆಪಿಯ ಶಕ್ತಿಪ್ರದರ್ಶನವೆಂದೇ ಬಿಂಬಿತವಾಗಿದ್ದ ಸಮಾವೇಶವು ಅದ್ಧೂರಿಯಾಗಿ ನಡೆಯುವುದರೊಂದಿಗೆ ಚುನಾವಣೆಗೆ ನಾವೆಲ್ಲರೂ ಸಿದ್ದರಾಗಿದ್ದೇವೆ ಎಂಬ ಸಂದೇಶವನ್ನು ವಿಜಯೇಂದ್ರ ಎದುರಾಳಿಗಳಿಗೆ ನೀಡಿದರು.
