Homeರಾಜಕೀಯಕುಟುಕು ಕಾರ್ಯಾಚರಣೆ ವಿವಾದ : ಎಚ್‌ಡಿಕೆ ವಿರುದ್ಧ ತಿರುಗಿಬಿದ್ದ ಕಾಂಗ್ರೆಸ್ ನಾಯಕರು

ಕುಟುಕು ಕಾರ್ಯಾಚರಣೆ ವಿವಾದ : ಎಚ್‌ಡಿಕೆ ವಿರುದ್ಧ ತಿರುಗಿಬಿದ್ದ ಕಾಂಗ್ರೆಸ್ ನಾಯಕರು

ಬೆಂಗಳೂರು, ಅ.14- ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಕುಟುಕು ಕಾರ್ಯಾಚರಣೆಯ ವಿವಾದ ರಾಜ್ಯ ರಾಜಕಾರಣ ದಲ್ಲಿ ತೀವ್ರ ಸ್ವರೂಪ ಪಡೆದು ಕೊಂಡಿದ್ದು, ಕೇಂದ್ರ ಸಚಿವ ಹಾಗೂ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರ ಹೇಳಿಕೆಗಳಿಗೆ ಕಾಂಗ್ರೆಸ್‌‍ ನಾಯಕರು ತಿರುಗೇಟು ನೀಡುತ್ತಿದ್ದಾರೆ.

ಜಲಸಂಪನೂಲ ಸಚಿವ ಚಲುವರಾಯಸ್ವಾಮಿ, ಗೃಹ ಸಚಿವ ಪ್ರಿಯಾಂಕ್‌ ಖರ್ಗೆ, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌, ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸೇರಿದಂತೆ ಹಲವು ನಾಯಕರು ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದು ತೀವ್ರ ಬೇಸರ ವ್ಯಕ್ತ ಪಡಿಸಿದ್ದಾರೆ. ಕಾಂಗ್ರೆಸ್‌‍ ಶಾಸಕರು, ಕುಟುಕು ಕಾರ್ಯಾಚರಣೆಯ ಹಿಂದಿರುವವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಚಲುವರಾಯಸ್ವಾಮಿ, ಕುಟುಕು ಕಾರ್ಯಾಚರಣೆ ದೂರುಗಳನ್ನು ಕುಮಾರಸ್ವಾಮಿಯವರು ಕೇಂದ್ರ ಸರ್ಕಾರದಿಂದಲೇ ಸಿಬಿಐ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದ್ದಾರೆ.

ಗೃಹ ಸಚಿವ ಪ್ರಿಯಾಂಕ್‌ ಖರ್ಗೆ, ಈ ಹಿಂದೆ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಗಳ ಮೂಲಕ ರಾಜ್ಯ ಕಾಂಗ್ರೆಸ್‌‍ ಸರ್ಕಾರವನ್ನು ಗುರಿಯಾಗಿಸಲಾಗುತ್ತಿತ್ತು. ಇದೀಗ ಕುಟುಕು ಕಾರ್ಯಾಚರಣೆಯ ಹೆಸರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಗುರಿಯಾಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ಎಚ್‌.ಡಿ.ಕುಮಾರಸ್ವಾಮಿ ಅವರ ಸರ್ಕಾರವನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆದಿದ್ದ ಸಂದರ್ಭದಲ್ಲಿ ಬಿ.ಎಸ್‌‍. ಯಡಿಯೂರಪ್ಪ ಅವರಿಗೆ ಸಂಬಂಧಿಸಿದ ಧ್ವನಿಮುದ್ರಣ ಬಹಿರಂಗವಾಗಿತ್ತು. ಈ ವಿಚಾರ ವಿಧಾನಮಂಡಲದಲ್ಲಿಯೂ ಚರ್ಚೆಯಾಗಿತ್ತು. ಕರ್ನಾಟಕದ ಜನರಿಗೆ ಯಾರ ರಾಜಕೀಯ ಇತಿಹಾಸ ಏನು ಎಂಬುದು ತಿಳಿದಿದೆ ಎಂದು ಹೇಳಿದರು.

ವಿಡಿಯೊಗಳನ್ನು ತೋರಿಸಿ ಸಿದ್ದರಾಮಯ್ಯ ಅವರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಾಗಿದೆ ಎಂಬ ಕುಮಾರಸ್ವಾಮಿ ಅವರ ಆರೋಪಕ್ಕೆ ಪ್ರತಿಕ್ರಿಯಿಸುವ ಅಗತ್ಯ ಇಲ್ಲ. ಕಾಂಗ್ರೆಸ್‌‍ ಪಕ್ಷ ಕುಮಾರಸ್ವಾಮಿ ಅವರ ಪೊಳ್ಳು ಹೇಳಿಕೆಗಳ ಆಧಾರದ ಮೇಲೆ ನಡೆಯುವುದಿಲ್ಲ ಎಂದು ತಿರುಗೇಟು ನೀಡಿದರು.

ರಾಜ್ಯ ಸರ್ಕಾರದ ಸಚಿವರನ್ನು ಗುರಿಯಾಗಿಸಿಕೊಂಡು ಕುಟುಕು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂಬ ಆರೋಪಗಳ ಕುರಿತು ಮಾತನಾಡಿದ ಅವರು, ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಬಿಜೆಪಿ ನಾಯಕ ಆರ್‌. ಅಶೋಕ್‌ ಸೇರಿದಂತೆ ಹಲವು ನಾಯಕರು ಈ ವಿಚಾರವಾಗಿ ಪದೇಪದೇ ಹೇಳಿಕೆ ನೀಡುತ್ತಿದ್ದಾರೆ. ಈ ಕುರಿತು ಯಾರಿಗಾದರೂ ಮಾಹಿತಿ ಅಥವಾ ದಾಖಲೆಗಳಿದ್ದರೆ ದೂರು ನೀಡಲಿ. ಸಮರ್ಥ ಪೊಲೀಸ್‌‍ ವ್ಯವಸ್ಥೆಯ ಮೂಲಕ ತನಿಖೆ ನಡೆಸಿ ಸತ್ಯವನ್ನು ಹೊರತರುತ್ತೇವೆ ಎಂದು ಹೇಳಿದರು.
ಪ್ರಜ್ವಲ್‌ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೊಗಳನ್ನು ಕಾಂಗ್ರೆಸ್‌‍ನವರೇ ಸಿದ್ಧಪಡಿಸಿದ್ದಾರೆಯೇ ? ತಮ್ಮ ಕುಟುಂಬದ ಸದಸ್ಯರನ್ನು ಸರಿಯಾಗಿ ಬೆಳೆಸುವ ಜವಾಬ್ದಾರಿಯನ್ನು ನಿರ್ವಹಿಸದೆ ಇತರರ ಮೇಲೆ ಆರೋಪ ಹೊರಿಸುವುದು ಸರಿಯಲ್ಲ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌‍ ಸರ್ಕಾರ ಯಾರನ್ನೂ ವೈಯಕ್ತಿಕ ದ್ವೇಷದಿಂದ ಗುರಿಯಾಗಿಸಿಕೊಂಡಿಲ್ಲ. ಕುಮಾರಸ್ವಾಮಿ ಅವರು ಮಾತನಾಡುವಾಗ ತಮ್ಮ ಮಾತಿನ ಮೇಲೆ ಹಿಡಿತವಿಟ್ಟುಕೊಳ್ಳಬೇಕು ಎಂದು ಎಚ್ಚರಿಸಿದರು.
ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಕೂಡ ಕುಟುಕು ಕಾರ್ಯಾಚರಣೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಟುಕು ಕಾರ್ಯಾಚರಣೆ ಕೆಟ್ಟ ಚಾಳಿಯಾಗಿದ್ದು, ಯಾರೇ ನಡೆಸಿದರೂ ಅದನ್ನು ಒಪ್ಪಲು ಸಾಧ್ಯವಿಲ್ಲ. ರಾಜಕೀಯದಲ್ಲಿ ಇಂತಹ ವಿಧಾನಗಳನ್ನು ಅನುಸರಿಸಬಾರದು ಎಂದು ಹೇಳಿದರು.

ಸಿದ್ದರಾಮಯ್ಯ ಅವರು ದೇಶದಲ್ಲಿಯೇ ಅತ್ಯುತ್ತಮ ನಾಯಕರಲ್ಲಿ ಒಬ್ಬರಾಗಿದ್ದು, ಅವರ ವಕ್ತಿತ್ವಕ್ಕೆ ಧಕ್ಕೆ ತರುವ ಪ್ರಯತ್ನಗಳು ನಡೆಯಬಾರದು. ಹಣ ಗಳಿಸುವ ಉದ್ದೇಶದಿಂದಾಗಲಿ ಅಥವಾ ರಾಜಕೀಯ ಕಾರಣಗಳಿಗಾಗಲಿ ವ್ಯಕ್ತಿಗಳ ಚಾರಿತ್ರ್ಯವಧೆ ಮಾಡುವ ಪ್ರವೃತ್ತಿ ನಿಲ್ಲಬೇಕು. ಕುಟುಕು ಕಾರ್ಯಾಚರಣೆಯಂತಹ ದುರುಪಯೋಗದ ವಿಧಾನಗಳು ಸಂಪೂರ್ಣವಾಗಿ ಅಂತ್ಯಗೊಳ್ಳಬೇಕು ಎಂದು ಎಂ.ಬಿ. ಪಾಟೀಲ್‌ ಆಗ್ರಹಿಸಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕುಟುಕು ಕಾರ್ಯಾಚರಣೆಯ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಚಿವನಾಗಿ ಕೆಲಸ ಮಾಡಿದ್ದು, ಅವರು ತಮಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು ಎಂದು ಹೇಳಿದರು.
ತಮ ಮೂರು ವರ್ಷಗಳ ಆಡಳಿತಾವಧಿಯಲ್ಲಿ ಸಿದ್ದರಾಮಯ್ಯ ಅವರು 11 ಇಲಾಖೆಗಳ ಸಭೆ ಮಾತ್ರ ನಡೆಸಿದ್ದರು. ಉಳಿದ ಇಲಾಖೆಗಳ ಸಚಿವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು. ಇದರಿಂದ ಸಚಿವರು ತಮ ಇಲಾಖೆಗಳ ವ್ಯಾಪ್ತಿಯಲ್ಲಿ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಯಿತು ಎಂದು ತಿಳಿಸಿದರು. ಕುಟುಕು ಕಾರ್ಯಾಚರಣೆಯ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಉತ್ತರ ನೀಡಿದ್ದಾರೆ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು.

ಕೆಲವು ನಾಯಕರಿಗೆ ಬೆಳಗ್ಗೆ ಎದ್ದು ಮಾಧ್ಯಮಗಳ ಮುಂದೆ ಬಂದು ಸರ್ಕಾರವನ್ನು ಟೀಕಿಸುವುದೇ ಅಭ್ಯಾಸವಾಗಿದೆ. ಅಂತಹ ಹೇಳಿಕೆಗಳಿಗೆ ಪ್ರತಿಯೊಂದು ಸಂದರ್ಭದಲ್ಲಿಯೂ ಉತ್ತರ ನೀಡುವ ಅಗತ್ಯವಿಲ್ಲ ಎಂದು ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು.

ಶಾಸಕ ಅಶೋಕ್‌ ಪಟ್ಟಣ್‌ ಕೂಡ ಪ್ರಕರಣದ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಕುಟುಕು ಕಾರ್ಯಾಚರಣೆ ನಡೆಸಿದವರು ಯಾರು ಎಂಬುದು ಬಹಿರಂಗವಾಗಬೇಕು. ತನಿಖೆಯನ್ನು ಅಪರಾಧ ತನಿಖಾ ಇಲಾಖೆ ನಡೆಸುತ್ತದೆಯೇ ಅಥವಾ ಕೇಂದ್ರ ತನಿಖಾ ದಳಕ್ಕೆ ವಹಿಸಲಾಗುತ್ತದೆಯೇ ಎಂಬುದು ಸರ್ಕಾರದ ನಿರ್ಧಾರಕ್ಕೆ ಬಿಟ್ಟ ವಿಚಾರ. ಆದರೆ, ಇದರ ಹಿಂದೆ ಇರುವವರನ್ನು ಪತ್ತೆಹಚ್ಚಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಬೇಕು ಎಂದು ಹೇಳಿದರು.

ಮುಖ್ಯಮಂತ್ರಿ, ಸಚಿವರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದರೆ, ಅದು ಶಾಸಕರಿಗೂ ಅನ್ವಯಿಸುತ್ತದೆ. ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂಬ ಸಂದೇಶವನ್ನು ಸರ್ಕಾರ ನೀಡಿದೆ ಎಂದು ಅಶೋಕ್‌ ಪಟ್ಟಣ್‌ ತಿಳಿಸಿದರು.

ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಕುಟುಕು ಕಾರ್ಯಾಚರಣೆಯ ವಿವಾದದಲ್ಲಿ ಮಾಜಿ ಮುಖ್ಯಮಂತ್ರಿಯ ಹೆಸರು ಕೇಳಿಬಂದಿರುವುದು ನೋವಿನ ಸಂಗತಿ ಎಂದರು. ಇಂತಹ ಪ್ರಯತ್ನಗಳ ಮೂಲಕ ನಾಯಕರನ್ನು ನಿಷ್ಕ್ರಿಯಗೊಳಿಸುವುದು ಸರಿಯಲ್ಲ. ಸಿದ್ದರಾಮಯ್ಯ ಅವರು ಸಮರ್ಥರಾಗಿದ್ದು, ಇಂತಹ ಬೆಳವಣಿಗೆಗಳ ಬಗ್ಗೆ ಮೊದಲೇ ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಿದರು.

ಈ ಹಿಂದೆ ಕುಮಾರಸ್ವಾಮಿ ಅವರು ಪೆನ್‌ಡ್ರೈವ್‌ ತೋರಿಸಿದ್ದ ವಿಚಾರವನ್ನು ಪ್ರಸ್ತಾಪಿಸಿದ ಬೇಳೂರು ಗೋಪಾಲಕೃಷ್ಣ, ಆಗಲೇ ಅದರ ಕುರಿತು ಸಮಗ್ರ ತನಿಖೆ ನಡೆಸಬೇಕಿತ್ತು ಎಂದು ಅಭಿಪ್ರಾಯಪಟ್ಟರು.
ಈಗ ನಡೆಯುತ್ತಿರುವ ಬೆಳವಣಿಗೆಗಳ ಹಿಂದೆ ಪಿತೂರಿ ಇದೆ ಎಂಬ ಶಂಕೆ ವ್ಯಕ್ತಪಡಿಸಿದ ಅವರು, ಕುಮಾರಸ್ವಾಮಿ ಅವರ ಬಳಿ ದಾಖಲೆಗಳಿದ್ದರೆ ಅವುಗಳನ್ನು ಸರ್ಕಾರಕ್ಕೆ ಸಲ್ಲಿಸಲಿ. ಅಗತ್ಯವಿದ್ದರೆ ಸರ್ಕಾರ ತನಿಖೆ ನಡೆಸಲಿದೆ ಎಂದು ಸವಾಲು ಹಾಕಿದರು.

ಕುಮಾರಸ್ವಾಮಿ ಅವರು ಈ ಹಿಂದೆ ಪೆನ್‌ಡ್ರೈವ್‌ ವಿಚಾರವನ್ನು ಮುಂದಿಟ್ಟುಕೊಂಡಿದ್ದರು, ಈಗ ಕುಟುಕು ಕಾರ್ಯಾಚರಣೆಯ ವಿಚಾರವನ್ನು ಮುಂದಿಟ್ಟುಕೊಂಡಿದ್ದಾರೆ ಎಂದು ವ್‌ಯಂಗ್ಯವಾಡಿದ ಬೇಳೂರು ಗೋಪಾಲಕೃಷ್ಣ, ಪಕ್ಷವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡಬಾರದು ಎಂದು ಎಚ್ಚರಿಸಿದರು.

ಸಣ್ಣ ವಿಚಾರಗಳನ್ನು ದೊಡ್ಡ ವಿವಾದವನ್ನಾಗಿ ಮಾಡುವುದು ಸರಿಯಲ್ಲ. ವ್‌ಯಕ್ತಿಗಳ ಮಾನಹಾನಿಗೆ ಕಾರಣವಾಗುವ ಪ್ರಯತ್ನಗಳನ್ನು ಸಹಿಸಲು ಸಾಧ್ಯವಿಲ್ಲ. ಪ್ರಕರಣದ ಕುರಿತು ಮುಖ್ಯಮಂತ್ರಿ ಸುಮ್ಮನೆ ಕುಳಿತುಕೊಳ್ಳುವುದಿಲ್ಲ; ತನಿಖೆ ನಡೆಸಿ ಸತ್ಯವನ್ನು ಹೊರತರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

RELATED ARTICLES
spot_img

Latest News