ಬೆಂಗಳೂರು, ಫೆ.24- ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಸಿದ್ದರಾಮಯ್ಯ ಬಣ ಪಟ್ಟು ಹಿಡಿದಿರುವುದರಿಂದ ಬಜೆಟ್ ಮಂಡನೆಯ ಬಳಿಕ ನಾಯಕತ್ವ ಬದಲಾವಣೆಯ ಜಿದ್ದಾಜಿದ್ದಿಯೂ ಹೆಚ್ಚಾಗಲಿದೆ.
ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟು ನಾನಾ ರೀತಿಯ ಕಸರತ್ತುಗಳನ್ನು ನಡೆಸುತ್ತಿರುವ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪಕ್ಷದ ಸಾರಥ್ಯವನ್ನು ತಮಗೆ ವಹಿಸುವಂತೆ ಹೈಕಮಾಮಡ್ ಮುಂದೆ ಬೇಡಿಕೆ ಮಂಡಿಸಿದ್ದಾರೆ. ಇದು ಎರಡು ಬಣಗಳ ನಡುವಿನ ಜಿದ್ದಾಜಿದ್ದಿಯನ್ನು ಮತ್ತಷ್ಟು ಹೆಚ್ಚಿಸಿದೆ. ರಾಜ್ಯ ಸರ್ಕಾರದ ಬಜೆಟ್ ಮಂಡನೆಯ ಬಳಿಕ ರಾಜ್ಯ ರಾಜಕಾರಣ ಬೇರೆಯದೇ ರೀತಿಯ ಆಯಾಮ ಪಡೆದುಕೊಳ್ಳುವ ಸಾಧ್ಯತೆ ಇದೆ.
ಸಿದ್ದರಾಮಯ್ಯ ಅವರ ನಾಯಕತ್ವ ಅಭಾದಿತ ಎಂದು ಭಾವಿಸಿದ್ದವರಿಗೆ ಡಿ.ಕೆ.ಶಿವಕುಮಾರ್ ಬಂಡಾಯ ಬಿಸಿ ತುಪ್ಪವಾಗಿದೆ. ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿ, ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮ ಪಾಲನೆಯಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ ಪಟ್ಟು ಹಿಡಿದಿದೆ.
ಇದಕ್ಕೆ ನೇರಾತಿನೇರ ಟಕ್ಕರ್ ನೀಡುತ್ತಿರುವ ಡಿ.ಕೆ.ಶಿವಕುಮಾರ್ ಅವರು, 2023ರ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ದೆಹಲಿಯಲ್ಲಾಗಿರುವ ಒಪ್ಪಂದದಂತೆ ನಮಗೆ ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟು ಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದ ಸಚಿವ ಸತೀಶ್ ಜಾರಕಿಹೊಳಿ ಮಾಜಿ ಸಚಿವ ಕೆ.ಎನ್.ರಾಜಣ್ಣ ಮತ್ತಿಬ್ಬರು ಶಾಸಕರ ಜೊತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ನಡೆದ ಮಾತುಕತೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ತಮಗೆ ಬಿಟ್ಟು ಕೊಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
2028ರ ವಿಧಾನಸಭೆ ಚುನಾವಣೆಯ ಚುನಾವಣೆಯ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಸತೀಶ್ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷರಾಗುವ ಮೂಲಕ ಮುಖ್ಯಮಂತ್ರಿ ಹುದ್ದೆಗೆ ಹತ್ತಿರವಾಗುವ ದೂರಾಲೋಚನೆ ಹೊಂದಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಏಕಾಏಕಿ ಪಕ್ಷದ ಅಧ್ಯಕ್ಷ ಸ್ಥಾನ ಕೇಳಿದರೆ ನಕಾರಾತಕ ಅಭಿಪ್ರಾಯಗಳು ಸೃಷ್ಟಿಯಾಗಬಹುದು ಅಥವಾ ಆಗ ಬೇರೆ ಯಾರೋ ಪಕ್ಷದ ಅಧ್ಯಕ್ಷರಾಗಿದ್ದರೆ ಸಿಎಂ ಹುದ್ದೆಗೆ ಪೈಪೋಟಿ ಹೆಚ್ಚಬಹುದು ಎಂಬ ಕಾರಣಕ್ಕೆ ಈಗೀನಿಂದಲೇ ತಾಲೀಮು ಆರಂಭಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ತಮಗೆ ವಹಿಸಿದರೆ ಮುಂದೆ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿಕೊಂಡು ಬರುವುದಾಗಿ ಭರವಸೆ ನೀಡಿದ್ದಾರೆ. ಡಿ.ಕೆ.ಶಿವಕುಮಾರ್ 2023ರಿಂದ ಉಪಮುಖ್ಯಮಂತ್ರಿ ಹುದ್ದೆ ಹಾಗೂ ಪಕ್ಷದ ಅಧ್ಯಕ್ಷ ಸ್ಥಾನ ಎರಡನ್ನು ನಿಭಾಯಿಸುತ್ತಿದ್ದಾರೆ. ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮದ ಪ್ರಕಾರ ಎರಡರಲ್ಲಿ ಒಂದು ಹುದ್ದೆಯನ್ನು ಮಾತ್ರ ಡಿ.ಕೆ.ಶಿವಕುಮಾರ್ ನಿಭಾಯಿಸಬೇಕು. ಮೂರು ವರ್ಷಗಳಿಂದಲೂ ಎರಡು ಹುದ್ದೆಗಳಲ್ಲಿ ಕಾರುಬಾರು ನಡೆಸುತ್ತಿದ್ದಾರೆ.
ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿ ಮಾಡಿ, ಇಲ್ಲವೇ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಬೇರೆಯವರಿಗೆ ಬಿಟ್ಟುಕೊಡಿ ಎಂದು ಕೆ.ಎನ್.ರಾಜಣ್ಣ ಹೈಕಮಾಂಡ್ ಮುಂದೆ ಪ್ರತಿಪಾದಿಸಿದ್ದಾರೆ. ಜೊತೆಗೆ ತಮಗೆ ಮತ್ತೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಎಐಸಿಸಿ ಅಧ್ಯಕ್ಷರು ನಿಯೋಗ ಅಭಿಪ್ರಾಯ ಕೇಳಿದ ಬಳಿಕ ರಾಜ್ಯದಲ್ಲಿ ಅನಗತ್ಯವಾಗಿ ಗೊಂದಲ ಸೃಷ್ಟಿಸಲು ಅವಕಾಶ ನೀಡಬೇಡಿ. ಯಾರಿಗೆ ಯಾವ ಹುದ್ದೆ ನೀಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ಪಕ್ಷವಹಿಸಿದ ಜವಾಬ್ದಾರಿಯನ್ನು ನಿಭಾಯಿಸುವ ಕಡೆಗೆ ಗಮನ ಕೊಡಿ ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ದೆಹಲಿಯಲ್ಲಿ ನಡೆದ ಮಾತುಕತೆಯ ಮಾಹಿತಿ ಪಡೆದಿರುವ ಡಿ.ಕೆ. ಶಿವಕುಮಾರ್ ಬಣ ಅಸಮಾಧಾನದಿಂದ ಕುದಿಯಲಾರಂಭಿಸಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿರುವವರು ಮತ್ತು ಸಿದ್ದರಾಮಯ್ಯ ಅವರ ಪರವಾಗಿ ವಾದಿಸುತ್ತಿರುವ ಬಹುತೇಕ ನಾಯಕರು ವಲಸಿಗರಾಗಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಬಂದ ಅತ್ಯಲ್ಪ ಸಮಯದಲ್ಲೇ ಸಚಿವ ಸ್ಥಾನ ಸೇರಿದಂತೆ ಪ್ರಮುಖ ಹುದ್ದೆಗಳನ್ನು ಅನುಭವಿಸಿದ್ದಾರೆ. ವಲಸಿಗರಿಗೆ ಮಣೆ ಹಾಕುತ್ತಾ ಹೋದರೆ ಪಕ್ಷ ನಿಷ್ಠರಿಗೆ ವಿಶ್ವಾಸ ಕುಗ್ಗಲಿದೆ ಎಂಬ ಆತಂಕವನ್ನು ಡಿ.ಕೆ.ಶಿವಕುಮಾರ್ ಬಣ ವ್ಯಕ್ತ ಪಡಿಸಿದೆ.
ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಲ್ಲಿ ಎಂಟು ವರ್ಷ ಪೂರೈಸಿದ್ದಾರೆ. ಪಕ್ಷ ಸಂಘಟಿಸುವ ಶ್ರಮದಾಯಕ ಜವಾಬ್ದಾರಿಯನ್ನು ಯಾವತ್ತೂ ತೆಗೆದುಕೊಂಡಿಲ್ಲ. ಡಿಕೆ ಶಿವಕುಮಾರ್ ಅವರ ಅಧಿಕಾರ ಅವಧಿಯನ್ನು ಲೆಕ್ಕ ಹಾಕಲಾಗುತ್ತಿದೆ. ಕಾಂಗ್ರೆಸ್ ಪಕ್ಷವನ್ನು ಸೋಲಿಸುತ್ತೇನೆ ಎಂದು ಬಹಿರಂಗವಾಗಿ ಹೇಳಿಕೆ ನೀಡುವ ರಾಜಣ್ಣಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಡ ಹಾಕಲಾಗುತ್ತಿದೆ ಎಂಬ ಅಸಮಾಧಾನ ಕೇಳಿ ಬರುತ್ತಿವೆ.
ರಾಜ್ಯ ಬಜೆಟ್ ಮಂಡನೆ ಬಳಿಕ ನಾಯಕತ್ವ ಬದಲಾವಣೆಯಾಗಲೇಬೇಕು ಎಂದು ಡಿ.ಕೆ.ಶಿವಕುಮಾರ್ ಪಟ್ಟು ಹಿಡಿಯುವ ಸಾಧ್ಯತೆ ಇದೆ. ಇದು ಬಹಿರಂಗವಾದ ರಾಜಕೀಯ ಸಮರಕ್ಕೆ ಹಾದಿ ಮಾಡಿಕೊಡಲಿದೆ ಎಂಬ ಅಂದಾಜುಗಳಿವೆ.
