Thursday, November 21, 2024
Homeರಾಜ್ಯಚುನಾವಣೆ ಘೋಷಣೆ ಬಳಿಕ ನಾಳೆ ಮೊದಲ ಬಾರಿಗೆ ರಾಜ್ಯಕ್ಕೆ ರಾಹುಲ್‍ ಆಗಮನ

ಚುನಾವಣೆ ಘೋಷಣೆ ಬಳಿಕ ನಾಳೆ ಮೊದಲ ಬಾರಿಗೆ ರಾಜ್ಯಕ್ಕೆ ರಾಹುಲ್‍ ಆಗಮನ

ಬೆಂಗಳೂರು,ಏ.16- ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ರಾಹುಲ್‍ಗಾಂಧಿ ನಾಳೆ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ.

ಮಂಡ್ಯ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡುವ ರಾಹುಲ್‍ಗಾಂಧಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಲಿದ್ದಾರೆ.

ಈ ಹಿಂದೆ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ರಾಹುಲ್‍ಗಾಂಧಿ ಹಲವು ಬಾರಿ ರಾಜ್ಯಪ್ರವಾಸ ಕೈಗೊಂಡಿದ್ದರು. ಅದಕ್ಕೂ ಮೊದಲು ಭಾರತ್ ಜೋಡೊ ಯಾತ್ರೆ ಮೂಲಕ ರಾಜ್ಯದ ಚಾಮರಾಜನಗರ, ಮೈಸೂರು, ತುಮಕೂರು, ಬಳ್ಳಾರಿ, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರವಾಸ ನಡೆಸಿದರು.

ಈ ನಡುವೆ ಹಲವು ಬಾರಿ ರಾಜ್ಯಕ್ಕೆ ಭೇಟಿ ನೀಡಿದ್ದರಾದರೂ ಗಮನ ಸೆಳೆಯುವಂಥ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿಲ್ಲ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಹುಲ್‍ಗಾಂಧಿಯವರ ಪ್ರವಾಸ ಕಾಂಗ್ರೆಸ್‍ನ ಉತ್ಸಾಹವನ್ನು ಹೆಚ್ಚಿಸಿದೆ.

2019 ರ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದಲ್ಲಿ ರಾಹುಲ್‍ಗಾಂಧಿ ಮಾಡಿದ್ದ ಭಾಷಣ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಅದನ್ನೇ ಆಧಾರವಾಗಿಟ್ಟುಕೊಂಡು ಬಿಜೆಪಿ ನಾಯಕರು ಕೋರ್ಟ್ ಮೆಟ್ಟಿಲೇರಿದ್ದರು. ಕೊನೆಗೆ ರಾಹುಲ್‍ಗಾಂಧಿಯವರಿಗೆ 2 ವರ್ಷ ಶಿಕ್ಷೆಯಾಗಿದ್ದಲ್ಲದೆ, ಸಂಸತ್ ಸದಸ್ಯ ಸ್ಥಾನ ಕೂಡ ಅನೂರ್ಜಿತಗೊಂಡಿತ್ತು. ಸುದೀರ್ಘ ಕಾನೂನಿನ ಹೋರಾಟದ ಬಳಿಕ ಗುಜರಾತ್‍ನ ಅಧೀನ ನ್ಯಾಯಾಲಯದ ತೀರ್ಪಿನಿಂದ ರಾಹುಲ್‍ಗಾಂಧಿ ಸುಪ್ರೀಂಕೋರ್ಟ್ ಮೂಲಕ ವಿನಾಯಿತಿ ಪಡೆದಿದ್ದಾರೆ.

ನಾಳೆ ರಾಜ್ಯಕ್ಕೆ ಆಗಮಿಸುತ್ತಿರುವ ರಾಹುಲ್‍ಗಾಂಧಿ ಪ್ರವಾಸ ತೀವ್ರ ಕುತೂಹಲ ಕೆರಳಿಸಿದೆ. ಮೊನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸಿ 4 ಲೋಕಸಭಾ ಕ್ಷೇತ್ರಗಳ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದರು. ಅದಕ್ಕೂ ಮೊದಲು ಕಲಬುರಗಿಯಲ್ಲೂ ಪ್ರಧಾನಿ ಭಾಷಣ ಮಾಡಿದ್ದರು.

ರಾಹುಲ್‍ಗಾಂಧಿ ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಎರಡು ಕಾರ್ಯಕ್ರಮಗಳಲ್ಲಿ ಲಕ್ಷಾಂತರ ಜನರನ್ನು ಸೇರಿಸಲು ಕಾಂಗ್ರೆಸ್ ನಾಯಕರು ತಯಾರಿ ಮಾಡಿಕೊಂಡಿದ್ದಾರೆ.

RELATED ARTICLES

Latest News