ಬೆಂಗಳೂರು,ಮೇ.16- ಮಳೆಗಾಲದಲ್ಲಿ ಅನಾಹುತ ಸಂಭವಿಸಿದ ಸಂದರ್ಭದಲ್ಲಿ ನಿರ್ದಾಕ್ಷಿಣ್ಯವಾಗಿ ರಾಜಕಾಲುವೆ ಒತ್ತುವರಿ ತೆರವು ಮಾಡುವುದಾಗಿ ಬೊಬ್ಬೆ ಹೊಡೆಯುವ ಅಧಿಕಾರಿಗಳು ನಂತರ ತೆಪ್ಪಗಾಗುವುದರಿಂದ ಒತ್ತುವರಿ ಕಾರ್ಯ ನಿರಂತರವಾಗಿ ಮುಂದುವರೆದುಕೊಂಡು ಬರುತ್ತಿದೆ.
ಅಧಿಕಾರಿಗಳ ಈ ಬೆಜವಬ್ದಾರಿತನವನ್ನೇ ಬಂಡವಾಳ ಮಾಡಿಕೊಂಡಿರುವ ಭೂಗಳ್ಳರು ರಾಜಕಾಲುವೆ ಒತ್ತುವರಿ ಕಾರ್ಯವನ್ನು ಮುಂದುವರೆಸಿದ್ದಾರೆ. ಹೀಗಾಗಿ ಕಳೆದ ಎಂಟು ತಿಂಗಳಲ್ಲಿ 1134 ಕಡೆಗಳಲ್ಲಿ ರಾಜಕಾಲುವೆ ಒತ್ತುವರಿ ಮಾಡಲಾಗಿದೆ.ನಗರದಲ್ಲಿರುವ 860 ಕಿ.ಮೀ ಉದ್ದದ ರಾಜಕಾಲುವೆಯಲ್ಲಿ ಈಗಾಗಲೇ 829 ಕಡೆಗಳಲ್ಲಿ ಭೂಗಳ್ಳರು ಒತ್ತುವರಿ ಮಾಡಿಕೊಂಡಿದ್ದಾರೆ.ಈಗ ಮತ್ತೆ ಕಳೆದ 8 ತಿಂಗಳಿನಲ್ಲಿ 1134 ಕಡೆ ರಾಜಕಾಲುವೆ ಒತ್ತುವರಿ ಮಾಡಲಾಗಿದೆ.
ಸದ್ಯ ನಗರದಲ್ಲಿ ಮಳೆಯಾಗುತ್ತಿರುವುದರಿಂದ ಭಾರಿ ಮಳೆಯಾದರೆ ನಗರದಲ್ಲಿ ಮತ್ತೆ ಮಳೆ ಅನಾಹುತ ನಡೆಯುವುದಂತೂ ಸತ್ಯ ಹೀಗಿದ್ದರೂ ಅಧಿಕಾರಿಗಳು ಮಾತ್ರ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.
ಕಳೆದ ವರ್ಷದ ಮಳೆಗಾಲದಲ್ಲಿ ರಾಜಕಾಲುವೆ ಉಕ್ಕಿ ಹರಿದು ಉಂಟು ಮಾಡಿದ್ದ ಅನಾಹುತಗಳು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದವೂ ಈಗ ಮತ್ತೆ ಮಳೆಯಾದರೆ ಹಿಂದಿನ ವರ್ಷದ ಅನಾಹುತ ಮರುಕಳಿಸುವುದಂತೂ ಸತ್ಯ.ಎಲ್ಲೆಲ್ಲಿ ಒತ್ತುವರಿ; ಹೊಸದಾಗಿ ಮಾಡಿರೋ ಒತ್ತುವರಿಯಲ್ಲಿ ಯಲಹಂಕ ವಲಯ ಮೊದಲ ಸ್ಥಾನದಲ್ಲಿ ಇದೆ..
ಪೂರ್ವ ವಲಯದಲ್ಲಿ 24, ಪಶ್ಚಿಮ 74, ದಕ್ಷಿಣ 51, ಕೋರಮಂಗಲ ಕಣಿವೆ 110, ಯಲಹಂಕ 308, ಮಹಾದೇವಪುರ 75, ಬೊಮನಹಳ್ಳಿ 175, ಅರ್ ಅರ್ ನಗರ 71, ದಾಸರಹಳ್ಳಿ 246 ಸೇರಿದಂತೆ ನಗರದಲ್ಲಿ ಹೊಸದಾಗಿ 1134 ಕಡೆಗಳಲ್ಲಿ ರಾಜಕಾಲುವೆ ಒತ್ತುವರಿಯಾಗಿರುವುದು ಕಂಡು ಬಂದಿದೆ.