Homeಕ್ರೀಡಾ ಸುದ್ದಿಭಾರತಕ್ಕೆ ಮರು ಪ್ರವೇಶ ಪಡೆಯಲಿದೆ ಫಾರ್ಮುಲಾ-1 ರೇಸ್‌‍

ಭಾರತಕ್ಕೆ ಮರು ಪ್ರವೇಶ ಪಡೆಯಲಿದೆ ಫಾರ್ಮುಲಾ-1 ರೇಸ್‌‍

ಸಿಂಗಾಪುರ, ಅ.13 (ಪಿಟಿಐ): ಫಾರ್ಮುಲಾ 1 ರೇಸ್‌‍ ಕ್ಯಾಲೆಂಡರ್‌ಗೆ ಭಾರತದ ಮರುಪ್ರವೇಶದ ಕುರಿತು ನಿಧಾನವಾಗಿ ಚಾಲನೆ ಸಿಗುತ್ತಿರುವ ನಡುವೆಯೇ, ಪ್ರಣವ್‌ ಅದಾನಿ ಅವರು ಸಿಂಗಾಪುರ ಗ್ರ್ಯಾಂಡ್‌ ಪ್ರಿಕ್ಸ್ ನಲ್ಲಿ ಪಾಲ್ಗೊಂಡಿರುವುದು ಸಾಕಷ್ಟು ಗಮನ ಸೆಳೆದಿದೆ. ಪ್ರಣವ್‌ ಅವರು ವೈಯಕ್ತಿಕ ನೆಲೆಯಲ್ಲಿ ಸಿಂಗಾಪುರ ಜಿಪಿ ಪ್ಯಾಡಾಕ್‌ನಲ್ಲಿ ಉಪಸ್ಥಿತರಿದ್ದರು ಮತ್ತು ನಾಲ್ಕು ಚಕ್ರದ ರೇಸಿಂಗ್‌ನ ಜಾಗತಿಕ ಆಡಳಿತ ಮಂಡಳಿಯಾದ ಎಫ್‌ಐಎ ಅವರ ಅತಿಥಿಯಾಗಿದ್ದರು ಎಂದು ಪಿಟಿಐಗೆ ತಿಳಿದುಬಂದಿದೆ.

ಅದಾನಿ ಸಮೂಹವು ಸಾಲದ ಸುಳಿಯಲ್ಲಿ ಸಿಲುಕಿದ್ದ ಜೇಪಿ ಸಮೂಹವನ್ನು ಸ್ವಾಧೀನಪಡಿಸಿಕೊಂಡಿದೆ. ಈ ಒಪ್ಪಂದವು ಬುದ್ಧ್ ಇಂಟರ್ನ್ಯಾಷನಲ್‌ ಸರ್ಕ್‌ಯೂಟ್‌ ಅನ್ನು ಸಹ ಒಳಗೊಂಡಿದೆ; ತೆರಿಗೆ ಮತ್ತು ಆರ್ಥಿಕ ಸಮಸ್ಯೆಗಳಿಂದಾಗಿ ಸ್ಥಗಿತಗೊಳ್ಳುವ ಮೊದಲು, 2011 ಮತ್ತು 2013ರ ನಡುವೆ ಇಲ್ಲಿ ಫಾರ್ಮುಲಾ 1 ರೇಸ್‌‍ ನಡೆದಿತ್ತು.

ಕರಣ್‌ ಅದಾನಿ ಅವರು ಫಾರ್ಮುಲಾ 1 ಅನ್ನು ಭಾರತಕ್ಕೆ ತರುವ ಬಯಕೆಯನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದಾರೆ. ಭಾರತ ಸರ್ಕಾರವೂ ಸಹ ಈ ಪ್ರಮುಖ ಕ್ರೀಡಾಕೂಟವನ್ನು ಆಯೋಜಿಸಲು ಆಸಕ್ತಿ ಹೊಂದಿದ್ದು, ಇತ್ತೀಚೆಗಷ್ಟೇ ಇದರ ಪುನರುಜ್ಜೀವನಕ್ಕಾಗಿ ಕಾರ್ಯಪಡೆಯೊಂದನ್ನು ರಚಿಸಿದೆ. ರೇಸ್‌‍ನ ಮರುಆರಂಭಕ್ಕೆ ಯಾವುದೇ ನಿರ್ದಿಷ್ಟ ಸಮಯದ ಮಿತಿಯನ್ನು ನಿಗದಿಪಡಿಸಿಲ್ಲವಾದರೂ, ಅದಾನಿ ಸಮೂಹ ಮತ್ತು ಫಾರ್ಮುಲಾ ಒನ್‌ ಮ್ಯಾನೇಜ್‌ಮೆಂಟ್‌‍ ಈ ವಿಷಯದ ಕುರಿತು ಪ್ರಾಥಮಿಕ ಹಂತದ ಚರ್ಚೆಗಳನ್ನು ನಡೆಸಿವೆ.

ವಾಸ್ತವವಾಗಿ, ಫಾರ್ಮುಲಾ 1 ಸಿಇಒ ಸ್ಟೆಫಾನೊ ಡೊಮೆನಿಕಾಲಿ ಅವರು, ಈ ಕ್ರೀಡೆಯ ಬಗ್ಗೆ ಸಾಕಷ್ಟು ಜಾಗೃತಿ ಮೂಡಿದ ನಂತರ ಸೂಕ್ತ ಸಮಯದಲ್ಲಿ 150 ಕೋಟಿ ಜನಸಂಖ್ಯೆಯುಳ್ಳ ದೇಶದಲ್ಲಿ ರೇಸ್‌‍ ನಡೆಸುವ ಬಯಕೆಯನ್ನು ಹಲವು ಬಾರಿ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಪ್ರಣವ್‌ ಅವರು ವೈಯಕ್ತಿಕ ನೆಲೆಯಲ್ಲಾದರೂ ಎಫ್‌ಐಎ ಅಧಿಕಾರಿಗಳನ್ನು ಭೇಟಿಯಾಗಿರುವುದು ಕುತೂಹಲ ಕೆರಳಿಸಿದೆ. ಲ್ಯಾಂಡೊ ನಾರಿಸ್‌‍ ನೇತೃತ್ವದ ಚಾಲಕರು ಮತ್ತು ತಂಡದ ಮುಖ್ಯಸ್ಥರಂತಹ ಪ್ಯಾಡಾಕ್‌ನಲ್ಲಿರುವ ಇತರ ಪ್ರಮುಖರು ಕೂಡ ಭಾರತದಲ್ಲಿ ಮತ್ತೆ ರೇಸ್‌‍ ನಡೆಸಲು ಉತ್ಸುಕರಾಗಿದ್ದಾರೆ.

ಭಾರತದಲ್ಲಿ ನನಗೆ ಸಾಕಷ್ಟು ಅಭಿಮಾನಿಗಳಿದ್ದಾರೆ ಎಂಬುದು ನನಗೆ ತಿಳಿದಿದೆ. ಅಲ್ಲದೆ, ಭಾರತೀಯ ಚಾಲಕ ಮತ್ತು ನನ್ನ ಅತ್ಯುತ್ತಮ ಸ್ನೇಹಿತರಲ್ಲಿ ಒಬ್ಬರಾದ ಜೆಹಾನ್‌ (ದಾರುವಾಲಾ) ಹಲವು ವರ್ಷಗಳ ಕಾಲ ನನ್ನ ತಂಡದ ಸಹ ಆಟಗಾರರಾಗಿದ್ದದ್ದು ನನಗೆ ನೆನಪಿದೆ.ನಾನು ಇಲ್ಲಿಯವರೆಗೆ ಭಾರತಕ್ಕೆ ಭೇಟಿ ನೀಡಿಲ್ಲ, ಆದ್ದರಿಂದ ಅಲ್ಲಿಗೆ ಹೋಗಿ ಆ ಅನುಭವವನ್ನು ಪಡೆಯಲು ನಾನು ಬಯಸುತ್ತೇನೆ. ಜೊತೆಗೆ ಅಲ್ಲಿ ರೇಸ್‌‍ನಲ್ಲಿ ಭಾಗವಹಿಸಲು ಕೂಡ ಇಷ್ಟಪಡುತ್ತೇನೆ, ಏಕೆಂದರೆ ಅಲ್ಲಿನ ಅಭಿಮಾನಿಗಳಿಗೆ ಈ ಕ್ರೀಡೆಯ ಬಗ್ಗೆ ಅಪಾರ ಪ್ರೀತಿಯಿದೆ ಎಂಬುದು ನನಗೆ ಖಚಿತವಾಗಿದೆ ಎಂದು ಸಿಂಗಾಪುರ ಗ್ರ್ಯಾಂಡ್‌ ಪ್ರಿಕ್ಸ್ ಗೂ ಮುನ್ನ ಹಾಲಿ ವಿಶ್ವ ಚಾಂಪಿಯನ್‌ ನಾರಿಸ್‌‍ ಹೇಳಿದರು.

ಭಾರತೀಯ ಮೂಲದ ರೇಸಿಂಗ್‌ ಬುಲ್ಸ್ ಚಾಲಕ ಅರ್ವಿಡ್‌ ಲಿಂಡ್‌ಬ್ಲಾಡ್‌‍ ಮತ್ತು ಆಲ್ಪೈನ್‌ನ ವ್ಯವಸ್ಥಾಪಕ ನಿರ್ದೇಶಕ ಸ್ಟೀವ್‌ ನೀಲ್ಸನ್‌ ಕೂಡ ರೇಸ್‌‍ ಕ್ಯಾಲೆಂಡರ್‌ಗೆ ಭಾರತದ ಮರು ಸೇರ್ಪಡೆಯ ಸಾಧ್ಯತೆಯ ಬಗ್ಗೆ ಉತ್ಸುಕರಾಗಿದ್ದಾರೆ. ಅದಾನಿ ಗ್ರೂಪ್‌ ಮತ್ತು ಭಾರತೀಯ ಕ್ರೀಡಾ ಸಚಿವಾಲಯವು ಈ ಬೃಹತ್‌ ಕಾರ್ಯಕ್ರಮವನ್ನು ಆಯೋಜಿಸಲು ಸ್ಪಷ್ಟ ಆಸಕ್ತಿಯನ್ನು ವ್ಯಕ್ತಪಡಿಸಿವೆ, ಆದರೆ ಈ ಯೋಜನೆ ಸಾಕಾರಗೊಳ್ಳಲು ದೊಡ್ಡ ಸವಾಲುಗಳನ್ನು ಎದುರಿಸಬೇಕಿದೆ.ಚರ್ಚೆಗಳನ್ನು ಮುಂದುವರಿಸುವ ಮೊದಲು ಫಾರ್ಮುಲಾ 1 ತೆರಿಗೆ ವಿನಾಯಿತಿಗಳ ಬಗ್ಗೆ ಸಂಪೂರ್ಣ ಸ್ಪಷ್ಟತೆಯನ್ನು ಬಯಸುತ್ತದೆ; ಅದೇ ಸಮಯದಲ್ಲಿ, ಸ್ಥಳೀಯ ಪ್ರವರ್ತಕರು (ಈ ಸಂದರ್ಭದಲ್ಲಿ ಅದಾನಿ) ವಾರ್ಷಿಕವಾಗಿ 300 ರಿಂದ 500 ಕೋಟಿ ರೂಪಾಯಿಗಳಷ್ಟು ಆತಿಥ್ಯ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಜೊತೆಗೆ, ರೇಸ್‌‍ ಸರ್ಕ್‌ಯೂಟ್‌ಗೆ ಪ್ರಮುಖ ನವೀಕರಣದ ಅಗತ್ಯವಿದ್ದು, ಇದಕ್ಕೆ 150 ರಿಂದ 200 ಕೋಟಿ ರೂಪಾಯಿ ವೆಚ್ಚವಾಗುವ ಸಾಧ್ಯತೆಯಿದೆ. ಇದಲ್ಲದೆ, ಸಾರಿಗೆ-ಸಂಪರ್ಕ ವ್ಯವಸ್ಥೆ (ಲಾಜಿಸ್ಟಿಕ್ಸ್‌‍) ಮತ್ತು ಸುರಕ್ಷತೆಗೆ ಸಂಬಂಧಿಸಿದ ಗಣನೀಯ ವೆಚ್ಚಗಳೂ ಇರುತ್ತವೆ.ಫಾರ್ಮುಲಾ 1 ರ ಬೆಳವಣಿಗೆಯ ಯೋಜನೆಗಳಲ್ಲಿ ಏಷ್ಯಾ ಪ್ರಮುಖ ಪಾತ್ರ ವಹಿಸುತ್ತದೆ, ಆದರೆ ಹೆಚ್ಚಿನ ದೇಶಗಳು ರೇಸ್‌‍ ಆಯೋಜಿಸಲು ಬಯಸುತ್ತಿರುವುದರಿಂದ ಭಾರತಕ್ಕೆ ಪೈಪೋಟಿ ಹೆಚ್ಚುತ್ತಿದೆ.

RELATED ARTICLES
spot_img

Latest News