Homeಕ್ರೀಡಾ ಸುದ್ದಿಬ್ರಿಸ್ಬೇನ್‌ 2032 ಒಲಿಂಪಿಕ್ಸ್‌‍ : ಆಯೋಜನಾ ಸಮಿತಿ ಸಿಇಒ ಹುದ್ದೆಯಿಂದ ಸಿಂಡಿ ಹುಕ್‌ ರಾಜೀನಾಮೆ

ಬ್ರಿಸ್ಬೇನ್‌ 2032 ಒಲಿಂಪಿಕ್ಸ್‌‍ : ಆಯೋಜನಾ ಸಮಿತಿ ಸಿಇಒ ಹುದ್ದೆಯಿಂದ ಸಿಂಡಿ ಹುಕ್‌ ರಾಜೀನಾಮೆ

ಬ್ರಿಸ್ಬೇನ್‌, ಅ.13- ಮುಂಬರುವ 2032ರ ಒಲಿಂಪಿಕ್ಸ್‌ ಆಯೋಜನಾ ಸಮಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸಿಂಡಿ ಹುಕ್‌ ಅವರು ತಮ್ಮ ನಾಲ್ಕು ವರ್ಷಗಳ ಒಪ್ಪಂದ ಪೂರ್ಣಗೊಂಡ ಬಳಿಕ ಈ ವರ್ಷದ ಅಂತ್ಯಕ್ಕೆ ಹುದ್ದೆಯಿಂದ ನಿರ್ಗಮಿಸಲಿದ್ದಾರೆ.

2032ರ ಒಲಿಂಪಿಕ್ಸ್‌ ಮತ್ತು ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟಗಳ ಅಧಿಕೃತ ಲಾಂಛನಗಳನ್ನು ಅನಾವರಣಗೊಳಿಸಿದ ಒಂದು ವಾರದ ಬಳಿಕ, ಇಂದು ಬ್ರಿಸ್ಬೇನ್‌ 2032 ಆಯೋಜಕರು ಪ್ರಕಟಣೆಯ ಮೂಲಕ ಹುಕ್‌ ಅವರ ನಿರ್ಧಾರವನ್ನು ತಿಳಿಸಿದ್ದಾರೆ.

“ಸಿಇಒ ಆಗಿ ಸಂಸ್ಥೆಯನ್ನು ಶೂನ್ಯದಿಂದ ಕಟ್ಟಿಬೆಳೆಸಿದ್ದು, ಕ್ರೀಡಾಕೂಟದ ದೃಷ್ಟಿಕೋನ ಮತ್ತು ಯೋಜನೆಯನ್ನು ರೂಪಿಸಿದ್ದು, ಸ್ಪಷ್ಟ ಕಾರ್ಯತಂತ್ರವನ್ನು ವಿನ್ಯಾಸಗೊಳಿಸಿ ಅನುಷ್ಠಾನಗೊಳಿಸಿದ್ದು, ಬ್ರ್ಯಾಂಡ್‌ನ ಕಥನವನ್ನು ಸಿದ್ಧಪಡಿಸಿ ಆಕರ್ಷಕ ಲಾಂಛನಗಳನ್ನು ಬಿಡುಗಡೆ ಮಾಡಿದ್ದು ಹಾಗೂ ಆರಂಭಿಕ ಹಂತದಲ್ಲೇ ಮಾರುಕಟ್ಟೆಯಲ್ಲಿ ಉತ್ತಮ ವೇಗವನ್ನು ಸೃಷ್ಟಿಸಿದ್ದು ನನಗೆ ಹೆಮ್ಮೆಯ ಸಂಗತಿಗಳಾಗಿವೆ” ಎಂದು ಹುಕ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

“ಯಶಸ್ಸಿಗೆ ಅಗತ್ಯವಾದ ಭದ್ರ ಬುನಾದಿಯನ್ನು ಹಾಕಲಾಗಿದೆ. ಹೊಸ ಸಿಇಒಗೆ ಜವಾಬ್ದಾರಿ ಹಸ್ತಾಂತರಿಸಲು ಇದು ಸೂಕ್ತ ಸಮಯ” ಎಂದು ಅವರು ಹೇಳಿದ್ದಾರೆ. ಅಮೆರಿಕ ಮೂಲದ ಉದ್ಯಮಿಯಾಗಿರುವ ಹುಕ್‌, ಬ್ರಿಸ್ಬೇನ್‌ ಒಲಿಂಪಿಕ್ಸ್‌ ಆಯೋಜನಾ ಸಮಿತಿಯ ಜವಾಬ್ದಾರಿ ವಹಿಸಿಕೊಳ್ಳುವ ಮೊದಲು ಸಿಂಗಾಪುರದಲ್ಲಿ ಡೆಲಾಯ್ಟ್‌ ಏಷ್ಯಾ ಪೆಸಿಫಿಕ್‌ನ ಸಿಇಒ ಆಗಿ ಕಾರ್ಯನಿರ್ವಹಿಸಿದ್ದರು. ಅವರನ್ನು 2022ರ ಡಿಸೆಂಬರ್‌ನಲ್ಲಿ ಬ್ರಿಸ್ಬೇನ್‌ 2032 ಆಯೋಜನಾ ಸಮಿತಿಯ ಸಿಇಒ ಆಗಿ ನೇಮಿಸಲಾಗಿತ್ತು.

ಬ್ರಿಸ್ಬೇನ್‌ 2032ರ ಅಧ್ಯಕ್ಷ ಆಂಡ್ರ್ಯೂ ಲಿವೆರಿಸ್‌ ಅವರು ಹುಕ್‌ ಅವರ ನಾಯಕತ್ವವನ್ನು ಶ್ಲಾಘಿಸಿದ್ದಾರೆ. 2032ರ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುವ ಮೂಲಕ ಆಸ್ಟ್ರೇಲಿಯಾದ ಮೂರನೇ ನಗರವಾಗಿ ಬ್ರಿಸ್ಬೇನ್‌ ಹೊರಹೊಮ್ಮಲಿದೆ. ಇದಕ್ಕೂ ಮೊದಲು ಮೆಲ್ಬರ್ನ್‌ 1956ರಲ್ಲಿ ಹಾಗೂ ಸಿಡ್ನಿ 2000ರಲ್ಲಿ ಬೇಸಿಗೆ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಿದ್ದವು.

RELATED ARTICLES
spot_img

Latest News