ಶಾಂಘೈ, ಮೇ 10- ಇಲ್ಲಿ ನಡೆಯುತ್ತಿರುವ ಬಿಲ್ಲುಗಾರಿಕೆ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತೀಯ ಮಹಿಳಾ ತಂಡವು ದೀಪಿಕಾ ಕುಮಾರಿ ನೇತೃತ್ವದಲ್ಲಿ ಆತಿಥೇಯ ಚೀನಾವನ್ನು ರೋಚಕ ಶೂಟ್‌ಆಫ್‌ನಲ್ಲಿ ಮಣಿಸಿ ಚಿನ್ನದ ಪದಕ ಗೆದ್ದಿದೆ.
ದೀಪಿಕಾ ಕುಮಾರಿ,ಅಂಕಿತಾ ಭಕತ್ ಮತ್ತು ಯುವ ಪ್ರತಿಭೆ ಕುಂಕುಮ್ ಮೊಹೋದ್ ಒಳಗೊಂಡ ಭಾರತೀಯ ತಂಡವು ಫೈನಲ್‌ನಲ್ಲಿ ಚೀನಾವನ್ನು 5-4 (28-26) ಅಂತರದಲ್ಲಿ ಸೋಲಿಸಿತು. ನಾಲ್ಕು ಸೆಟ್‌ಗಳ ಅಂತ್ಯಕ್ಕೆ ಪಂದ್ಯ 4-4ರಿಂದ ಸಮಬಲಗೊಂಡಿದ್ದರಿಂದ ಶೂಟ್‌ಆಫ್ ಮೂಲಕ ಫಲಿತಾಂಶ ನಿರ್ಧಾರವಾಯಿತು.
ಈ ಗೆಲುವು ಭಾರತಕ್ಕೆ ವಿಶೇಷವಾಗಿದ್ದು, ಸೆಮಿಫೈನಲ್‌ನಲ್ಲಿ 10 ಬಾರಿ ಒಲಿಂಪಿಕ್ ಚಾಂಪಿಯನ್ ಆಗಿರುವ ದಕ್ಷಿಣ ಕೊರಿಯಾವನ್ನು ಸೋಲಿಸಿ ಭಾರತ ಫೈನಲ್‌ಗೆ ಪ್ರವೇಶಿಸಿತ್ತು. 2021ರ ಬಳಿಕ ಮಹಿಳಾ ರಿಕರ್ವ್ ತಂಡಕ್ಕೆ ಇದು ಮೊದಲ ವಿಶ್ವಕಪ್ ಚಿನ್ನದ ಪದಕವಾಗಿದೆ.
2010ರಿಂದಲೇ ವಿಶ್ವಕಪ್‌ನಲ್ಲಿ ಭಾರತದ ಪ್ರಮುಖ ಬಿಲ್ಲುಗಾರ್ತಿಯಾಗಿ ಗುರುತಿಸಿಕೊಂಡಿರುವ ದೀಪಿಕಾ ಕುಮಾರಿ ಇದೀಗ ತಮ ಖಾತೆಗೆ ಏಳನೇ ವಿಶ್ವಕಪ್ ತಂಡ ಚಿನ್ನದ ಪದಕ ಸೇರಿಸಿಕೊಂಡಿದ್ದಾರೆ. 2021ರಲ್ಲಿ ಗ್ವಾಟೆಮಾಲಾ ಸಿಟಿ ಮತ್ತು ಪ್ಯಾರಿಸ್‌ನಲ್ಲಿ ಗೆದ್ದ ತಂಡದಲ್ಲೂ ಅವರು ಭಾಗಿಯಾಗಿದ್ದರು.
ಶಾಂಘೈನಲ್ಲಿ ಭಾರತದ ಪದಕ ಸಂಖ್ಯೆ ಈಗ ಎರಡುಕ್ಕೇರಿದೆ. ಇದಕ್ಕೂ ಮುನ್ನ ಕಾಂಪೌಂಡ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಭಾರತದ ಖಾತೆ ತೆರೆಯಿದ್ದರು.ಇನ್ನೊಂದೆಡೆ,ಸಿಮ್ರನ್‌ಜೀತ್ ಕೌರ್ ಮಹಿಳಾ ರಿಕರ್ವ್ ವೈಯಕ್ತಿಕ ವಿಭಾಗದ ಸೆಮಿಫೈನಲ್‌ಗೆ ಪ್ರವೇಶಿಸಿದ್ದು, ಜಯ ಸಾಧಿಸಿದರೆ ತಮ್ಮ ಮೊದಲ ವಿಶ್ವಕಪ್ ವೈಯಕ್ತಿಕ ಪದಕ ಖಚಿತಪಡಿಸಿಕೊಳ್ಳಲಿದ್ದಾರೆ.
ಪೂರ್ಣಕಾಲಿಕ ರಾಷ್ಟ್ರೀಯ ಕೋಚ್ ಇಲ್ಲದ ಪರಿಸ್ಥಿತಿಯಲ್ಲೂ ದೀಪಿಕಾ ಕುಮಾರಿ ತಂಡವನ್ನು ಮುನ್ನಡೆಸಿದ ರೀತಿ ಗಮನಸೆಳೆಯಿತು. ಬ್ರೇಕ್‌ಗಳ ವೇಳೆ ಹಾಗೂ ಬದಲಾವಣೆ ಸಂದರ್ಭಗಳಲ್ಲಿ ಅವರು ಸಹ ಆಟಗಾರ್ತಿಯರಿಗೆ ಧೈರ್ಯ ತುಂಬುತ್ತಾ ತಂಡದ ಆತ್ಮವಿಶ್ವಾಸ ಹೆಚ್ಚಿಸಿದರು.
ಫೈನಲ್ ಆರಂಭದಲ್ಲಿ ಭಾರತ ಮೇಲುಗೈ ಸಾಧಿಸಿತು. ಮೊದಲ ಸೆಟ್‌ನಲ್ಲಿ 54-53 ಅಂತರದಿಂದ ಗೆದ್ದ ಭಾರತಕ್ಕೆ ದೀಪಿಕಾ ಅವರ ನಿರಂತರ 10 ಅಂಕಗಳ ಶಾಟ್‌ಗಳು ಬಲವಾಯಿತು. ಆದರೆ ಎರಡನೇ ಸೆಟ್‌ನಲ್ಲಿ ಚೀನಾ ಬಲಿಷ್ಠ ಪ್ರದರ್ಶನ ನೀಡಿ 55-52 ಅಂತರದಿಂದ ಗೆದ್ದು 2-2 ಸಮಬಲ ಸಾಧಿಸಿತು. ಈ ಸೆಟ್‌ನಲ್ಲಿ ದೀಪಿಕಾ ಕೊನೆಯ ಶಾಟ್‌ನಲ್ಲಿ 7 ಅಂಕ ಮಾತ್ರ ಪಡೆದಿದ್ದರು.
ಮೂರನೇ ಸೆಟ್‌ನಲ್ಲಿ ಚೀನಾ 57-56 ಅಂತರದಿಂದ ಗೆದ್ದು 4-2 ಮುನ್ನಡೆ ಪಡೆದಿತು. ನಾಲ್ಕನೇ ಸೆಟ್‌ನಲ್ಲಿ ಭಾರತ 54 ಅಂಕಗಳಿಗೆ ಸೀಮಿತವಾದಾಗ ಚೀನಾಗೆ ಗೆಲುವಿಗೆ ಕೇವಲ ಒಂದು 9 ಅಂಕದ ಶಾಟ್ ಅಗತ್ಯವಿತ್ತು. ಆದರೆ ಯುವ ಆಟಗಾರ್ತಿ ಯು ಕ್ವಿ 8 ಅಂಕ ಮಾತ್ರ ಪಡೆದ ಕಾರಣ ಪಂದ್ಯ ಶೂಟ್‌ಆಫ್‌ಗೆ ತಲುಪಿತು.
ನಿರ್ಣಾಯಕ ಕ್ಷಣದಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡಿತು. ಅಂಕಿತಾ 9, ಕುಂಕುಮ್ 10 ಮತ್ತು ದೀಪಿಕಾ 9 ಅಂಕ ಗಳಿಸಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟರು.
