ಹನೂರು,ಮೇ 10- ತಾಲ್ಲೂಕಿನ ಮಲೈ ಮಹದೇಶ್ವರ ಬೆಟ್ಟದಲ್ಲಿ ಚಿರತೆ ದಾಳಿ ಮುಂದುವರೆದಿದ್ದು, ಕುಟುಂಬದವರೊಂದಿಗೆ ನಾಗಮಲೆಗೆ ತೆರಳುತ್ತಿದ್ದ ಬಾಲಕನೋರ್ವ ಚಿರತೆ ದಾಳಿಗೆ ಬಲಿಯಾಗಿರುವ ದುರ್ಘಟನೆ ಇಂದು ಬೆಳಿಗ್ಗೆ ನಡೆದಿದೆ.ಬೆಂಗಳೂರಿನ ನಿವಾಸಿ ಸುರೇಶ್ ಪುತ್ರ ಹರ್ಷಿತ್ (10) ಮೃತ ಬಾಲಕ.
ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಪೋಷಕರೊಂದಿಗೆ ತೆರಳಿದ್ದ ಬಾಲಕ ಇಂದು ಬೆಳಿಗ್ಗೆ 7 ಗಂಟೆ ಸಮಯದಲ್ಲಿ ನಾಗಮಲೆಗೆ ದೇವರ ದರ್ಶನಕ್ಕೆ ತೆರಳುವಾಗ ಇಂಡಿಗನತ್ತ ಅರಣ್ಯ ಪ್ರದೇಶದಲ್ಲಿ ಬಾಲಕನ ಮೇಲೆ ಚಿರತೆ ದಾಳಿ ನಡೆಸಿ ಎಳೆದೊಯ್ದಿದೆ. ಪೋಷಕರ ಮುಂದೆಯೇ ಚಿರತೆ ಬಾಲಕನನ್ನು ಎಳೆದೊಯ್ದ ದೃಶ್ಯ ಕರಳು ಹಿಂಡುವಂತಿತ್ತು.
ಸುಮಾರು ಅರ್ಧ ತಾಸಿನ ಬಳಿಕ ಬಾಲಕನ ಮೃತದೇಹ ಬಂಡೆಗಳ ಮಧ್ಯೆ ಪತ್ತೆಯಾಗಿದ್ದು, ಬಾಲಕನ ಕತ್ತು ಸೇರಿದಂತೆ ಅಂಗಾಂಗಳು ರಕ್ತಸಿಕ್ತವಾಗಿವೆ ಎಂದು ಸ್ಥಳೀಯರಿಂದ ತಿಳಿದು ಬಂದಿದೆ. ವಿಷಯ ತಿಳಿದ ಅರಣ್ಯ ಇಲಾಖೆ ವಾಚರ್‌ಗಳು ಸ್ಥಳದಲ್ಲಿದ್ದು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಭಕ್ತರು ನಾಗಮಲೆಗೆ ತೆರಳಲು ಅರಣ್ಯ ಇಲಾಖೆಯವರು ಬೆಳಿಗ್ಗೆ 7 ಗಂಟೆ ಬಳಿಕ ಟಿಕೆಟ್ ನೀಡುತ್ತಿದ್ದರು. ಆದರೆ ಇಂದು 6 ಗಂಟೆಗೆ ಟಿಕೆಟ್ ನೀಡಿರುವುದರಿಂದ ಈ ದುರ್ಘಟನೆ ಸಂಭವಿಸಿದೆ. ಈ ಸಾವಿಗೆ ಅರಣ್ಯ ಇಲಾಖೆಯವರೇ ಕಾರಣ ಎಂದು ನಮ ಕನ್ನಡಿಗರ ವಿಜಯ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಪೊನ್ನಾಚಿ ಸ್ನೇಹಜೀವಿ ರಾಜು ಆರೋಪಿಸಿದ್ದಾರೆ.
ಮುಂದುವರೆದ ಚಿರತೆ ದಾಳಿ :
ಮಲೆ ಮಹದೇಶ್ವರ ಬೆಟ್ಟ ಕಾನನದಲ್ಲಿ ಚಿರತೆ ದಾಳಿ ಮುಂದುವರೆದಿದ್ದು ಈ ಹಿಂದೆ ಮಂಡ್ಯ ಮೂಲದ ಪಾದಯಾತ್ರಿ ಯುವಕ ಚಿರತೆ ದಾಳಿಗೆ ಬಲಿಯಾಗಿದ್ದ. ಈ ಘಟನೆ ಮಾಸುವ ಮುನ್ನವೇ ಕುಟುಂಬಸ್ಥರ ಜೊತೆ ಪಾದಯಾತ್ರೆ ಮೂಲಕ ತೆರಳುತ್ತಿದ್ದ ಬಾಲಕನ ಮೇಲೆ ಚಿರತೆ ದಾಳಿ ನಡೆಸಿತ್ತು. ಅದೃಷ್ಟವಶಾತ್ ತರಚಿದ ಗಾಯಗಳಾಗಿ ಬಾಲಕ ಬದುಕುಳಿದಿದ್ದ. ಇದಾದ ಬಳಿಕ ಇಂದು ಬೆಳಿಗ್ಗೆ ಬಾಲಕ ಚಿರತೆ ದಾಳಿಗೆ ಬಲಿಯಾಗಿರುವುದು ಭಕ್ತರು ಹಾಗೂ ಸಾರ್ವಜನಿಕರಲ್ಲಿ ಆತಂಕ ತಂದಿದೆ.
ಆಕ್ರಂದನ :
ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಬಾಲಕನ ಶವವನ್ನು ಕಂಡ ಕೂಡಲೇ ಪೋಷಕರ ದುಃಖದ ಕಟ್ಟೆ ಹೊಡೆದಿತ್ತು. ದೇವರ ದರ್ಶನಕ್ಕೆ ಬಂದು ಈ ರೀತಿಯಾಗಿ ನಮ ಮಗನ ಅಂತ್ಯವಾಗಿದೆ, ಯಾವ ಶತ್ರುವಿಗೂ ಈ ಶೋಕ ಬಾರದೇ ಇರಲಿ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳು ನಾಡಿಗೆ ಬರುತ್ತಿರುವುದು ಅಥವಾ ಜನವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಹೆಚ್ಚಾಗಿದೆ. ಅದರಲ್ಲೂ ನಾಗಮಲೆಗೆ ಕಾಲ್ನಡಿಗೆಯಲ್ಲಿ ತೆರಳುವ ಭಕ್ತರ ಸುರಕ್ಷತೆ ಬಹಳ ಮುಖ್ಯವಾಗಿದೆ. ಅಂಥಹ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಕೆ, ಹೆಚ್ಚಿನ ಸಿಬ್ಬಂದಿ ನಿಯೋಜನೆ ಮತ್ತು ಭಕ್ತರಿಗೆ ಮುನ್ನೆಚ್ಚರಿಕೆ ನೀಡುವಂತಹ ಕೆಲಸಗಳು ತುರ್ತಾಗಿ ಆಗಬೇಕಿದೆ.
ಪರಿಹಾರ :
ಮೃತಬಾಲಕನ ಕುಟುಂಬಕ್ಕೆ ಸರ್ಕಾರ ಮತ್ತು ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು. ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆ ದಾಳಿ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಮೃತ ಬಾಲಕನ ಪೋಷಕರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಮಲೆಮಹದೇಶ್ವರ ಭಕ್ತರು ಕಂಬನಿ ಮಿಡಿದಿದ್ದಾರೆ.
