Homeರಾಜ್ಯ6 ದಿನದಲ್ಲಿ 12 ಲಕ್ಷ ಭಕ್ತರಿಂದ ಹಾಸನಾಂಬ ದರ್ಶನ

6 ದಿನದಲ್ಲಿ 12 ಲಕ್ಷ ಭಕ್ತರಿಂದ ಹಾಸನಾಂಬ ದರ್ಶನ

ಹಾಸನ,ನ.5- ನಗರದ ಅಧಿದೇವತೆ ಶ್ರೀ ಹಾಸನಾಂಬ ದೇವಿಯ ದರ್ಶನೋತ್ಸವ ಈ ಬಾರಿ ಹೊಸ ದಾಖಲೆ ನಿರ್ಮಿಸಿದ್ದು, ಸಾರ್ವಜನಿಕ ದರ್ಶನ ಆರಂಭವಾದ ಆರನೇ ದಿನದ ವೇಳೆಗೆ 12 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ದರ್ಶನ ಪಡೆದಿರುವುದು ಈ ಬಾರಿಯ ವಿಶೇಷವಾಗಿದೆ.

ನಿನ್ನೆ ಮುಂಜಾನೆಯಿಂದಲೇ ಸಾವಿರಾರು ಭಕ್ತರು ದೇವಿಯ ದರ್ಶನಕ್ಕೆ ಆಗಮಿಸಿದ್ದರು. ಧರ್ಮದರ್ಶನದ ಸರತಿ ಸಾಲಿನಲ್ಲಿ ಭಕ್ತರು ಸುಗಮವಾಗಿ ಸಾಗುತ್ತಿದ್ದು, ಅರ್ಧ ಗಂಟೆಯೊಳಗೆ ದೇವಿಯ ದರ್ಶನ ಪಡೆಯುವ ಅವಕಾಶ ಲಭಿಸಿತು. ಆದರೆ, ಮುಂಜಾನೆ 5 ಗಂಟೆಯಿಂದಲೇ ಸರತಿ ಸಾಲುಗಳಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು.

ಹಿಂದಿನ ದಿನ ಮಧ್ಯರಾತ್ರಿಯವರೆಗೂ ಭರ್ತಿಯಾಗಿದ್ದ ಸಾಲುಗಳು ನಿನ್ನೆ ಬೆಳಿಗ್ಗೆ ಬಹುತೇಕ ಖಾಲಿಯಾಗಿದ್ದವು.300 ಹಾಗೂ 1,000 ವಿಶೇಷ ದರ್ಶನದ ಸಾಲುಗಳಲ್ಲಿಯೂ ಭಕ್ತರ ಸಂಖ್ಯೆ ವಿರಳವಾಗಿತ್ತು. ಕಳೆದ ಕೆಲವು ದಿನಗಳಿಂದ ಸಂಜೆ 6 ಗಂಟೆಯ ನಂತರ ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ದರ್ಶನ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಮಾಡಿದೆ.

ನೈವೇದ್ಯದ ಸಮಯದಲ್ಲೂ ದರ್ಶನಕ್ಕೆ ಅವಕಾಶ :
ಈ ಹಿಂದೆ ಪ್ರತಿದಿನ ಮುಂಜಾನೆ 3ರಿಂದ 6 ಗಂಟೆಯವರೆಗೆ ನೈವೇದ್ಯದ ನಿಮಿತ್ತ ಗರ್ಭಗುಡಿಯ ಬಾಗಿಲು ಮುಚ್ಚಲಾಗುತ್ತಿತ್ತು. ಆದರೆ, ಭಕ್ತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಅವಧಿಯಲ್ಲಿಯೂ ದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ಅವರು ಪ್ರಧಾನ ಅರ್ಚಕ ನಾಗರಾಜ್‌ ಅವರಿಗೆ ಮನವಿ ಮಾಡಿದ್ದರು. ಅದ್ದರಿಂದ ಗರ್ಭಗುಡಿಯ ಬಾಗಿಲು ಮುಚ್ಚದಿರಲು ನಿರ್ಧರಿಸಲಾಗಿದೆ.

ಇದರ ಪರಿಣಾಮವಾಗಿ ಮಂಗಳವಾರ ಮಧ್ಯಾಹ್ನ 3.30ರಿಂದ ಬುಧವಾರ ಮಧ್ಯಾಹ್ನ 2 ಗಂಟೆಯವರೆಗೆ ನಿರಂತರವಾಗಿ ಭಕ್ತರಿಗೆ ದರ್ಶನದ ಅವಕಾಶ ಕಲ್ಪಿಸಲಾಗಿತ್ತು. ಮುಂದಿನ ದಿನಗಳಲ್ಲಿಯೂ ಮುಂಜಾನೆ 3ರಿಂದ 6 ಗಂಟೆಯವರೆಗೆ ಗರ್ಭಗುಡಿಯ ಬಾಗಿಲು ಮುಚ್ಚದೆ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಜಗದೀಶ್‌ ಗಂಗಣ್ಣನವರ್‌ ತಿಳಿಸಿದ್ದಾರೆ.

9.70 ಕೋಟಿ ಆದಾಯ ಸಂಗ್ರಹ :
ಈ ಬಾರಿಯ ದರ್ಶನೋತ್ಸವದಲ್ಲಿ 1,000 ಮತ್ತು 300 ವಿಶೇಷ ದರ್ಶನದ ಟಿಕೆಟ್‌ಗಳು ಹಾಗೂ ಲಾಡು ಪ್ರಸಾದ ಮಾರಾಟದಿಂದ ಈವರೆಗೆ 9.70 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಭಕ್ತರು ದೇವಿಯ ದರ್ಶನ ಪಡೆದಿದ್ದು, ಆದಾಯ ಸಂಗ್ರಹದಲ್ಲಿಯೂ ಪ್ರಗತಿ ಸಾಧಿಸಲಾಗಿದೆ ಎಂದು ಜಗದೀಶ್‌ ಗಂಗಣ್ಣನವರ್‌ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಾದರೂ ಎಲ್ಲರಿಗೂ ಸುಗಮ ದರ್ಶನ ಕಲ್ಪಿಸಲು ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ಅವರು ಹೇಳಿದರು.

RELATED ARTICLES

Latest News