ನಂಜನಗೂಡು,ಜ.17- ಸುತ್ತೂರು ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಪರಮ ಪೂಜ್ಯರು, ಬಂದು-ಬಾಂಧವರು, ಗಣ್ಯರ ಸಮುಖದಲ್ಲಿ ಒಟ್ಟು 135 ಜೋಡಿಗಳು ತಮ ಹೊಸ ಜೀವನಕ್ಕೆ ಕಾಲಿರಿಸಿದ್ದಾರೆ. ಉಚಿತ ಸಾಮೂಹಿಕ ವಿವಾಹ ಮಹೋತ್ಸವವನ್ನು ಸುತ್ತೂರ ಶ್ರೀಗಳ ಆಶೀರ್ವಾದದಿಂದ 2009 ರಿಂದಲೂ ವಿಜೃಂಭಣೆ ನಡೆಸಿಕೊಂಡು ಬರುತ್ತಿದ್ದು ಇದುವರೆಗೆ 3,886 ಜೋಡಿ ತಮ ನೂತನ ಜೀವನವನ್ನು ಸುತ್ತೂರಿನ ಉಚಿತ ಸಾಮೂಹಿಕ ವಿವಾಹ ಎಂಬ ದೀಪದಲ್ಲಿ ಬೆಳಗಿಸಿಕೊಂಡಿದ್ದಾರೆ.
ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆದ ಈ ಬಾರಿ ಸಾಮೂಹಿಕ ವಿವಾಹದಲ್ಲಿ 135 ಜೋಡಿಗಳು ಮದುವೆಯಾದರು. ಇವರಲ್ಲಿ ಬಹುತೇಕ ಮೈಸೂರು ಚಾಮರಾಜನಗರ ಜಿಲ್ಲೆಯವರು. ಜೊತೆಗೆ ಮಂಡ್ಯ, ಗುಲ್ಬರ್ಗ, ರಾಯಚೂರು, ಬೆಂಗಳೂರು, ರಾಮನಗರ ಜಿಲ್ಲೆ, ತಮಿಳುನಾಡು ರಾಜ್ಯದ ವಧುವರರೂ ಇದ್ದಾರೆ.
ಸಾಮೂಹಿಕ ವಿವಾಹದ ಅಧ್ಯಕ್ಷತೆ ವಹಿಸಿದ್ಧ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಸುತ್ತೂರು ಶ್ರೀ ಕ್ಷೇತ್ರದಲ್ಲಿ ವಿಶೇಷವಾದ ಕಾರ್ಯಕ್ರಮಗಳು ನಡೆಯುತ್ತಿದ್ದು ಸಾರ್ವಜನಿಕರಿಗೆ ಮತ್ತು ಎಲ್ಲಾ ಭಕ್ತರಿಗೆ ಅನುಕೂಲವಾಗುವಂತ ಕಾರ್ಯಕ್ರಮ ನಡೆಯುತ್ತಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಸುತ್ತೂರು ಶ್ರೀ ಕ್ಷೇತ್ರ ಪವಿತ್ರವಾದದ್ದು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಮಠವನ್ನು ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳು ಸಂಸ್ಥಾಪಿಸಿದರು. ಶಿವರಾತ್ರಿ ಶಿವಯೋಗಿಗಳವರ ತಪಃ ಶಕ್ತಿಯಿಂದ ಶ್ರೀ ಮಠವು ಸಾಮಾಜಿಕ, ಧಾರ್ಮಿಕ ಕಾರ್ಯಗಳನ್ನು ಮಾಡುತ್ತಾ ಬಂದಿದೆ ಎಂದು ಶ್ಲಾಘಿಸಿದರು.
ತಿರುವನಂತಪುರಂನ ಡಾ. ಕೇಬ್ರಿಯಲ್ ಮಾರ್ ಗ್ರೆಗೋರಿಯಸ್ ಹಾಗೂ ಮೈಸೂರಿನ ಬಿಷಪ್ ಎಸ್.ಜೆ.ಫ್ರಾನ್ಸಿಸ್‌ಸೆರಾವ್ ಮಾತನಾಡಿ, ಸುತ್ತೂರು ಪವಿತ್ರವಾದ ಧರ್ಮಕ್ಷೇತ್ರ ಕ್ಷೇತ್ರವಾಗಿರುವುದು ಪೂಜೆ ಪುನಸ್ಕಾರಿಗಳಿಂದಲ್ಲ, ಅನ್ನ, ಅಕ್ಷರ, ಜ್ಞಾನ ಸೇರಿದಂತೆ ಸಾಮಾಜಿಕ ಕಾರ್ಯಗಳಿಂದ ಈ ಕ್ಷೇತ್ರ ಪುಣ್ಯಕ್ಷೇತ್ರವಾಗಿದೆ ಎಂದರು.
ಸಮಾರಂಭದಲ್ಲಿ ಮಾಜಿ ಸಚಿವ ಅಲ್ಲಮ ವೀರಭದ್ರಪ್ಪ, ಆರ್.ವಿ.ದೇಶಪಾಂಡೆ, ಶಾಸಕರಾದ ಹಂಪನಗೌಡ ಬಾದರ್ಲಿ, ನಂಜೇಗೌಡ, ಯುಎಸ್‌ಎನ ಹಿರಿಯ ನಿರ್ದೇಶಕ ರಾಜಣ್ಣ ಹೆಗ್ಗಡಹಳ್ಳಿ, ಕೋಟೆ ಸರಗೂರಿನ ವೆಂಕಟೇಶ್, ಮುಂತಾದವರು ಭಾಗವಹಿಸಿ ಶ್ರೀ ಮಠದ ಸೇವಾ ಕಾರ್ಯಕ್ರಮಗಳನ್ನು ತಿಳಿಸಿದರು.ನಂಜನಗೂಡಿನ ನೋಂದಣಾಧಿಕಾರಿ ಅಧಿಕಾರಿ ವಿವೇಕ್, ಎಎಸ್ಪಿ ಮಲ್ಲಿಕ್ ಸೇರಿದಂತೆ ಹಿರಿಯ ಅಧಿಕಾರಿಗಳು, ನಾಡಿನಾದ್ಯಂತ ಬಂದಿದ್ದ ಒಂದು ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಭಾಗವಹಿಸಿದ್ದರು.
