Monday, April 20, 2026
Homeರಾಜ್ಯ31ವಿದ್ಯಾರ್ಥಿಗಳಲ್ಲಿ ಡ್ರಗ್ಸ್ ಪಾಸಿಟಿವ್‌..!

31ವಿದ್ಯಾರ್ಥಿಗಳಲ್ಲಿ ಡ್ರಗ್ಸ್ ಪಾಸಿಟಿವ್‌..!

31 students test positive for drugs..!

ಬೆಂಗಳೂರು,ಮಾ.5- ಮಾದಕ ವ್ಯಸನಮುಕ್ತ ಸಮಾಜ ನಿರ್ಮಾಣದೆಡೆಗೆ ಸಹಾನುಭೂತಿಯ ಹೆಜ್ಜೆ ಇಡಲು ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆ ವತಿಯಿಂದ ಸನ್ಮಿತ್ರ ಎಂಬ ಉಪ ಕ್ರಮವನ್ನು ಜಾರಿಗೊಳಿಸಲಾಗಿದೆ.

ರಾಜ್ಯದಾದ್ಯಂತ ಯುವ ಸಮುದಾಯದ ಮೇಲೆ ತೀವ್ರ ಪರಿಣಾಮ ಬೀರಿರುವ ಮಾದಕ ವ್ಯಸನದ ಗಂಭೀರ ಸಮಸ್ಯೆಗೆ ಪರಿವರ್ತನಾತ್ಮಕ ವಿಧಾನದಿಂದ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸನ್ಮಿತ್ರ ಎಂಬ ಉಪಕ್ರಮ ಜಾರಿಮಾಡಿ ರಾಜ್ಯದ ಡಿಜಿ ಮತ್ತು ಐಜಿಪಿ ಡಾ.ಎಂ.ಎ ಸಲೀಂ ಅವರು ಆದೇಶಿಸಿದ್ದಾರೆ.

ಈ ಆದೇಶದ ಅನುಗುಣವಾಗಿ ಯುವ ಜನಾಂಗದವರು ತಪ್ಪು ಹಾದಿಗೆ ಹೋಗುವುದನ್ನು ತಡೆಯುವ ಮತ್ತು ಅಗತ್ಯವಿರುವವರಿಗೆ ಸೂಕ್ತ ಮಾರ್ಗದರ್ಶನವನ್ನು ನೀಡುವ ಸಲುವಾಗಿ ನಗರ ಪೊಲೀಸ್‌ ಆಯುಕ್ತರ ವ್ಯಾಪ್ತಿಯ, ಪಶ್ಚಿಮ ವಿಭಾಗದ ಡಿಸಿಪಿ ಯತೀಶ್‌ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ವಿಜಯನಗರ ಉಪ ವಿಭಾಗದ ಠಾಣೆಗಳ ಸರಹದ್ದಿನಲ್ಲಿ ಮಾದಕ ವಸ್ತುಗಳ ಸೇವನೆಯ ಪರಿಶೀಲನೆ ಸಂಬಂಧಿಸಿದಂತೆ ಸ್ಥಳೀಯವಾಗಿರುವ ಆರು ಶಿಕ್ಷಣ ಸಂಸ್ಥೆ ಮತ್ತು ಎರಡು ಹಾಸ್ಟೆಲ್‌ಗಳ ವ್ಯವಸ್ಥಾಪಕ ಮಂಡಳಿಯಿಂದ ಸಹಮತಿ ಮತ್ತು ನಿರಾಪೇಕ್ಷಣ ಪತ್ರವನ್ನು ಪಡೆದು ತಪಾಸಣೆ ಮತ್ತು ಪರಿಶೀಲನೆಯನ್ನು ಮಾಡಲಾಯಿತು.

ಸುಮಾರು 1200 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಯೂರಿನ್‌ ಸ್ಯಾಂಪಲ್‌ಗಳನ್ನು ಪಡೆದು ಆ ಪೈಕಿ 585 ಜನರ ಸ್ಯಾಂಪಲ್‌ಗಳನ್ನು ರ್ಯಾಂಡಮ್‌ ಆಗಿ ತಪಾಸಣೆಗೆ ಒಳಪಡಿಸಲಾಗಿದ್ದು, 31 ಪರೀಕ್ಷೆಗಳಲ್ಲಿ ಪಾಸಿಟಿವ್‌ ಇರುವುದು ಕಂಡು ಬಂದಿದೆ.

ಈ ಕಾರ್ಯಕ್ಕೆ ಸ್ಥಳೀಯ ಪೊಲೀಸ್‌ ಠಾಣೆಯ ಅಽಕಾರಿ ಮತ್ತು ಸಿಬ್ಬಂದಿಗಳು, ಸ್ಥಳೀಯ ವಿವಿಧ ಆಸ್ಪತ್ರೆಗಳ ವೈದ್ಯರು, ತಂತ್ರಜ್ಞರು, ಸಿಬ್ಬಂದಿಯ ಸಹಕರಿಸಿದರು.ಅಗತ್ಯವಿರುವ ವ್ಯಕ್ತಿಗಳಿಗೆ ಮಾನಸಿಕ ತಜ್ಞರೊಂದಿಗೆ ಸಮಾಲೋಚನೆ ನಡೆಸಿ, ಅಗತ್ಯ ವೈದ್ಯಕೀಯ ಸಹಯೋಗವನ್ನು ಪಡೆದುಕೊಳ್ಳಲು ಸಲಹೆ ನೀಡಲಾಗುವುದು. ತಪಾಸಣೆಗೆ ಒಳಪಟ್ಟ ವ್ಯಕ್ತಿಯ ಅಥವಾ ಕುಟುಂಬದವರ ವಿವರಗಳನ್ನು ಅತ್ಯಂತ ಗೌಪ್ಯತೆಯಿಂದ ಕಾಪಾಡಲಾಗುವುದು.

ನಿಮ್ಮ ರಕ್ಷಣೆಯೇ ನಮ್ಮ ಗುರಿ ಎಂಬ ಉದ್ದೇಶದಿಂದ ವ್ಯಸನಿಗಳನ್ನು ಪರಿವರ್ತಿಸುವ ಸಲುವಾಗಿ ಒಬ್ಬರು ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಿ ಅಗತ್ಯ ಸಹಯೋಗವನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಾಗುತ್ತದೆ.

RELATED ARTICLES

Latest News