Tuesday, April 14, 2026
Homeರಾಜ್ಯಬೆಂಗಳೂರು ಹೊರವಲಯದಲ್ಲಿ ಸಂಭವಿಸಿದ 2 ಭೀಕರ ರಸ್ತೆ ಅಪಘಾತಗಳಲ್ಲಿ 6 ಮಂದಿ ಸಾವು

ಬೆಂಗಳೂರು ಹೊರವಲಯದಲ್ಲಿ ಸಂಭವಿಸಿದ 2 ಭೀಕರ ರಸ್ತೆ ಅಪಘಾತಗಳಲ್ಲಿ 6 ಮಂದಿ ಸಾವು

6 killed in 2 horrific road accidents on the outskirts of Bengaluru

ಬೆಂಗಳೂರು,ಮಾ.22- ಕಳೆದ ರಾತ್ರಿ ನಗರದ ಹೊರವಲಯದಲ್ಲಿ ಸಂಭವಿಸಿದ ಎರಡು ಭೀಕರ ರಸ್ತೆ ಅಪಘಾತಗಳಲ್ಲಿ ಸ್ತ್ರೀಶಕ್ತಿ ಸಂಘದ ಮೂವರು ಮಹಿಳೆಯರು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ.

ಕಾಶಿಯಾತ್ರಿಗಳ ದುರ್ಮರಣ :
ದೇವನಹಳ್ಳಿ ಪಟ್ಟಣದ ಹೊರವಲಯದ ರಾಣಿಕ್ರಾಸ್‌‍ ಬಳಿ ಮಧ್ಯರಾತ್ರಿ 11.50ರ ಸುಮಾರಿನಲ್ಲಿ ಸರ್ವೀಸ್‌‍ ರಸ್ತೆ ಕಡೆಯಿಂದ ಬರುತ್ತಿದ್ದ ಟಿಟಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಮೂವರು ಮಹಿಳಾ ಕಾಶಿಯಾತ್ರಿಗಳು ಸಾವನ್ನಪ್ಪಿದ್ದಾರೆ.

ಅಪಘಾತದಲ್ಲಿ ಮೃತಪಟ್ಟವರನ್ನು ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಜಯಮ (60), ಯಶೋಧಮ (60), ಗಂಗಾ (38) ಎಂದು ಗುರುತಿಸಲಾಗಿದೆ.ಅಪಘಾತದಲ್ಲಿ ಪುಷ್ಪರಾಣಿ, ಚಂದ್ರಮ, ಕುಳ್ಳುಜಯಮ, ಪದಮ, ಉಮಾ, ಸುಶೀಲಮ, ಪ್ರಿಯಾಂಕ, ಚಂದ್ರಕಲಾ, ವೈಷ್ಣವಿ, ಶ್ರೀಕಾಂತ್‌, ರವಿತೇಜ ಎಂಬುವರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ದೇವನಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರವಾಗಿ ಗಾಯಗೊಂಡು ಪರಿಸ್ಥಿತಿ ಗಂಭೀರವಾಗಿರುವ ಕೆಂಪಮ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

ತಿಪಟೂರಿನ ಗುಡುಗೊಂಡನಹಳ್ಳಿ ಗ್ರಾಮದ ಸ್ತ್ರೀಶಕ್ತಿ ಸಂಘದ 12 ಮಂದಿ ಮಹಿಳೆಯರು ಕಾಶಿ ಸೇರಿದಂತೆ ಹಲವು ಪ್ರೇಕ್ಷಣೀಯ ಸ್ಥಳಕ್ಕೆ ಸುಮಾರು 15 ದಿನಗಳ ಕಾಲ ಪ್ರವಾಸಕ್ಕೆಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಟಿಟಿಯಲ್ಲಿ ಆಗಮಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಕಳೆದ ರಾತ್ರಿ 10 ಗಂಟೆ ಸುಮಾರಿಗೆ ತಿಪಟೂರಿನಿಂದ ಹೊರಟು ಮಧ್ಯರಾತ್ರಿ ನಗರಕ್ಕೆ ಬಂದಿದ್ದಾರೆ. ನಂತರ ಅಲ್ಲಿಂದ ಕೆಂಪೇಗೌಡ ವಿಮಾನನಿಲ್ದಾಣಕ್ಕೆ ತೆರಳಲು ದಾರಿ ಗೊತ್ತಾಗದೆ ಗೂಗಲ್‌ ಮ್ಯಾಪ್‌ ಮೂಲಕ ಟಿಟಿ ವಾಹನ ಚಾಲಕ ಹೋಗುತ್ತಿದ್ದಾಗ ಸರ್ವಿಸ್‌‍ ರಸ್ತೆಗೆ ಮೊದಲೇ ತಿರುವು ಪಡೆಯಬೇಕಾಗಿತ್ತು. ಆದರೆ ಮುಂದೆ ಹೋಗಿ ಯೂಟರ್ನ್‌ ಪಡೆಯುವ ವೇಳೆ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಟಿಟಿಯ ಎಡಭಾಗ ಸಂಪೂರ್ಣ ಜಖಂಗೊಂಡಿದ್ದು, ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ.ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ಇಂದು ಬೆಳಿಗ್ಗೆ 6.30ಕ್ಕೆ ವಿಮಾನದ ಮೂಲಕ ಪ್ರಯಾಣ ಬೆಳೆಸಬೇಕಾಗಿತ್ತು.

ಆಕಾಶ್‌ ಏರ್‌ಲೈನ್‌್ಸ ಮೂಲಕ ಟಿಕೆಟ್‌ಗಳನ್ನು ಸಹ ಬುಕ್‌ ಮಾಡಲಾಗಿತ್ತು. ಮನು ಎಂಬುವವರ ಟಿಟಿಯಲ್ಲಿ ವಿಮಾನನಿಲ್ದಾಣಕ್ಕೆ ಡ್ರಾಪ್‌ ಪಡೆಯಲು ಯೋಜಿಸಲಾಗಿತ್ತು. ಅಷ್ಟರಲ್ಲಿ ಈ ದುರಂತ ಸಂಭವಿಸಿದೆ.

ಟಿಟಿ ವಾಹನ ಪ್ರಯಾಣಿಕರನ್ನು ಡ್ರಾಪ್‌ ಮಾಡಲು ತೆರಳುತ್ತಿತ್ತು. ಚಾಲಕ ಏರ್‌ಪೋರ್ಟ್‌ಗೆ ತೆರಳುವ ರಸ್ತೆ ಬಗ್ಗೆ ಸರಿಯಾಗಿ ತಿಳಿಯದೆ ಯೂ ಟರ್ನ್‌ ಪಡೆಯುವ ವೇಳೆ ಸಿಗ್ನಲ್‌ ಲೈಟ್‌ ಆನ್‌ ಮಾಡಿದ್ದರೂ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ ಎಂದು ಸಂಚಾರ ವಿಭಾಗದ ಅಧಿಕಾರಿಗಳು ಈ ಸಂಜೆಗೆ ತಿಳಿಸಿದ್ದಾರೆ.ಈ ಬಗ್ಗೆ ವಿಸ್ತೃತ ತನಿಖೆ ನಡೆಸಲಾಗುತ್ತಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಹೇಳಿದ್ದಾರೆ.

ಕೆ.ಆರ್‌.ಪುರಂ ವರದಿ :
ರಾತ್ರಿ 11.30 ರ ಸುಮಾರಿಗೆ ಕೆ.ಆರ್‌.ಪುರಂನ ಮೇಡಹಳ್ಳಿ ಮೇಲ್ಸೇತುವೆ ಮೇಲೆ ನಿಂತಿದ್ದ ವಾಹನಕ್ಕೆ ಸರಕು ಸಾಗಣೆ ಆಟೋ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವೈಟ್‌ಫೀಲ್ಡ್ ನಿವಾಸಿಗಳಾದ ಮಣಿಕಂಠ, ಸುರೇಶ್‌, ಶ್ರೀನಿವಾಸ್‌‍ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಕೋಲಾರದಿಂದ ಗೂಡ್ಸ್ ಆಟೋ ಆಲೂಗಡ್ಡೆ ತುಂಬಿಕೊಂಡು ಬರುವಾಗ ಮೇಲ್ಸೇತುವೆ ಮೇಲೆ ಟಯರ್‌ ಸ್ಫೋಟಗೊಂಡು ನಿಂತಿದ್ದ ಕ್ಯಾಂಟರ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಆಟೋದ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಒಳಗಿದ್ದ ದೇಹಗಳು ಛಿದ್ರಗೊಂಡಿವೆ.ಕೆ.ಆರ್‌.ಪುರಂ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News