ಬೆಂಗಳೂರು,ಮಾ.22- ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ಇದೀಗ ವಾಹನಗಳ ಬೆಲೆ ಕೂಡ ಏರಿಕೆಯಾಗಲಿದೆ. ಏಪ್ರಿಲ್ ತಿಂಗಳಿಂದ ಹೊಸ ವಾಹನಗಳ ದರದಲ್ಲಿ ಏರಿಕೆ ಅನಿವಾರ್ಯವಾಗಿದ್ದು, ಗ್ರಾಹಕರಿಗೆ ಹೆಚ್ಚುವರಿ ಭಾರವಾಗಲಿದೆ. ವಾಹನ ತಯಾರಿಕಾ ಕಂಪನಿಗಳು ನೀಡಿರುವ ಮಾಹಿತಿಯ ಪ್ರಕಾರ, ಕಾರುಗಳ ದರದಲ್ಲಿ ಸುಮಾರು ಶೇ. 4ರವರೆಗೆ ಏರಿಕೆ. ದ್ವಿಚಕ್ರ ವಾಹನಗಳಲ್ಲಿ ಶೇ. 2 ರವರೆಗೆ ಏರಿಕೆ ಆಗುವ ಸಾಧ್ಯತೆ ಇದೆ ಎನ್ನುವ ಮಾಹಿತಿ ನೀಡಿವೆ.
ಉಕ್ಕಿನ ದರದಲ್ಲಿ ಏರಿಕೆ, ವಿದೇಶಿ ಆಮದು ವೆಚ್ಚ ಹೆಚ್ಚಳ, ತಯಾರಿಕಾ ವೆಚ್ಚದ ಭಾರೀ ಏರಿಕೆಯೇ ವಾಹನ ದರ ಏರಿಕೆಗೆ ಪ್ರಮುಖ ಕಾರಣಗಳಿಂದ ಕಂಪನಿಗಳು ದರ ಏರಿಕೆ ಮಾಡಲು ತೀರ್ಮಾನಿಸಿವೆ.
ಗ್ರಾಹಕರಿಗೆ ಎಷ್ಟು ಹೆಚ್ಚುವರಿ ಭಾರ :
ದರ ಏರಿಕೆಯ ಪರಿಣಾಮವಾಗಿ ಗ್ರಾಹಕರು ಹೆಚ್ಚು ಹಣ ಪಾವತಿಸಬೇಕಾಗುತ್ತದೆ. 1 ಲಕ್ಷದ ಬೈಕ್ ಖರೀದಿಸಿದರೆ 2,0003,000 ಹೆಚ್ಚಳ, 2 ಲಕ್ಷದ ವಾಹನ ಖರೀದಿಸಿದರೆ 5,0006,000 ಹೆಚ್ಚಳ, 5 ಲಕ್ಷದ ಕಾರು 15,00020,000 ಹೆಚ್ಚಳ, 10 ಲಕ್ಷದ ಕಾರು 30,00040,000 ಹೆಚ್ಚಳ.
ಇದು ಕೇವಲ ಕೆಲವೇ ವಾಹನಗಳಿಗೆ ಸೀಮಿತವಾಗಿಲ್ಲ. ಸಾಮಾನ್ಯ ಕಾರುಗಳಿಂದ ಹಿಡಿದು ಲಕ್ಸುರಿ ವಾಹನಗಳವರೆಗೂ ದರ ಏರಿಕೆ ಅನ್ವಯವಾಗಲಿದೆ.ಈ ದರ ಏರಿಕೆಯಿಂದ ಆಟೋ, ಕ್ಯಾಬ್ ಚಾಲಕರು, ವಾಹನ ಆಧಾರಿತ ಜೀವನ ಸಾಗಿಸುವವರು, ಮಧ್ಯಮ ವರ್ಗದ ಕುಟುಂಬಗಳು ಇವರಿಗೆ ಹೆಚ್ಚು ಹೊರೆ ಬೀಳುವ ಸಾಧ್ಯತೆ ಇದೆ.
ಮಧ್ಯಮ ವರ್ಗದ ಜನರ ಸ್ವಂತ ಕಾರು ಕನಸು ಇದೀಗ ಮತ್ತಷ್ಟು ದೂರ ಸರಿಯುವ ಸಾಧ್ಯತೆ ಇದೆ. ಈಗಾಗಲೇ , ಇಂಧನ ವೆಚ್ಚ ಹೆಚ್ಚಿರುವ ಸಂದರ್ಭದಲ್ಲಿ ಹೊಸ ದರ ಏರಿಕೆ ಗ್ರಾಹಕರಿಗೆ ದೊಡ್ಡ ಸವಾಲಾಗಲಿದೆ.
ಏಪ್ರಿಲ್‌ನಿಂದ ವಾಹನ ಖರೀದಿ ದುಬಾರಿಯಾಗುವುದು ಖಚಿತ. ಹೀಗಾಗಿ, ವಾಹನ ಖರೀದಿ ಯೋಚನೆ ಇರುವವರು ಈಗಲೇ ನಿರ್ಧಾರ ಕೈಗೊಳ್ಳುವುದೇ ಒಳಿತು ಎನ್ನುತ್ತಾರೆ ತಜ್ಞರು.
