ಬೆಂಗಳೂರು,ಮಾ.4- ಮುಂದೆ ಹೋಗುತ್ತಿದ್ದ ಲಾರಿಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ನಗರದ ಮೂವರು ಮಹಿಳೆಯರು ಸೇರಿದಂತೆ ಐದು ಮಂದಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಪಲಮನೇರು ಬಳಿ ಇಂದು ಬೆಳಗ್ಗೆ ನಡೆದಿದೆ.
ಮೃತಪಟ್ಟವರನ್ನು ಮೋಹನ್‌ರಾವ್,ನಾಗರಾಜರಾವ್, ಕುಸುಮಾ, ಪೂಜಾ ಮತ್ತು ಜಯಂತಿ ಎಂದು ಗುರುತಿಸಲಾಗಿದೆ. ಮೃತರ ಪೈಕಿ ಒಬ್ಬರು ರಾಜಾಜಿನಗರದವರು ಎಂದು ತಿಳಿದುಬಂದಿದೆ.
ಎರಡು ಕುಟುಂಬಗಳ ಐದು ಮಂದಿ ಕಾರಿನಲ್ಲಿ ನಗರದಿಂದ ತಿರುಪತಿಗೆ ಹೋಗುತ್ತಿದ್ದರು.ಇಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಇವರ ಕಾರು ಪಲಮನೇರುವಿನ ಗಂಗವರಂನ ಪಲ್ಲೇರುಜುಲು ರೆಸ್ಟೋರೆಂಟ್ ಬಳಿ ತೆರಳುತ್ತಿದ್ದಾಗ ಮುಂದೆ ಹೋಗುತ್ತಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಈ ಭೀಕರ ಅಪಘಾತ ಸಂಭವಿಸಿದೆ .
ಸುದ್ದಿ ತಿಳಿದು ಗಂಗವರಂ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರ ಪ್ರಕಾರ, ಅತಿ ವೇಗ ಮತ್ತು ಚಾಲಕ ನಿದ್ರಾಹೀನತೆಯಿಂದ ಅಪಘಾತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.ಏತನ್ಮಧ್ಯೆ, ಮೃತರ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದ್ದು, ಐವರ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ಅಪಘಾತದಿಂದಾಗಿ ಈ ಮಾರ್ಗದಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಖುದ್ದು ಪೊಲೀಸರು ಸ್ಥಳದಲ್ಲಿದ್ದು ಕ್ರೇನ್ ಮೂಲಕ ಕಾರನ್ನು ರಸ್ತೆ ಪಕ್ಕಕ್ಕೆ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
