ಬೆಂಗಳೂರು. ಏ. 20- ಕನಿಷ್ಠ ವೇತನ, ಸೇವೆ ಖಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದೇಶದಾದ್ಯಂತ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ನಾಳೆಯಿಂದ ಮೂರು ದಿನಗಳ ಪ್ರತಿಭಟನೆಗೆ ಮುಂದಾಗಿದ್ದಾರೆ.
ಏಪ್ರಿಲ್ 21ರಿಂದ 23ರವರೆಗೆ ನಡೆಯಲಿರುವ ಈ ಪ್ರತಿಭಟನೆ ರಾಷ್ಟ್ರ ರಾಜಧಾನಿಯಾದ ದೆಹಲಿಯ ಜಂತರ್ ಮಂತರ್ ಮುಂಭಾಗದಲ್ಲಿ ನಡೆಯಲಿದೆ. ದೇಶದ ವಿವಿಧ ರಾಜ್ಯಗಳಿಂದ ಸಾವಿರಾರು ಅಂಗನವಾಡಿ ನೌಕರರು ಭಾಗವಹಿಸುವ ನಿರೀಕ್ಷೆಯಿದೆ.
ಕೇಂದ್ರ ಸರ್ಕಾರ ಅಂಗನವಾಡಿ ನೌಕರರನ್ನು ಶಾಶ್ವತವಾಗಿ ನೇಮಕ ಮಾಡಬೇಕು, ಕನಿಷ್ಠ ವೇತನ ಜಾರಿಗೊಳಿಸಬೇಕು ಹಾಗೂ ಪೆನ್ಷನ್, ಗ್ರಾಚ್ಯುಟಿ ಸೇರಿದಂತೆ ಕಾನೂನುಬದ್ಧ ಸೌಲಭ್ಯಗಳನ್ನು ಒದಗಿಸಬೇಕು ಎಂಬುದು ಪ್ರಮುಖ ಬೇಡಿಕೆ ಅಗಿದೆ ಎಂದು ಅಂಗನವಾಡಿ ಕಾರ್ತಕರ್ತರೆಯ ರಾಜ್ಯ ಕಾರ್ಯದರ್ಶಿ ಜಯಮ್ಮ ತಿಳಿಸಿದರು.
ಮುಖ್ಯ ಬೇಡಿಕೆಗಳು:ಅಂಗನವಾಡಿ ನೌಕರರನ್ನು ಸಿ ಮತ್ತು ಡಿ ದರ್ಜೆಯ ಸರ್ಕಾರಿ ನೌಕರರನ್ನಾಗಿ ಖಾಯಂಗೊಳಿಸಬೇಕು.ಕನಿಷ್ಠ ವೇತನ ಜಾರಿಗೆ ಕ್ರಮವಹಿಸಬೇಕು.ಸುಪ್ರೀಂ ಕೋರ್ಟ್ ಆದೇಶದಂತೆ ಗ್ರಾಚ್ಯುಟಿ ಸೌಲಭ್ಯ ಒದಗಿಸಬೇಕು.ನಿವೃತ್ತಿಯ ನಂತರ ಮಾಸಿಕ ಪೆನ್ಷನ್ ವ್ಯವಸ್ಥೆ ಜಾರಿಗೊಳಿಸಬೇಕು.ಆರೋಗ್ಯ ವಿಮೆ ಹಾಗೂ ಎಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯ ನೀಡಬೇಕು.
ಯೋಜನೆಯ ಹೊರತಾಗಿ ಬೇರೆ ಕೆಲಸಗಳಿಗೆ ನಿಯೋಜನೆ ನಿಲ್ಲಿಸಬೇಕು.ಅಂಗನವಾಡಿ ಸೇವೆಯಲ್ಲಿರುವವರು ದೀರ್ಘಕಾಲದಿಂದ ಸಾಮಾಜಿಕ ಭದ್ರತೆ ಇಲ್ಲದೇ ಕೆಲಸ ನಿರ್ವಹಿಸುತ್ತಿದ್ದು, ಸರ್ಕಾರವು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
