Monday, April 20, 2026
Homeರಾಜ್ಯಹೀಟ್‌ವೇವ್‌ : ಕರಾವಳಿ ಭಾಗದ ಜನರಿಗೆ ಹವಾಮಾನ ಇಲಾಖೆ ಗಂಭೀರ ಎಚ್ಚರಿಕೆ

ಹೀಟ್‌ವೇವ್‌ : ಕರಾವಳಿ ಭಾಗದ ಜನರಿಗೆ ಹವಾಮಾನ ಇಲಾಖೆ ಗಂಭೀರ ಎಚ್ಚರಿಕೆ

Heatwave: Meteorological Department issues serious warning to people in coastal areas

ಬೆಂಗಳೂರು,ಏ.20- ಕರಾವಳಿ ಭಾಗದ ಜನರಿಗೆ ಹವಾಮಾನ ಇಲಾಖೆ ಗಂಭೀರ ಎಚ್ಚರಿಕೆ ನೀಡಿದೆ. ಮುಂದಿನ ಮೂರು ದಿನಗಳ ಕಾಲ ಉಷ್ಣ ಅಲೆ (ಹೀಟ್‌ವೇವ್‌‍) ಬೀಸುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ.

ಈಗಾಗಲೇ ಬಿಸಿಲಿನ ಬೇಗೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲೇ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹೀಟ್‌ವೇವ್‌‍ ಎಚ್ಚರಿಕೆ ಘೋಷಿಸಲಾಗಿದೆ.ಬೆಂಗಳೂರು ನಗರದಲ್ಲಿ 36.2 ಡಿಗ್ರಿ ಸೆಲ್ಸಿಯಸ್‌‍ ಉಷ್ಣಾಂಶ ದಾಖಲಾಗಿದ್ದು, ಇದು ವಾಡಿಕೆಗಿಂತ ಸುಮಾರು 2 ಡಿಗ್ರಿ ಹೆಚ್ಚು. ಇತ್ತ ಉತ್ತರ ಕರ್ನಾಟಕ ಭಾಗದಲ್ಲಿ ತಾಪಮಾನ ಇನ್ನಷ್ಟು ಏರಿಕೆಯಾಗಿದ್ದು, ಕೊಪ್ಪಳದಲ್ಲಿ 43 ಡಿಗ್ರಿ ಸೆಲ್ಸಿಯಸ್‌‍ ಉಷ್ಣಾಂಶ ದಾಖಲಾಗಿದೆ.

ಕಲಬುರ್ಗಿ, ಬೀದರ್‌ ಮತ್ತು ರಾಯಚೂರು ಜಿಲ್ಲೆಗಳಲ್ಲಿ 41 ಡಿಗ್ರಿ ಸೆಲ್ಸಿಯಸ್‌‍ ತಾಪಮಾನ ದಾಖಲಾಗಿದೆ.ಹವಾಮಾನ ಇಲಾಖೆ ಪ್ರಕಾರ, ಈ ತಿಂಗಳಾಂತ್ಯದೊಳಗೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ತಾಪಮಾನ ಇನ್ನೂ 1 ಡಿಗ್ರಿ ಹೆಚ್ಚಾಗುವ ಸಾಧ್ಯತೆ ಇದೆ.

ಕೆಲವು ಕಡೆಗಳಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್‌‍ವರೆಗೆ ಏರುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.ಇನ್ನೊಂದೆಡೆ, ಬಿಸಿಲಿನ ಜೊತೆಗೆ ಕೆಲವು ಜಿಲ್ಲೆಗಳಲ್ಲಿ ಮಳೆಯೂ ಸಂಭವಿಸುವ ಸೂಚನೆ ಇದೆ. ಉತ್ತರ ಕರ್ನಾಟಕದ ಬಾಗಲಕೋಟೆ, ಬೆಳಗಾವಿ, ಕಲಬುರ್ಗಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯ ಸಾಧ್ಯತೆ ಇದೆ.

ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸಹ ಗುಡುಗು, ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ. ಮುಂದಿನ ಎರಡು ದಿನಗಳ ಕಾಲ ಬಿಸಿಲಿನ ಪರಿಣಾಮ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಜನರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.

RELATED ARTICLES

Latest News