Monday, April 20, 2026
Homeರಾಷ್ಟ್ರೀಯಚಾರ್‌ಧಾಮ್‌ ಯಾತ್ರೆ ಆರಂಭ

ಚಾರ್‌ಧಾಮ್‌ ಯಾತ್ರೆ ಆರಂಭ

Gangotri and Yamunotri temples open for Char Dham Yatra

ಡೆಹ್ರಾಡೂನ್‌, ಏ.20- ಚಳಿಗಾಲದ ವಿರಾಮದ ನಂತರ ಅಕ್ಷಯ ತೃತೀಯ ಸಂದರ್ಭದಲ್ಲಿ ಉತ್ತರಾಖಂಡದ ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳ ದ್ವಾರಗಳು ತೆರೆಯಲಾಗಿದ್ದು, ನಿನ್ನೆಯಿಂದ ಚಾರ್‌ ಧಾಮ್‌ ಯಾತ್ರೆ ಪ್ರಾರಂಭವಾಗಿದೆ.

ಗಂಗೋತ್ರಿ ದೇವಾಲಯದ ದ್ವಾರಗಳು ಮಧ್ಯಾಹ್ನ 12:15 ಕ್ಕೆ ಮತ್ತು ಯಮುನೋತ್ರಿ ದೇವಾಲಯದ ದ್ವಾರಗಳು ಮಧ್ಯಾಹ್ನ 12:35 ಕ್ಕೆ ವೇದ ಮಂತ್ರಗಳ ಪಠಣದೊಂದಿಗೆ ತೆರೆಯಲಾಯಿತು. ಬಾಗಿಲುಗಳು ತೆರೆದಾಗ ನೂರಾರು ಭಕ್ತರು ಘೋಷಣೆ ಕೂಗಿ ತಮ ಭಕ್ತಿ ಭಾವ ಪ್ರದರ್ಶಿಸಿದರು.

ಉತ್ತರಕಾಶಿ ಜಿಲ್ಲೆಯ ಎರಡೂ ದೇವಾಲಯಗಳಲ್ಲಿ ಮೊದಲ ಪ್ರಾರ್ಥನೆಯನ್ನು ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಲ್ಲಿ ಸಲ್ಲಿಸಲಾಯಿತು. ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಗಂಗೋತ್ರಿ ದೇಗುಲದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ದೇಶದ ಸಮೃದ್ಧಿಗಾಗಿ ಪ್ರಾರ್ಥಿಸಿದರು.

ಸುರಕ್ಷಿತ ಮತ್ತು ಸುಗಮ ಯಾತ್ರೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರವು ವ್ಯವಸ್ಥೆಗಳನ್ನು ಮಾಡಿದೆ ಎಂದು ಧಾಮಿ ತಿಳಿಸಿದ್ದಾರೆ. ಹಸಿರು ಮತ್ತು ಸ್ವಚ್ಛ ಯಾತ್ರೆಯನ್ನು ಬೆಂಬಲಿಸುವಂತೆ ಭಕ್ತರಿಗೆ ಮನವಿ ಮಾಡಿಕೊಂಡಿದ್ದಾರೆ.ಇದೇ ಮೊದಲ ಬಾರಿಗೆ ಬದರಿನಾಥ, ಕೇದಾರನಾಥ ಮತ್ತು ಗಂಗೋತ್ರಿ ಎಂಬ ಮೂರು ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶಕ್ಕೆ ನಿರ್ಬಂಧಗಳನ್ನು ವಿಧಿಸಲಾಗಿದೆ.

ಗಂಗೋತ್ರಿ ದೇವಾಲಯ ಸಮಿತಿಯು, ಸನಾತನಿಗಳಲ್ಲದವರು ಆವರಣಕ್ಕೆ ಪ್ರವೇಶಿಸಲು ಪಂಚಗವ್ಯ (ಗೋಮೂತ್ರ, ಸಗಣಿ, ಹಾಲು, ಮೊಸರು ಮತ್ತು ತುಪ್ಪದ ಸಂಯೋಜನೆ) ಸೇವಿಸಬೇಕೆಂದು ಆದೇಶಿಸಿದೆ.ಹಿಂದೂಯೇತರರು ತಮ್ಮ ಪ್ರವೇಶಕ್ಕಾಗಿ ಸನಾತನ ಧರ್ಮದಲ್ಲಿ ನಂಬಿಕೆಯನ್ನು ದೃಢೀಕರಿಸುವ ಅಫಿಡವಿಟ್‌ ಅನ್ನು ಸಲ್ಲಿಸುವುದನ್ನು ಕಡ್ಡಾಯ ಎಂದು ಶ್ರೀ ಬದರಿನಾಥ, ಕೇದಾರನಾಥ ದೇವಾಲಯ ಸಮಿತಿ ತಿಳಿಸಿದೆ.

ಕೇದಾರನಾಥ ಮತ್ತು ಬದರಿನಾಥದ ದ್ವಾರಗಳು ಕ್ರಮವಾಗಿ ಏ. 22 ಮತ್ತು 23 ರಂದು ತೆರೆಯಲಿವೆ. ಆದರೆ, ಯಮುನೋತ್ರಿ ದೇವಾಲಯ ಸಮಿತಿಯು ಧರ್ಮವನ್ನು ಲೆಕ್ಕಿಸದೆ ಎಲ್ಲಾ ಭಕ್ತರನ್ನು ಸ್ವಾಗತಿಸಲು ನಿರ್ಧರಿಸಿದೆ. ದೇವಾಲಯದ ಆವರಣದೊಳಗೆ ಮೊಬೈಲ್‌ ಫೋನ್‌ಗಳು ಮತ್ತು ಕ್ಯಾಮೆರಾಗಳನ್ನು ಅಧಿಕಾರಿಗಳು ನಿಷೇಧಿಸಿದ್ದಾರೆ. ಈ ವರ್ಷ ಇಲ್ಲಿಯವರೆಗೆ ಸುಮಾರು 19 ಲಕ್ಷ ಭಕ್ತರು ಯಾತ್ರೆಗೆ ನೋಂದಾಯಿಸಿಕೊಂಡಿದ್ದಾರೆ. ಕಳೆದ ವರ್ಷ 51 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಚಾರ್‌ ಧಾಮ್‌ ಯಾತ್ರೆ ಕೈಗೊಂಡಿದ್ದರು.

RELATED ARTICLES

Latest News