ಲಕ್ನೋ, ಏ.20- ಮಹಿಳಾ ಮೀಸಲಾತಿ ಮಸೂದೆಗೆ ಸೋಲಾಗಿರುವುದು ಮಹಾಭಾರತದ ದ್ರೌಪದಿ ವಸ್ತ್ರಾಪಹರಣಕ್ಕೆ ಸಮ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ.
ಸಂಸತ್‌ನಲ್ಲಿ ಕಾಂಗ್ರೆಸ್, ಎಸ್‌ಪಿ, ಟಿಎಂಸಿ ಮತ್ತು ಡಿಎಂಕೆ ವರ್ತಿಸಿದ ರೀತಿಯು ದ್ರೌಪದಿಯ ವಸ್ತ್ರಾಪಹರಣ ದೃಶ್ಯದಂತಿತ್ತು. ವಿರೋಧ ಪಕ್ಷದ ನಾಯಕರು ಮಾಡಿದ ಬೇಜವಾಬ್ದಾರಿ ಹೇಳಿಕೆಗಳು, ಅವರು ಪ್ರದರ್ಶಿಸಿದ ನಡವಳಿಕೆ ಎಲ್ಲರಿಗೂ ತಿಳಿದಿದೆ ಎಂದು ಅವರು ಆರೋಪಿಸಿದ್ದಾರೆ.
ಮುಸ್ಲಿಂ ಮಹಿಳೆಯರಿಗೆ ಪ್ರತ್ಯೇಕ ಮೀಸಲಾತಿ ಬೇಡಿಕೆಯ ಬಗ್ಗೆ ಸಮಾಜವಾದಿ ಪಕ್ಷದ ನಿಲುವಿನ ಬಗ್ಗೆ ಮಾತನಾಡಿದ ಆದಿತ್ಯನಾಥ್, ಮಹಿಳಾ ಸಬಲೀಕರಣದ ಗುರಿಯನ್ನು ಹೊಂದಿರುವ ಶಾಸನದ ಬಗ್ಗೆ ಅಪ್ರಸ್ತುತ ವಿಷಯಗಳನ್ನು ಎತ್ತುವ ಪ್ರಯತ್ನಗಳು ನಡೆಯುತ್ತಿವೆ ಎಂದಿದ್ದಾರೆ. ಸಮಾಜವಾದಿಗಳು ಸಂವಿಧಾನವನ್ನು ಪ್ರಾರ್ಥಿಸುತ್ತಾರೆ. ಆದರೆ, ಡಾ. ಬಿ.ಆರ್.ಅಂಬೇಡ್ಕರ್ ಅವರ ಮನೋಭಾವಕ್ಕೆ ವಿರುದ್ಧವಾಗಿ ವರ್ತಿಸುತ್ತಾರೆ ಎಂದು ಕುಟುಕಿದ್ದಾರೆ.
ಮಹಿಳಾ ಮೀಸಲಾತಿ ಮಸೂದೆಯು ಪ್ರಗತಿಪರ ಹೆಜ್ಜೆಯಾಗಿದ್ದು, ಅದು ಯಾರ ಹಕ್ಕುಗಳನ್ನು ಕಸಿದುಕೊಳ್ಳಲಿಲ್ಲ. ಆಡಳಿತದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಿತು ಎಂದು ಅವರು ಹೇಳಿದ್ದಾರೆ.ಮಹಿಳಾ ವಿರೋಧಿಗಳಿಗೆ ಮುಂದಿನ ಚುನಾವಣೆಗಳಲ್ಲಿ ನಾಡಿನ ಮಹಿಳೆಯರೇ ತಕ್ಕ ಉತ್ತರ ನೀಡಲಿದ್ಧಾರೆ ಎಂದು ಅವರು ಎಚ್ಚರಿಸಿದ್ದಾರೆ.
