ಬೆಂಗಳೂರು, ಏ. 20- ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಹಕ್ಕಿಜ್ವರ ನಿಯಂತ್ರಣಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಆರೋಗ್ಯ ವಿಭಾಗದ ವಿಶೇಷ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಹೆಸರಘಟ್ಟ ಪ್ರದೇಶದಲ್ಲಿ ಹಕ್ಕಿಜ್ವರ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ವಲಯಗಳಲ್ಲಿ ಕಟ್ಟುನಿಟ್ಟಿನ ತಡೆ ಕ್ರಮಗಳನ್ನು ಜಾರಿಗೊಳಿಸಲು ನಿರ್ದೇಶನ ನೀಡಿದ್ದಾರೆ.
ಹಕ್ಕಿಜ್ವರವು 51 ವೈರಸ್‌ನಿಂದ ಉಂಟಾಗುವ ಸಾಂಕ್ರಾಮಿಕ ರೋಗ ಇದು ಟರ್ಕಿ, ಬಾತು, ಗಿಣಿ ಕೋಳಿ ಸೇರಿದಂತೆ ವಿವಿಧ ಹಕ್ಕಿಗಳಲ್ಲಿ ಕಂಡುಬರುತ್ತದೆ. ಸೋಂಕಿತ ಹಕ್ಕಿಗಳ ಲಾಲಾರಸ ಮತ್ತು ಮಲದ ಮೂಲಕ ಹರಡುತ್ತದೆ. ಕೆಲವೊಮ್ಮೆ ಮನುಷ್ಯರಿಗೂ ಸೋಂಕು ತಗುಲುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.
ರೋಗದ ಲಕ್ಷಣಗಳು:ಜ್ವರ, ಕೆಮ್ಮುಗಂಟಲು ನೋವು, ಸ್ನಾಯು ನೋವು, ಉಸಿರಾಟದ ತೊಂದರೆ ಹಾಗೂ ಕಣ್ಣಿನ ಸೋಂಕು ಹಕ್ಕಿಜ್ವರದ ಪ್ರಮುಖ ಲಕ್ಷಣಗಳಾಗಿವೆ.ಹೆಸರಘಟ್ಟದಲ್ಲಿ ಕಟ್ಟುನಿಟ್ಟಿನ ಕ್ರಮಗಳು:ಹೆಸರಘಟ್ಟ ಸುತ್ತಮುತ್ತ 5 ಕಡೆ ನಾಕಾಬಂದಿ ಹಾಕಿ ಕೋಳಿ ಸಾಗಣೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ.ಹೊರ ರಾಜ್ಯಗಳಿಂದ ಕೋಳಿ, ಮೊಟ್ಟೆ ಆಮದು ಸ್ಥಗಿತ ಮಾಡಲಾಗಿದೆ. ಸುಮಾರು 7,000 ಕೋಳಿಗಳ ಸಂಹಾರ ಮಾಡಲಾಗಿದೆ.
ಚೆಕ್ ಪೋಸ್ಟ್‌ಗಳು: ಸೋಲದೇವನಹಳ್ಳಿ, ಸೊನ್ನೆನಹಳ್ಳಿ, ಬ್ಯಾಲೆಕೆರೆ, ಶಿವಕೋಟೆ.ಹೆಸರಘಟ್ಟ ಭಾಗಗಳಲ್ಲಿ ನಾಕ ಬಂಧಿ ಹಾಕಿ ಕಟ್ಟೆಚ್ಚರ ವಹಿಸಲಾಗಿದೆ.ಇನ್ನೂ ಬೆಂಗಳೂರು ನಗರಕ್ಕೆ ಬರುವಂತಹ ಕೋಳಿ ಸಾಗಾಣಿಕೆ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ.
ಆರೋಗ್ಯ ಇಲಾಖೆಯ ಕ್ರಮಗಳು:ಪಶುಸಂಗೋಪನೆ, ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರ ತಂಡ ರಚನೆ ಮಾಡಿಕೊಂಡು ಮನೆ ಮನೆ ಸಮೀಕ್ಷೆ ಮೂಲಕ ಪ್ರಕರಣ ಪತ್ತೆ ಕಾರ್ಯ ವೇಗವಾಗಿ ಮಾಡಬೇಕು.ಸಾರ್ವಜನಿಕರಿಗೆ ಜಾಗೃತಿ ಮೂಡಿಸೋ ಅಭಿಯಾನ ಮಾಡಲು ಸೂಚಿಸಲಾಗಿದೆ.
ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಸೂಚನೆಗಳು:ಸತ್ತ ಅಥವಾ ಅನಾರೋಗ್ಯ ಹಕ್ಕಿಗಳ ಸಂಪರ್ಕ ತಪ್ಪಿಸಿ. ಕೋಳಿ ಮಾಂಸ ಮತ್ತು ಮೊಟ್ಟೆಗಳನ್ನು ಕನಿಷ್ಠ 70 ಉಷ್ಣಾಂಶದಲ್ಲಿ ಚೆನ್ನಾಗಿ ಬೇಯಿಸಿ ಸೇವಿಸಿ. ಸೋಂಕಿತ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಸ್ವಚ್ಛತೆ ಕಾಪಾಡಿಕೊಳ್ಳಿ, ಜ್ವರ ಅಥವಾ ಹಕ್ಕಿಜ್ವರದ ಲಕ್ಷಣ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಎಂದು ಮನವಿ ಮಾಡಿಕೊಳ್ಳಲಾಗಿದೆ.
ಕೋಳಿ ಸಾಕಣೆದಾರರು ಸುರಕ್ಷತಾ ಉಪಕರಣ ಬಳಸಬೇಕು.ಒಟ್ಟಾರೆ, ಬೆಂಗಳೂರಿನಲ್ಲಿ ಹಕ್ಕಿಜ್ವರ ಪತ್ತೆಯಾಗದಿದ್ದರೂ, ಹೆಸರಘಟ್ಟ ಪ್ರದೇಶದ ಪ್ರಕರಣಗಳಿಂದಾಗಿ ಜಿಬಿಎ ಆಡಳಿತ ಎಚ್ಚರಿಕೆ ಕ್ರಮಗಳನ್ನು ಗಟ್ಟಿಗೊಳಿಸಿದ್ದು, ಸಾರ್ವಜನಿಕರೂ ಜಾಗೃತಿಯಿಂದ ನಡೆದುಕೊಳ್ಳುವುದು ಅಗತ್ಯವಾಗಿದೆ.
