Homeರಾಜ್ಯಮೀಸಲಾತಿ ಹೆಚ್ಚಳ ಕುರಿತ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ : ಡಿಸಿಎಂ ಪರಮೇಶ್ವರ್

ಮೀಸಲಾತಿ ಹೆಚ್ಚಳ ಕುರಿತ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ : ಡಿಸಿಎಂ ಪರಮೇಶ್ವರ್

ಬೆಂಗಳೂರು, ಅ.13- ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ನೀಡಿರುವ ತೀರ್ಪಿನ ಕುರಿತು ಸಚಿವ ಸಂಪುಟದಲ್ಲಿ ಸಮಗ್ರವಾಗಿ ಚರ್ಚಿಸಿ, ಸುಪ್ರೀಂ ಕೋರ್ಟ್‌ಗೆ ಮೇಲನವಿ ಸಲ್ಲಿಸುವುದು ಸೇರಿದಂತೆ ಮುಂದಿನ ಕಾನೂ ನಾತಕ ಕ್ರಮಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ತಿಳಿಸಿದರು.

ತಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮಾಯಿ ಅವರ ಸರ್ಕಾರವು ಮೀಸಲಾತಿಯ ಶೇ.50ರ ಮಿತಿಯನ್ನು ಮೀರಿ, ಒಟ್ಟು ಮೀಸಲಾತಿಯನ್ನು ಶೇ.56ಕ್ಕೆ ಹೆಚ್ಚಿಸುವ ತೀರ್ಮಾನ ಕೈಗೊಂಡಿತ್ತು. ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಲಾಗಿತ್ತು ಎಂದು ಹೇಳಿದರು.

ಹಿಂದಿನ ಸರ್ಕಾರವು ಈ ಸಂಬಂಧ ಆದೇಶ ಹೊರಡಿಸಿ ಕ್ರಮಗಳನ್ನು ಕೈಗೊಂಡಿತ್ತು. ನಮ ಸರ್ಕಾರ ಅಧಿಕಾರಕ್ಕೆ ಬಂದ ನಂತರವೂ ಅನೇಕ ನೇಮಕಾತಿ ಪ್ರಕ್ರಿಯೆಗಳಲ್ಲಿ ಈ ಮೀಸಲಾತಿ ಪ್ರಮಾಣವನ್ನು ಅನುಸರಿಸಿದೆ. ಮೀಸಲಾತಿ ಹೆಚ್ಚಳವನ್ನು ಪ್ರಶ್ನಿಸಿ ವಿವಿಧ ವ್ಯಕ್ತಿಗಳು ನ್ಯಾಯಾಲಯದ ಮೊರೆ ಹೋದ ಸಂದರ್ಭದಲ್ಲಿ ರಾಜ್ಯ ಸರ್ಕಾರವೂ ತನ್ನ ನಿಲುವನ್ನು ಮಂಡಿಸಿ, ಮೀಸಲಾತಿ ಹೆಚ್ಚಳವನ್ನು ಎತ್ತಿಹಿಡಿಯುವಂತೆ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿತ್ತು ಎಂದು ವಿವರಿಸಿದರು.

ಮೀಸಲಾತಿ ಹೆಚ್ಚಳವನ್ನು ತಿರಸ್ಕರಿಸಿರುವ ಹೈಕೋರ್ಟ್‌ ತೀರ್ಪಿನ ಬಗ್ಗೆ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ ಅವರು, ಕರ್ನಾಟಕದ ಪರಿಸ್ಥಿತಿಯನ್ನು ಅಸಾಧಾರಣ ಸಂದರ್ಭವೆಂದು ಪರಿಗಣಿಸಿ ವಿಶೇಷ ಪ್ರಕರಣವಾಗಿ ಪರಿಶೀಲಿಸುವ ಅವಕಾಶವಿತ್ತು. ಮೀಸಲಾತಿ ಹೆಚ್ಚಳವನ್ನು ತಿರಸ್ಕರಿಸಿರುವುದು ಸಮಂಜಸವಲ್ಲ ಎಂದು ಹೇಳಿದರು.

ತಮಿಳುನಾಡಿನಲ್ಲಿ ಶೇ.69ರಷ್ಟು ಮೀಸಲಾತಿಗೆ ಸಂವಿಧಾನ ತಿದ್ದುಪಡಿಯ ಮೂಲಕ ಅವಕಾಶ ಕಲ್ಪಿಸಲಾಗಿದೆ. ಆ ರಾಜ್ಯಕ್ಕೆ ಅಂತಹ ಅವಕಾಶ ದೊರೆತಿರುವಾಗ, ಕರ್ನಾಟಕದಲ್ಲಿ ಶೇ.50ರ ಮಿತಿಗಿಂತ ಹೆಚ್ಚುವರಿಯಾಗಿ ಶೇ.6ರಷ್ಟು ಮೀಸಲಾತಿ ಕಲ್ಪಿಸಿರುವುದನ್ನೂ ಅದರ ಸಾಮಾಜಿಕ ಹಿನ್ನೆಲೆಯ ಆಧಾರದಲ್ಲಿ ವಿಶೇಷ ಪ್ರಕರಣವಾಗಿ ಪರಿಗಣಿಸಬಹುದಿತ್ತು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ತಿಳಿಸಿದರು.

ತೀರ್ಪು ಕುರಿತಂತೆ ಸುಪ್ರೀಂ ಕೋರ್ಟ್‌ಗೆ ಮೇಲನವಿ ಸಲ್ಲಿಸಬೇಕೇ? ಅಥವಾ ಸಂವಿಧಾನದ ಚೌಕಟ್ಟಿನಲ್ಲಿ ಬೇರೆ ಯಾವ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದನ್ನು ಸಚಿವ ಸಂಪುಟದಲ್ಲಿ ಚರ್ಚಿಸಲಾಗುವುದು. ಮುಖ್ಯಮಂತ್ರಿಗಳು ಹಾಗೂ ಸಚಿವ ಸಂಪುಟವು ಎಲ್ಲ ಸಾಧಕ-ಬಾಧಕಗಳನ್ನು ಪರಿಗಣಿಸಿ ಮುಂದಿನ ತೀರ್ಮಾನ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.

ಮೀಸಲಾತಿ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನ್ಯಾಯಾಧೀಶರು ಕಾನೂನಿನ ಪ್ರಕಾರ ತಮ ತೀರ್ಮಾನಗಳನ್ನು ಕೈಗೊಳ್ಳುತ್ತಾರೆ. ಸರ್ಕಾರವು ನ್ಯಾಯಾಧೀಶರ ಮೇಲೆ ಪ್ರಭಾವ ಬೀರಿ ನಿರ್ದಿಷ್ಟ ತೀರ್ಪು ನೀಡುವಂತೆ ಹೇಳಲು ಸಾಧ್ಯವಿಲ್ಲ. ನ್ಯಾಯಾಲಯದ ತೀರ್ಪನ್ನು ಕಾನೂನಿನ ಚೌಕಟ್ಟಿನಲ್ಲಿ ಮೇಲಟ್ಟದ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿದೆ. ಆ ಅವಕಾಶವನ್ನು ಬಳಸಿಕೊಳ್ಳುವ ಕುರಿತು ಸಚಿವ ಸಂಪುಟ ತೀರ್ಮಾನಿಸಲಿದೆ ಎಂದು ತಿಳಿಸಿದರು.

ಹೈಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ಈಗಾಗಲೇ ನಡೆದಿರುವ ನೇಮಕಾತಿಗಳ ಪರಿಸ್ಥಿತಿ ಏನಾಗುತ್ತದೆ? ನ್ಯಾಯಾಲಯದ ಆದೇಶವು ಹಿಂದಿನ ದಿನಾಂಕದಿಂದ ಅನ್ವಯವಾಗುತ್ತದೆಯೇ ಅಥವಾ ಮುಂದಿನ ಪ್ರಕ್ರಿಯೆಗಳಿಗೆ ಮಾತ್ರ ಅನ್ವಯವಾಗುತ್ತದೆಯೇ? ಇಂತಹ ಎಲ್ಲ ಕಾನೂನಾತಕ ಪ್ರಶ್ನೆಗಳು ಹಾಗೂ ಅವುಗಳಿಂದ ಉಂಟಾಗಬಹುದಾದ ಪರಿಣಾಮಗಳನ್ನು ಸಮಗ್ರವಾಗಿ ಚರ್ಚಿಸಬೇಕಿದೆ ಎಂದು ತಿಳಿಸಿದರು.

ಈ ಕುರಿತು ಅಡ್ವೊಕೇಟ್‌ ಜನರಲ್‌ ಹಾಗೂ ಕಾನೂನು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಕಾನೂನಿನ ಪ್ರಕಾರ ಯಾವ ಕ್ರಮಗಳು ಸಾಧ್ಯ ಎಂಬುದನ್ನು ಪರಿಶೀಲಿಸಿದ ನಂತರವೇ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈಗ ಒಟ್ಟು ಮೀಸಲಾತಿ ಪ್ರಮಾಣವನ್ನು ಕಡಿತಗೊಳಿಸಬೇಕಾದ ಪರಿಸ್ಥಿತಿ ಎದುರಾದರೆ ಒಳಮೀಸಲಾತಿ ಪ್ರಮಾಣಗಳನ್ನೂ ಅನುಪಾತದ ಆಧಾರದಲ್ಲಿ ಪರಿಷ್ಕರಿಸುವ ಸಾಧ್ಯತೆ ಇದೆ. ಗಣಿತದ ದೃಷ್ಟಿಯಿಂದ ಅಂತಹ ಪರಿಷ್ಕರಣೆ ಮಾಡುವುದು ಕಷ್ಟದ ವಿಚಾರವಲ್ಲ. ಆದರೆ ಇದರಿಂದ ವಿವಿಧ ಸಮುದಾಯಗಳಿಗೆ ದೊರೆಯಬೇಕಾದ ಅವಕಾಶಗಳು ಕಡಿಮೆಯಾಗುವ ಸಾಧ್ಯತೆಯೇ ಹೆಚ್ಚು ಆತಂಕಕಾರಿ ವಿಷಯವಾಗಿದೆ ಎಂದು ಹೇಳಿದರು.

ದೆಹಲಿ ಪ್ರತಿಭಟನೆಯಲ್ಲಿ ಭದ್ರತಾ ಸಿಬ್ಬಂದಿಗಳಿಗೆ ರಾಹುಲ್‌ ಗಾಂಧಿ ಅವರ ರಕ್ಷಣೆ ಆದ್ಯತೆಯಾಗಿರುತ್ತದೆ. ಅಂತಹ ಸಂದರ್ಭದಲ್ಲಿ ತಳ್ಳಾಟವಾಗಿದೆ. ದುರಾದೃಷ್ಟಾವಶಾತ್‌ ನಮ ಮುಖ್ಯಮಂತ್ರಿಯವರು ಅದರಲ್ಲಿ ಸಿಲುಕಿದ್ದಾರೆ ಎಂದರು.ಚುನಾವಣಾ ಅಯೋಗ ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸಿದ್ದರೆ ಈ ಪ್ರತಿಭಟನೆಗಳ ಅಗತ್ಯವೇ ಇರುತ್ತಿರಲಿಲ್ಲ. ಅರ್ಜಿ ನಮೂನೆ-7ರಲ್ಲಿ ನಿಯಮಗಳ ಉಲ್ಲಂಘನೆಯಾಗಿದೆ. ಹೆಸರುಗಳನ್ನು ಡಿಲೀಟ್‌ ಮಾಡುವಲ್ಲಿಯೂ ಪಾರದರ್ಶಕತೆ ಇಲ್ಲ ಎಂದು ಆಕ್ಷೇಪಿಸಿದರು.ವಿಪತ್ತು ನಿರ್ವಹಣೆ ಕುರಿತು ಮುಂಜಾಗ್ರತಾ ಕ್ರಮವಾಗಿ ರಾಷ್ಟ್ರ ಮಟ್ಟದ ವಿಚಾರಸಂಕಿರಣ ಆಯೋಜಿಸಿರುವುದಾಗಿ ಅವರು ತಿಳಿಸಿದರು.

RELATED ARTICLES
spot_img

Latest News