ಬೆಂಗಳೂರು, ಮಾ.7- ನಗರದ ಎನ್‌ಜಿಇಎಫ್‌ನಲ್ಲಿ ಟ್ರೀಪಾರ್ಕ್ ನಿರ್ಮಿಸಲಾಗುತ್ತಿದೆ. ಜೊತೆಗೆ ಆರ್ಟ್ಸ್ ಪಾರ್ಕ್ ನಿರ್ಮಾಣದ ಚಿಂತನೆಯೂ ಇದೆ. ಈ ಯೋಜನೆಯನ್ನು ಅಂಬಾನಿ, ಅದಾನಿಯಂತಹ ಉದ್ಯಮಿಗಳ ಒಡೆತನದ ಕಂಪನಿಗಳ ಖಾಸಗಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಅಂತಾರಾಷ್ಟ್ರೀಯ ನಗರವಾಗಿದ್ದು, ನಮಲ್ಲಿ ಒಂದು ಕನ್ವೆನ್ಷನ್ ಸೆಂಟರ್ ಇಲ್ಲ. ಅದಕ್ಕಾಗಿ ಬೆಂಗಳೂರಿನ ಮೈಸೂರುಲ್ಯಾಂಪ್‌್ಸ ಜಾಗವನ್ನು ಬಳಸಿಕೊಂಡು ಫೈವ್‌ಸ್ಟಾರ್ ಹೋಟೆಲ್, ಪ್ರದರ್ಶನ ಕೇಂದ್ರ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನಿರ್ಮಿಸಲಾಗುವುದು. ದೇಶ ವಿದೇಶದ ಗಣ್ಯರು ಆಗಮಿಸಿದಾಗ ಅಲ್ಲಿ ಅವರಿಗೆ ತಂಗಲು ಅನುಕೂಲಕರ ವಾತಾವರಣ ಕಲ್ಪಿಸುವ ಅಗತ್ಯ ಇದೆ ಎಂದರು.
ಬೆಂಗಳೂರು-ಪುಣೆ ಎಸ್ಸ್‌ಪ್ರೆಸ್ ಕಾರಿಡಾರ್ ಯೋಜನೆ ಶೀಘ್ರಗತಿಯಲ್ಲಿ ಅನುಷ್ಠಾನಕ್ಕೆ ಬರಬೇಕು. ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿ 6 ಕಾರಿಡಾರ್ ಯೋಜನೆಗಳನ್ನು ಘೋಷಿಸಿತ್ತು. ಅವುಗಳ ಜೊತೆಯಲ್ಲೇ ತಮ ಒತ್ತಡದ ಮೇಲೆ ಭರವಸೆ ದೊರೆತಿರುವ ಪುಣೆ-ಬೆಂಗಳೂರು ಕಾರಿಡಾರ್ ಯೋಜನೆಯನ್ನು ಜೊತೆಯಲ್ಲಿಯೇ ಅನುಷ್ಠಾನಕ್ಕೆ ತರಬೇಕು. ಯಾವುದೇ ಕಾರಣಕ್ಕೂ ನೆನೆಗುದಿಗೆ ಬೀಳಬಾರದು ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಪ್ರದೇಶದ ಮಾದರಿಯಲ್ಲೇ ಕಿತ್ತೂರು ಕರ್ನಾಟಕ ಭಾಗವನ್ನು ಅಭಿವೃದ್ಧಿ ಪಡಿಸಲು ಪ್ರತ್ಯೇಕವಾದ ಮಂಡಳಿ ರಚಿಸಬೇಕು ಎಂಬ ಬೇಡಿಕೆಯಿದೆ. ಉತ್ತರ ಕರ್ನಾಟಕ ಭಾಗದಂತೆಯೇ ಚಿತ್ರದುರ್ಗ ಸೇರಿ ಮಧ್ಯ ಕರ್ನಾಟಕ ಭಾಗದ ಹಲವು ಪ್ರದೇಶಗಳು ಹಿಂದುಳಿದಿವೆ. ಎಲ್ಲವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವ ಅಗತ್ಯವಿದೆ ಎಂದರು.
ನಂಜುಂಡಪ್ಪ ಸಮಿತಿ ವರದಿ ಆಧಾರದ ಮೇಲೆ ಹಿಂದುಳಿದ- ಅತೀ ಹಿಂದುಳಿದ ಪ್ರದೇಶಗಳಲ್ಲಿನ ಕೈಗಾರಿಕಾ ಸ್ಥಾಪನೆಗೆ ಶೇ.3 ರಿಂದ 4ರಷ್ಟು ರಿಯಾಯಿತಿ ನೀಡಬೇಕೆಂದು ನಿರ್ಧಾರವಾಗಿತ್ತು. ಹೊಸ ಕೈಗಾರಿಕಾ ನೀತಿಯಲ್ಲಿ ಬೆಂಗಳೂರಿನಿಂದ ಹೊರಗಡೆ ಆರಂಭಗೊಳ್ಳುವ ಕೈಗಾರಿಕೆಗಳಿಗೆ ಹೆಚ್ಚಿನ ಆಧ್ಯತೆ ನೀಡಲು ನಿರ್ಧರಿಸಲಾಗಿದೆ. ರಿಯಾಯಿತಿಯನ್ನು ಮತ್ತಷ್ಟು ಹೆಚ್ಚಿಸಲು ಅಧ್ಯಯನ ನಡೆಸು ಸಲುವಾಗಿ ಸಮಿತಿ ರಚಿಸುವುದಾಗಿ ಹೇಳಿದರು.
ಆಲಮಟ್ಟಿ ಅಣೆಕಟ್ಟು ಎತ್ತರಕ್ಕೆ ಕೃಷ್ಣಾ ನ್ಯಾಯಧೀಕರಣ ತೀರ್ಪಿನಲ್ಲಿ ನಮಗೆ ಅವಕಾಶ ಸಿಕ್ಕಿದೆ. ತೀರ್ಪಿನಲ್ಲಿ ನೀರಿನ ಹಂಚಿಕೆಯಲ್ಲಿ ಅನ್ಯಾಯವಾಗಿದೆ. ಕರ್ನಾಟಕ ಕೂಡ ಸುಪ್ರೀಂಕೋರ್ಟ್ ಮೊರೆ ಹೋಗಿದೆ. ವಿವಾದ ಸುಪ್ರಿಂಕೋರ್ಟ್‌ನಲ್ಲಿರುವುದರಿಂದಾಗಿ ಮಹಾ ರಾಷ್ಟ್ರ, ಆಂಧ್ರಪ್ರದೇಶದ ಮುಖ್ಯಮಂತ್ರಿಗಳು ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ ಎಂದರು.
ರಾಜ್ಯ ಸರ್ಕಾರ ಭೂ ಸ್ವಾಧೀನಕ್ಕೆ ಮುಂದಾಗಿದೆ. ನಮ ನೆಲದಲ್ಲಿ ನಾವು ಯೋಜನೆ ಕೈಗೊಂಡರೆ ಅದನ್ನು ತಡೆಯಲು ಯತ್ನಿಸುವುದು ಸರಿಯಲ್ಲ. ಬಜೆಟ್‌ನಲ್ಲಿ ಹಣ ನಿಗದಿ ಮಾಡದೇ ಇದ್ದರೂ, ನಾವು ಭೂ ಸ್ವಾಧೀನ ಪ್ರಕ್ರಿಯೆಗಳನ್ನು ಮುಂದುವರೆಸುತ್ತೇವೆ ಎಂದು ತಿಳಿಸಿದರು.
16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳಿಂದ ಬಳಕೆ ನಿಷೇಧಿಸುವುದು ಅಗತ್ಯ ಇದೆ. ಆಂಧ್ರಪ್ರದೇಶದಲ್ಲಿ ಈಗಾಗಲೇ 13 ವರ್ಷದ ಮಕ್ಕಳಿಗೆ ನಿರ್ಬಂಧ ವಿಧಿಸಲಾಗಿದೆ. ಚಿಕ್ಕ ಮಕ್ಕಳು ಮೊಬೈಲ್ ಬಳಸುವುದರಿಂದ ಕೆಟ್ಟ ಪರಿಣಾಮವಾಗುತ್ತಿದೆ ಎಂದು ಮಾನಸಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಅದನ್ನು ಆಧರಿಸಿ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.
ಬಜೆಟ್‌ನಲ್ಲಿ ತಾವು ಕೇಳಿದ ಯೋಜನೆಗಳನ್ನು ಮುಖ್ಯಮಂತ್ರಿ ಅವರು ಘೋಷಿಸಿದ್ದಾರೆ. ಕೈಗಾರಿಕೆ ಮತ್ತು ಮೂಲಸೌಕರ್ಯಕ್ಕೆ ಹೆಚ್ಚಿನ ಹಣ ನೀಡಿದ್ದಾರೆ. ಮೈಸೂರಿಗೆ ಏರೋಸ್ಪೇಸ್ ಕೇಳಿದ್ದೆವು. ಬೆಳಗಾವಿ, ಧಾರವಾಡದಲ್ಲಿ ಕೈಗಾರಿಕಾ ಪಾರ್ಕ್‌ಗಳಿಗೆ ಅನುಮತಿ ನೀಡಿದ್ದಾರೆ ಎಂದರು.
