ಬೆಂಗಳೂರು,ಮಾ.7- ಅಕ್ರಮವಾಗಿ ನಲೆಸಿರುವ ವಿದೇಶಿ ಪ್ರಜೆಗಳ ವಿರುದ್ಧ ನಗರ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದು, ಎಂಟ್ಹತ್ತು ದಿನಗಳಲ್ಲಿ 200ಕ್ಕೂ ಹೆಚ್ಚು ವಿದೇಶಿಗರನ್ನು ಪತ್ತೆಹಚ್ಚಿದ್ದಾರೆ.
ಇವರುಗಳಲ್ಲಿ ಬಾಂಗ್ಲಾ ದೇಶ ಮತ್ತು ಆಫ್ರಿಕಾ ಮೂಲದವರೇ ಹೆಚ್ಚು ಇದ್ದಾರೆ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಅವರ ಆದೇಶದಂತೆ ಸಿಸಿಬಿ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ಈ ಕಾರ್ಯಾಚರಣೆ ನಡೆಸುತ್ತಿವೆ.
ಕಳೆದ ಎರಡು ವಾರದಿಂದ ನಿರಂತರವಾಗಿ ನಡೆಯುತ್ತಿರುವ ಈ ಕಾರ್ಯಾಚರಣೆಯಲ್ಲಿ ನಗರದ ವಿವಿಧ ಪ್ರದೇಶಗಳಲ್ಲಿ ಪೊಲೀಸರು ತಪಾಸಣೆ ನಡೆಸಿ ನಗರದಲ್ಲಿ ಅಕ್ರಮವಾಗಿ ವಾಸಿಸಿರುವ ವಿದೇಶಿ ಪ್ರಜೆಗಳನ್ನು ಪತ್ತೆ ಹಚ್ಚಿದ್ದಾರೆ.
ಪತ್ತೆಯಾದ ಅಕ್ರಮ ವಲಸಿಗರನ್ನು ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಓ) ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಕಾರ್ಯ ಈಗಾಗಲೇ ಆರಂಭವಾಗಿದೆ.
ಇತ್ತೀಚೆಗೆ ಪೂರ್ವವಿಭಾಗ ಒಂದರಲ್ಲೇ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಒಂದೇ ದಿನ 2 ಸಾವಿರ ಹೆಚ್ಚು ವಿದೇಶಿಗರ ದಾಖಲೆ ಗಳನ್ನು ಪರಿಶೀಲನೆ ಮಾಡಿದರು. ಅದರಲ್ಲಿ ಕೆಲವರ ವೀಸಾ ಅವಧಿ ಮುಗಿದಿತ್ತು.
ಎಚ್ಚರಿಕೆ:
ವಿದೇಶಿಗರಿಗೆ ಬಾಡಿಗೆಗೆ ಮನೆ ನೀಡುವ ಮಾಲೀಕರು ಮಾಹಿತಿಯನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ನೀಡಬೇಕೆಂದು ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ತಿಳಿಸಿದ್ದಾರೆ.
ವಿದೇಶಿಗರು ವಾಸಿಸುವ ಬಗ್ಗೆ ಮಾಹಿತಿ ನೀಡದ ಮನೆಯ ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
