Sunday, April 12, 2026
Homeರಾಜ್ಯಧರ್ಮ ಮತ್ತು ಕಾಯಕ ಬೇರೆ ಅಲ್ಲ : ಬಸವರಾಜ ಬೊಮ್ಮಾಯಿ

ಧರ್ಮ ಮತ್ತು ಕಾಯಕ ಬೇರೆ ಅಲ್ಲ : ಬಸವರಾಜ ಬೊಮ್ಮಾಯಿ

Religion and Kayak are not different: Basavaraj Bommai

ಹಾವೇರಿ,ಮಾ.7- ಹಣೆ ಬರಹ ಬದಲಿಸಲು ಕೈಯಲ್ಲಿನ ಗೆರೆ ಸವೆಯುವ ಹಾಗೆ ದುಡಿಯಬೇಕು. ನಮ್ಮದು ಹಿಂದೂ ಸನಾತನ ಧರ್ಮ, ನಮ್ಮ ಧರ್ಮವೇ ಕಾಯಕ ಧರ್ಮ, ಅದನ್ನೇ ಬಸವಣ್ಣನವರು ಹೇಳಿದ್ದು, ಧರ್ಮ ಮತ್ತು ಕಾಯಕ ಬೇರೆ ಅಲ್ಲ. ಕಾಯಕ ಮಾಡುವಾಗ ಯಾರೇ ಬಂದರೂ ತಲೆ ಕೆಡಿಸಿಕೊಳ್ಳಬಾರದು. ಕಾಯಕ ಮಾಡುವುದರಿಂದ ಕೈಲಾಸ ಕಾಣಬಹುದು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಶಿಗ್ಗಾಂವ ನಗರದ ವಿರಕ್ತಮಠದಲ್ಲಿ 33 ನೆಯ ಶರಣ ಸಂಸ್ಕೃತಿ ಉತ್ಸವ -2026 ಲಿಂಗೈಕ್ಯ ಶ್ರೀ ಸಂಗನಬಸವ ಮಹಾಸ್ವಾಮಿಗಳವರ ಹಾಗೂ ಲಿಂಗೈಕ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮನುಷ್ಯನ ಬದುಕು ಬಹಳ ವಿಚಿತ್ರ ಇದೆ. ಯಾಕೆ ಹುಟ್ಟಿದ್ದೇವೆ ಅನ್ನುವುದು ಗೊತ್ತಿಲ್ಲ. ಹುಟ್ಟು , ಸಾವು ನಮ ಕೈಯಲ್ಲಿಲ್ಲ. ಅದರ ಬಗ್ಗೆ ಚಿಂತೆ ಮಾಡುತ್ತೇವೆ. ಬದುಕು ನಮ ಕೈಯಲ್ಲಿದೆ. ಆದರೆ, ಅದರ ಬಗ್ಗೆ ಚಿಂತೆ ಮಾಡುವುದಿಲ್ಲ. ನಮ ಕಾಯಕದ ಬಗ್ಗೆ ಚಿಂತೆ ಮಾಡುವುದಿಲ್ಲ. ಇಲ್ಲದ ವಿಚಾರಗಳ ಬಗ್ಗೆ ಚಿಂತೆ ಮಾಡುವುದೇ ಹೆಚ್ಚು ಎಂದರು.

ಮನುಷ್ಯನಿಗೆ ಎಲ್ಲವೂ ಕೊರತೆ, ಸಿಎಂ ಸಿದ್ದರಾಮಯ್ಯ ಈ ಬಾರಿಯೂ ಕೊರತೆ ಬಜೆಟ್‌ ಮಾಡಿದ್ದಾರೆ. ಜಗತ್ತಲ್ಲಿ ಎಲ್ಲವೂ ಇದ್ದರೆ ಜಗತ್ತು ನಾಶವಾಗುತ್ತದೆ. ಏನಾದರೂ ಕೊರತೆ ಇದ್ದಾಗ ಮನುಷ್ಯ ದುಡಿಯುತ್ತಾನೆ. ಶಾಸಕ, ಮಂತ್ರಿ, ಡಿಸಿಎಂ, ಸಿಎಂ ಆಗಿ ನಂತರ ಪ್ರಧಾನಿ ಆಗಬೇಕೆಂಬ ಆಸೆ ಇರುತ್ತದೆ. ಪ್ರತಿಯೊಬ್ಬರ ಮನಸಲ್ಲಿ ಕೊರತೆಯ ಬಜೆಟ್‌ ಇದ್ದೇ ಇರುತ್ತದೆ. ಕೊರತೆ ಇದ್ದರೆ ಕೊರಗಬಾರದು ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಕರ್ತವ್ಯ ಮತ್ತು ಕಾಯಕದ ನಡುವೆ ವ್ಯತ್ಯಾಸ ಇದೆ. ಕರ್ತವ್ಯಕ್ಕೆ ಸಮಯ ಇದೆ. ಕಾಯಕಕ್ಕೆ ನಿರ್ದಿಷ್ಟ ಸಮಯವಿಲ್ಲ. ಕಾಯಕದಿಂದ ಬಂದ ಫಲವನ್ನು ದಾಸೋಹಕ್ಕೆ ಕೊಡಬೇಕು. ಉತ್ತಮವಾದ ಸಮಾಜ ನಿರ್ಮಾಣ ಮಾಡುವುದು ಶಿಗ್ಗಾವಿ ವಿರಕ್ತ ಮಠದ ಪರಂಪರೆ, ಈ ಮಠದ ಖ್ಯಾತಿ ಇಡೀ ನಾಡಿನಾದ್ಯಂತ ಬೆಳೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬದುಕೇ ಶಾಶ್ವತ ಅಲ್ಲ, ಇನ್ನು ಅಧಿಕಾರ ಎಲ್ಲಿ ಶಾಶ್ವತ? ನಾವು ಮಾಡಿರುವ ಕೆಲಸ ಶಾಶ್ವತವಾಗಿರುತ್ತವೆ. ಕೃಷ್ಣ ಭಗವದ್ಗೀತೆಯಲ್ಲಿ ನೀನು ನಿನ್ನ ಕಾಯಕ ಮಾಡು ಫಲಾಫಲ ನಾನು ಕೊಡುತ್ತೇನೆ ಎಂದು ಹೇಳಿದ್ದಾನೆ. ನಮ ಕೊರತೆಯ ಬಗ್ಗೆ ಕೊರಗುವುದು ಬೇಡ ಎಂದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲ ತಾಣ ನಿಷೇಧ ಮಾಡುವುದಾಗಿ ಹೇಳಿದ್ದಾರೆ. ಅದನ್ನು ಹೇಗೆ ನಿಯಂತ್ರಿಸುತ್ತಾರೆ ಎನ್ನುವುದು ಗೊತ್ತಿಲ್ಲ. ಒಂಬತ್ತು ತಿಂಗಳ ಮಗುವಿಗೆ ಊಟ ಮಾಡಿಸಲು ಮೊಬೈಲ್‌ ಬೇಕಿದೆ. ಇನ್ನು 16 ವರ್ಷದ ಮಕ್ಕಳನ್ನು ಹೇಗೆ ನಿಯಂತ್ರಣ ಮಾಡುತ್ತಾರೋ ಗೊತ್ತಿಲ್ಲ. ಆದರೆ, ಆ ಕೆಲಸ ಮಾಡಲಿ. ಅದರಿಂದ ಬಹಳಷ್ಟು ಮಕ್ಕಳಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿರಕ್ತಮಠದ ಶ್ರೀ ಸಂಗನಬಸವ ಮಹಾಸ್ವಾಮಿಗಳು, ಶ್ರೀ ಬಸವಲಿಂಗ ದೇವರು, ಮರಿ ಸ್ವಾಮಿಗಳು, ಶ್ರೀ ಡಾ.ಎ.ಸಿ .ವಾಲಿ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಜಿ.ಟಿ.ಟಿ.ಸಿ.ವಲಯ ಮುಖ್ಯಸ್ಥ ಶಿವಾನಂದ ಕುಂಬಾರ, ದುಂಢಸಿ ವಲಯ ಅರಣ್ಯಾಧಿಕಾರಿ ಕೆ.ಮಲ್ಲಪ್ಪ, ವಾಗಿ ಕಗ್ಗ ನಟೇಶ, ನಿವೃತ್ತ ಪ್ರಾಚಾರ್ಯ ಜಿ.ಎನ್‌.ಯಲಿಗಾರ, ಮುಖಂಡರಾದ ಶಿವಾನಂದ ಮ್ಯಾಗೇರಿ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.

RELATED ARTICLES

Latest News