ಬೆಂಗಳೂರು.ಫೆ.16- ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸುಳ್ಳು ಮಾಹಿತಿ ನೀಡಿದ ಆರೋಪದ ಮೇಲೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಳಿಸಿ ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಸುಬ್ಬಾರೆಡ್ಡಿ ಅವರ ನಾಮಪತ್ರದಲ್ಲಿ ದೋಷಗಳಿದ್ದು, ಆಸ್ತಿ ವಿವರಗಳನ್ನು ಮುಚ್ಚಿಟ್ಟು ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂಬ ಆರೋಪದ ಮೇಲೆ ಬಿಜೆಪಿ ಪರಾಜಿತ ಅಭ್ಯರ್ಥಿ ಸಿ. ಮುನಿರಾಜು ಸಲ್ಲಿಸಿದ್ದ ಚುನಾವಣಾ ಪಿಟಿಷನ್‌ಗೆ ಸಂಬಂಧಿಸಿದಂತೆ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ.ಜಿ.ಎಸ್. ಕಮಾಲ್ ಅವರ ಪೀಠ ಮಹತ್ವದ ಆದೇಶ ನೀಡಿದೆ.
ಇನ್ನು ಅಸಿಂಧುಗೊಳಿಸಿದ ಆದೇಶವನ್ನು ಕೋರ್ಟ್, ಚುನಾವಣಾ ಆಯೋಗ ಹಾಗೂ ವಿಧಾನಸಭೆ ಕಾರ್ಯದರ್ಶಿಗೂ ರವಾನಿಸಿದೆ. ಎದುರಾಳಿ ಅಭ್ಯರ್ಥಿಯಾಗಿದ್ದ ಸಿ.ಮುನಿರಾಜು ವಿಜಯಿ ಎಂದು ಘೋಷಿಸಲು ಹೈಕೋರ್ಟ್ ನಿರಾಕರಿಸಿದೆ.ಸುಪ್ರೀಂ ಕೋರ್ಟ್‌ಗೆ ಮೇಲನವಿ ಸಲ್ಲಿಸುವುದು ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಇಂಡಿಯಾಕ್ಕೆ ಮೇಲನವಿ ಸಲ್ಲಿಸಬಹುದು.
ಮೇಲನವಿ ಸಲ್ಲಿಕೆವರೆಗೆ ತನ್ನ ಆದೇಶಕ್ಕೆ ತಡೆಯಾಜ್ಞೆ ನೀಡಲು ಎಸ್.ಎನ್.ಸುಬ್ಬಾರೆಡ್ಡಿ ಪರ ಹಿರಿಯ ವಕೀಲ ಜಯಕುಮಾರ್ ಎಸ್.ಪಾಟೀಲ್ ಮನವಿ ಮಾಡಿದ್ದರು. ಆದರೆ, ಈ ಮನವಿಗೆ ಅರ್ಜಿದಾರರ ಪರ ಹಿರಿಯ ವಕೀಲೆ ನಳಿನಾ ಮಾಯಗೌಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇನ್ನು ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್‌ಗೆ ತಡೆಯಾಜ್ಞೆ ಕೋರಿ ಮೇಲನವಿ ಸಲ್ಲಿಸಲು ಎಸ್.ಎನ್.ಸುಬ್ಬಾರೆಡ್ಡಿ ಅವರಿಗೆ ಅವಕಾಶ ಇದ್ದು, ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ 6 ತಿಂಗಳೊಳಗಾಗಿ ತಡೆಯಾಜ್ಞೆ ನೀಡದಿದ್ದರೆ, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ಮರು ಚುನಾವಣೆ ನಡೆಸಬೇಕಾಗುತ್ತದೆ.
ಪ್ರಕರಣದ ಹಿನ್ನೆಲೆ:
ಬಿಜೆಪಿ ಅಭ್ಯರ್ಥಿ ಸಿ. ಮುನಿರಾಜು ಅವರು ಸಲ್ಲಿಸಿದ್ದ ಅರ್ಜಿಯಲ್ಲಿ ಸುಬ್ಬಾರೆಡ್ಡಿ ಅವರು ನಾಮಪತ್ರದಲ್ಲಿ ಆಸ್ತಿಗಳ ತೆರಿಗೆ ಪಾವತಿ ಬಾಕಿ ಮಾಹಿತಿ ಉಲ್ಲೇಖಿಸದೇ ಇರುವುದು ಮತ್ತು ಇತರ ಆಸ್ತಿ ವಿವರಗಳಲ್ಲಿ ಸುಳ್ಳು ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು. ಹೈಕೋರ್ಟ್ ವಿಚಾರಣೆಯಲ್ಲಿ ಈ ಆರೋಪಗಳನ್ನು ಪರಿಶೀಲಿಸಿ ಶಾಸಕರ ಆಯ್ಕೆಯನ್ನು ಅಸಿಂಧುಗೊಳಿಸುವ ನಿಟ್ಟಿನಲ್ಲಿ ಆದೇಶ ನೀಡಿದೆ ಎಂದು ವರದಿಯಾಗಿದೆ.
ಈ ಹಿಂದೆಯೂ ಶಾಸಕರ ಮಧ್ಯಂತರ ಅರ್ಜಿಗಳು ವಜಾಗೊಂಡಿದ್ದು, 2025ರ ಆಗಸ್ಟ್‌ನಲ್ಲಿ ಕೋರ್ಟ್‌ಗೆ ಹಾಜರಾಗದಿದ್ದಕ್ಕೆ 10,000 ರೂ. ದಂಡ ವಿಧಿಸಲಾಗಿತ್ತು.2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಎಸ್.ಎನ್. ಸುಬ್ಬಾರೆಡ್ಡಿ ಗೆಲುವು ಸಾಧಿಸಿದ್ದರು.
ಆದರೆ, ಬಿಜೆಪಿಯಿಂದ ಸ್ಪರ್ಧೆ ಮಾಡಿ ಸೋಲುಕಂಡಿದ್ದ ಮುನಿರಾಜು, ಸುಬ್ಬಾರೆಡ್ಡಿ ನಾಮಪತ್ರ ಕ್ರಮವಾಗಿಲ್ಲ. ಚುನಾವಣೆಯಲ್ಲಿ ಎಸ್.ಎನ್. ಸುಬ್ಬಾರೆಡ್ಡಿ ಸಲ್ಲಿಸಿದ್ದ ನಾಮಪತ್ರ ದೋಷದಿಂದ ಕೂಡಿದೆ. ತಮ್ಮ ಆಸ್ತಿ ವಿವರಗಳನ್ನು ಮುಚ್ಚಿಟ್ಟು ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದಾರೆ.
ಜತೆಗೆ ಆಸ್ತಿಗಳ ತೆರಿಗೆ ಪಾವತಿ ಬಾಕಿ ಮಾಹಿತಿಯನ್ನು ಪ್ರಮಾಣಪತ್ರದಲ್ಲಿ ಉಲ್ಲೇಖಿಸಿಲ್ಲ. ಹಾಗಾಗಿ ಅವರ ಆಯ್ಕೆಯನ್ನು ಅನೂರ್ಜಿತಗೊಳಿಸಬೇಕೆಂದು ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು.
ಇನ್ನೊಂದೆಡೆ ಆ ಅರ್ಜಿಯನ್ನು ವಜಾಗೊಳಿಸಲು ಎಸ್.ಎನ್. ಸುಬ್ಬಾರೆಡ್ಡಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಳಿಸಿದ್ದು, ಕಾನೂನು ಹೋರಾಟದದಲ್ಲಿ ಬಿಜೆಪಿ ಪರಾಜಿತ ಅಭ್ಯರ್ಥಿ ಮುನಿರಾಜುಗೆ ಗೆಲುವು ಸಿಕ್ಕಿದೆ.
