ಬೆಂಗಳೂರು,ಜು.3- ಕರ್ನಾಟಕದಲ್ಲಿ ಅಕ್ರಮ ಮತದಾರರ ಪಟ್ಟಿ ತಯಾರು ಮಾಡಲು ರಾಜ್ಯಸರ್ಕಾರ ಮುಂದಾಗಿದ್ದು, ಇದಕ್ಕಾಗಿ ಬಾಂಗ್ಲಾ ದೇಶದ ಅಲ್ಪಸಂಖ್ಯಾತರನ್ನು ಕರೆದುಕೊಂಡು ಬಂದಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸ್ಫೋಟಕ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಚುನಾವಣಾ ಆಯೋಗಕ್ಕೆ ಎರಡು ಪತ್ರ ಬರೆದಿದ್ದು, ಜಿಬಿಎನ 27 ವಾರ್ಡ್ ಗಳಲ್ಲಿ ಎರಡೆರಡು ಎಸ್‌ಐಆರ್ ನಡೆಯುತ್ತಿದೆ. ರಾಹುಲ್ ಗಾಂಧಿ ಅವರನ್ನು ತೃಪ್ತಿಪಡಿಸಲು ಕಾಂಗ್ರೆಸ್ ಈ ಕೆಲಸ ಮಾಡುತ್ತಿದೆ. ರಾಜ್ಯ ಚುನಾವಣಾ ಆಯೋಗ ಇನ್ನೊಂದು ಎಸ್‌ಐಆರ್ ಮಾಡುತ್ತಿದೆ. ತಕ್ಷಣ ಇದನ್ನು ನಿಲ್ಲಿಸಲು ಪತ್ರದಲ್ಲಿ ಕೋರಿದ್ದೇನೆ ಎಂದರು.
8 ವರ್ಷಗಳ ಹಿಂದೆ ರೈಲಿನಲ್ಲಿ ಯುವಕರನ್ನು ವೋಟ್ ಹಾಕಿಸಲು ಕರೆತಂದಿದ್ದರು. ಆ ಅಕ್ರಮ ಬಾಂಗ್ಲಾದೇಶಿ ಮತದಾರರನ್ನು ಸಕ್ರಮ ಮಾಡಲು ಕಾಂಗ್ರೆಸ್ ಮುಂದಾಗಿದೆ. ಪ.ಬಂಗಾಳದಿಂದ ಓಡಿಸಲ್ಪಟ್ಟ ಸಾವಿರಾರು ಜನ ಕರ್ನಾಟಕಕ್ಕೆ ಬಂದು ಆಶ್ರಯ ಪಡೆದಿದ್ದಾರೆ. ಕಾಂಗ್ರೆಸ್ ನಾಯಕರ ಮೌಖಿಕ ಆದೇಶದ ಮೇಲೆ ಇಂತಹವರನ್ನ ವೋಟರ್ ಲೀಸ್ಟ್‌ನಲ್ಲಿ ಸೇರ್ಪಡೆ ಮಾಡುತ್ತಿದ್ದಾರೆ. ಎನ್ಯುಮರೇಷನ್ ಫಾರಮ್ ಮಸೀದಿಗಳಲ್ಲಿ ಕೊಡುತ್ತಿದ್ದಾರೆ. ಅವರಿಗೆ ಅಡ್ರೆಸ್, ಮನೆ ನಂಬರ್ ಎಲ್ಲವನ್ನೂ ಕೊಡಲಾಗುತ್ತಿದೆ ಎಂದು ದೂರಿದರು.
ಬಿಎಲ್‌ಓಗಳು ಮನೆ ಮನೆಗೆ ಹೋಗಿ ಪರಿಶೀಲಿಸಬೇಕಿತ್ತು. ಚುನಾವಣಾ ಆಯೋಗ ನೀಡಿದ ಎಲ್ಲ ಸೂಚನೆ ಉಲ್ಲಂಘನೆ ಮಾಡಲಾಗುತ್ತಿದೆ. ಸೈಬರ್ ಕೇಂದ್ರಗಳಲ್ಲಿ ಬರ್ತ್ ಸರ್ಟಿಫಿಕೇಟ್ ಕೊಡುತ್ತಿದ್ದಾರೆ. ಶಾಶ್ವತ ನಿವಾಸಿ ದೃಢೀಕರಣ ಪತ್ರ ಕೊಡುತ್ತೇವೆ ಎಂದು ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ. ಅಕ್ರಮವಾಗಿ ಪಕ್ಷವನ್ನು ಮುಂದಿನ ಬಾರಿ ಅಧಿಕಾರಕ್ಕೆ ಬರಲು ಈ ಪ್ಲಾನ್ ಎಂದು ಆರೋಪಿಸಿದರು.
ಜಿಬಿಎ ಚುನಾವಣೆ ಗೆಲ್ಲಲು ಅಕ್ರಮ ಮತದಾರರಪಟ್ಟಿ ಮಾಡಿದ್ದಾರೆ, ಕಾಂಗ್ರೆಸ್‌ಗೆ ಬಹುಸಂಖ್ಯಾತರ ಮತ ಬೇಡ. ಮಸೀದಿಯಲ್ಲಿ ಎಸ್‌ಐಆರ್ ಮಾಡುತ್ತಿದ್ದೀರಲ್ಲ? ಅಲ್ಪಸಂಖ್ಯಾತರನ್ನ ಮತಪಟ್ಟಿಗೆ ಸೇರಿಸಲು ಈ ಕೆಲಸ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಈಗ ಆಗಿರುವ ಎಸ್‌ಐಆರ್ ಮರುಪರಿಶೀಲನೆ ಆಗಬೇಕು. ಸಿಎಂ ಆದೇಶದಂತೆ ಅಕ್ರಮ ಮತದಾರರನ್ನು ಪಟ್ಟಿಗೆ ಸೇರಿಸುವ ಕೆಲಸ ನಡೆಯುತ್ತಿದೆ. ಬಿಎಲ್‌ಓಗಳಿಗೆ ಸರಿಯಾದ ತರಬೇತಿ ಕೊಟ್ಟಿಲ್ಲ. ಕೇವಲ ಕಾಂಗ್ರೆಸ್‌ನ ಬಿಎಲ್‌ಎಗಳ ಮುಂದೆ ಎಸ್‌ಐಆರ್ ಆಗುತ್ತಿದೆ. ಕೇಂದ್ರ ಚುನಾವಣಾ ಆಯೋಗ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದರು.
ನಾನು ಈ ನಿಟ್ಟಿನಲ್ಲಿ ಪತ್ರ ಬರೆದಿದ್ದೇನೆ.ಕೇಂದ್ರ ಚುನಾವಣಾ ಆಯೋಗ ಹೇಗೆ ಪರಿಗಣಿಸುತ್ತದೆಯೋ ನೋಡಬೇಕು. ನ್ಯಾಯಾಲಯಕ್ಕೂ ಹೋಗುವ ಬಗ್ಗೆ ನಾವು ತೀರ್ಮಾನ ಮಾಡಿದ್ದೇವೆ. ಅಲ್ಪಸಂಖ್ಯಾತರು ಯಾರು ಈ ರಾಜ್ಯದವರು ಇದ್ದಾರೋ ಅವರು ಸೇರುವ ಬಗ್ಗೆ ನಮ ತಕರಾರು ಇಲ್ಲ. ಆದರೆ ಅಕ್ರಮವಾಗಿರುವವರನ್ನು ಸಕ್ರಮ ಮಾಡುವುದು ಎಷ್ಟು ಸರಿ? ಎಂದು ಅವರು ಪ್ರಶ್ನಿಸಿದ್ದಾರೆ.
