Saturday, January 3, 2026
Homeರಾಜ್ಯಬಳ್ಳಾರಿ ಘರ್ಷಣೆ : ಶಾಸಕ ನಾರಾ ಭರತ್‌ ರೆಡ್ಡಿ ಸೇರಿ 41 ಮಂದಿ ವಿರುದ್ಧ ಎಫ್‌ಐಆರ್‌

ಬಳ್ಳಾರಿ ಘರ್ಷಣೆ : ಶಾಸಕ ನಾರಾ ಭರತ್‌ ರೆಡ್ಡಿ ಸೇರಿ 41 ಮಂದಿ ವಿರುದ್ಧ ಎಫ್‌ಐಆರ್‌

Bellary clash: FIR against MLA Nara Bharat Reddy and 41 others

ಬಳ್ಳಾರಿ,ಜ.3- ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿರುವ ಗಣಿ ಜಿಲ್ಲೆ ಬಳ್ಳಾರಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಶಾಸಕ ನಾರಾ ಭರತ್‌ ರೆಡ್ಡಿ ಸೇರಿದಂತೆ ಹಲವರ ವಿರುದ್ಧ ಬ್ರೂಸ್‌‍ಪೇಟೆ ಪೋಲಿಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ, ಮಾಜಿ ಸಚಿವ ಶ್ರೀರಾಮುಲು, ಮಾಜಿ ಶಾಸಕ ಸೋಮಶೇಖರ ರೆಡ್ಡಿ ಸೇರಿದಂತೆ ಹಲವರ ವಿರುದ್ಧ ಎಫ್‌ಐಆರ್‌ ದಾಖಲಾದ ಬೆನ್ನಲ್ಲೇ, ಪ್ರತಿದೂರು ಆಧರಿಸಿ ನಾರಾ ಭರತ್‌ ರೆಡ್ಡಿ ಸೇರಿದಂತೆ ಒಟ್ಟು 41 ಮಂದಿ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿಕೊಳ್ಳಲಾಗಿದೆ.

ಬಳ್ಳಾರಿ ನಗರ ಶಾಸಕ ನಾರಾ ಭರತ್‌ ರೆಡ್ಡಿ ಆಪ್ತ ಸತೀಶ್‌ ರೆಡ್ಡಿ, ಚಾನಾಳ್‌ ಶೇಖರ್‌, ನಾರಾ ಪ್ರತಾಪ್‌ ರೆಡ್ಡಿ, ನಾರಾ ಸೂರ್ಯನಾರಾಯಣರೆಡ್ಡಿ ಸೇರಿ ಹಲವರ ಹೆಸರನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಶಾಸಕ ಜನಾರ್ದನರೆಡ್ಡಿ, ಬಿಜೆಪಿ ಕಾರ್ಯಕರ್ತ ನಾಗರಾಜ್‌ ನೀಡಿದ್ದ ದೂರಿನ ಆಧಾರದ ಮೇಲೆ ಪೊಲೀಸರು ಈ ಕ್ರಮ ತೆಗೆದುಕೊಂಡಿದ್ದಾರೆ.

ನನ್ನ ಮನೆ ಮೇಲೂ ಫೈರಿಂಗ್‌ ನಡೆದಿದೆ. ನನ್ನ ಮೇಲೂ ದಾಳಿ ಮಾಡಲು ಯತ್ನಿಸಿದ್ದಾರೆ. ಹಲ್ಲೆ, ಕೊಲೆ ಯತ್ನ ಆರೋಪದಡಿ ಜನಾರ್ದನರೆಡ್ಡಿ ದೂರು ನೀಡಿದ್ದರು. ಮತ್ತೊಂದೆಡೆ ಅಕ್ರಮ ಪ್ರವೇಶ, ಜಾತಿ ನಿಂದನೆ, ಕೊಲೆ ಯತ್ನ ಹಾಗೂ ಗಲಾಟೆ ಆರೋಪದಡಿ ಬಿಜೆಪಿ ಕಾರ್ಯಕರ್ತ ನಾಗರಾಜ್‌ ಕೂಡ ಶಾಸಕ ಭರತ್‌ ರೆಡ್ಡಿ ಸೇರಿ ಹಲವರ ವಿರುದ್ಧ ದೂರು ನೀಡಿದ್ದರು.

ಜನಾರ್ದನ ರೆಡ್ಡಿ ಅವರ ಬೆಂಬಲಿಗ ನಾಗರಾಜ್‌ ನೀಡಿದ ದೂರಿನ ಮೇರೆಗೆ ಅಟ್ರಾಸಿಟಿ ಕೇಸ್‌‍ (ಜಾತಿ ನಿಂದನೆ ಪ್ರಕರಣ) ದಾಖಲು ಮಾಡಿದ ಪೊಲೀಸರು, ಬಳ್ಳಾರಿ ನಗರ ಶಾಸಕ ನಾರಾ ಭರತ್‌ ರೆಡ್ಡಿ ಸೇರಿ ಇತರರ ವಿರುದ್ದ ಎಫ್‌ಐಆರ್‌ ದಾಖಲಿಸಿದ್ದಾರೆ.

ಜನಾರ್ದನ ರೆಡ್ಡಿ ನೀಡಿರುವ ದೂರಿನಲ್ಲಿ ಐದನೇ ಹೆಸರು ಶಾಸಕ ಭರತ್‌ ರೆಡ್ಡಿ ಆಗಿದ್ದು, ನಾಗರಾಜ್‌ ನೀಡಿದ ದೂರಿನಲ್ಲಿ ಮೂರನೇ ಹೆಸರು ಶಾಸಕ ಭರತ್‌ ರೆಡ್ಡಿ ಆಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸಿಸಿಟಿ ದೃಶ್ಯಾವಳಿ, ಸಾಕ್ಷಿಗಳ ಹೇಳಿಕೆ ಮತ್ತು ಇತರ ಪುರಾವೆಗಳನ್ನು ಸಂಗ್ರಸಲಾಗುತ್ತಿದೆ ಎಂದು ಪೊಲೀಸ್‌‍ ಮೂಲಗಳು ತಿಳಿಸಿವೆ.

ಈಗಾಗಲೇ ಈ ಸಂಬಂಧ ಶಾಸಕ ಜನಾರ್ದನ ರೆಡ್ಡಿ, ಸೋಮಶೇಖರ್‌ ರೆಡ್ಡಿ, ಮಾಜಿ ಸಚಿವ ಶ್ರೀರಾಮುಲು, ಅಲಿಖಾನ್‌, ದಮೂರ ಶೇಖರ್‌, ಮೋತ್ಕರ್‌ ಶ್ರೀನಿವಾಸ್‌‍, ಪ್ರಕಾಶ್‌ ರೆಡ್ಡಿ, ರಮಣ, ಪಾಲನ್ನ, ದಿವಾಕರ್‌ ಹಾಗೂ ಮಾರುತಿ ಪ್ರಸಾದ್‌ ರುದ್ಧ ಬ್ರೂಸ್‌‍ಪೇಟೆ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಏನಿದು ಪ್ರಕರಣ? :
ಇಂದು ಬಳ್ಳಾರಿಯಲ್ಲಿ ವಾಲೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮ ನಡೆಯಬೇಕಿದ್ದ ಹಿನ್ನೆಲೆಯಲ್ಲಿ ಮೊನ್ನೆ ಬಳ್ಳಾರಿಯ ಹವಂಬಾ ನಗರದಲ್ಲಿರುವ ಜನಾರ್ದನ ರೆಡ್ಡಿ ಮನೆ ಮುಂಭಾಗ ಬ್ಯಾನರ್‌ ಅಳವಡಿಕೆ ಮಾಡಲು ಒಂದು ಗುಂಪು ಮುಂದಾಗಿತ್ತು. ಈ ವೇಳೆ ಗಲಾಟೆ ಪ್ರಾರಂಭವಾಗಿತ್ತು. ಗಲಾಟೆ ಕೋಪಕ್ಕೆ ತಿರುಗಿ ಶಾಸಕ ಭರತ್‌ ರೆಡ್ಡಿ ಬೆಂಬಲಿಗರು ಹಾಗೂ ಜನಾರ್ದನ ರೆಡ್ಡಿ ಬೆಂಬಲಿಗರು ಕಲ್ಲು ತೂರಾಟ ನಡೆಸಿದ್ದರು. ಉದ್ವಿಗ್ನ ವಾತಾವರಣ ನಿರ್ಮಾಣವಾದ ಬೆನ್ನಲ್ಲೇ ಸ್ಥಳಕ್ಕೆ ಮಾಜಿ ಸಚಿವ ಶ್ರೀರಾಮುಲು ಹಾಗೂ ಕಾಂಗ್ರೆಸ್‌‍ ಶಾಸಕ ನಾರಾ ಭರತ್‌ ರೆಡ್ಡಿ ಆಪ್ತ ಸತೀಶ್‌ ರೆಡ್ಡಿ ಬಂದಿದ್ದರು.

ಈ ಸಂದರ್ಭದಲ್ಲಿ ಎರಡು ಕಡೆ ಮಾತಿನ ಚಕಮಕಿ ನಡೆದು ಪೊಲೀಸರು ಲಾಠಿ ಚಾರ್ಜ್‌ ಮಾಡಿ, ಜನರನ್ನು ಚದುರಿಸಿದ್ದರು. ಪೊಲೀಸರು ಲಾಠಿ ಚಾರ್ಜ್‌ ಮಾಡಿದರೂ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದರು. ಈ ಸಂದರ್ಭದಲ್ಲಿ ಖಾಸಗಿ ಗನ್‌ಮ್ಯಾನ್‌ಗಳು ಫೈರಿಂಗ್‌ ಮಾಡಿದ್ದರು. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ.

ಗುಂಡಿನ ದಾಳಿಗೆ ಕಾಂಗ್ರೆಸ್‌‍ ಕಾರ್ಯಕರ್ತ ರಾಜಶೇಖರ್‌ ಮೃತಪಟ್ಟಿದ್ದಾರೆ. ಇನ್ನೂ ಭರತ್‌ ರೆಡ್ಡಿ ಬೆಂಬಲಿಗ ಸತೀಶ ರೆಡ್ಡಿ ಗಾಯಗೊಂಡಿದ್ದಾರೆ. ಗಲಾಟೆ ಬಳಿಕ ಪೊಲೀಸರು ರೆಡ್ಡಿ ಮನೆಯ ಬಳಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

ಘರ್ಷಣೆ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಇಂದು ನಡೆಯಬೇಕಿದ್ದ ವಾಲೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಕಾಂಗ್ರೆಸ್‌‍ ಶಾಸಕ ನಾರಾ ಭರತ್‌ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಅತಕರ ಘಟನೆಗಳು ನಡೆಯದಂತೆ ಹೆಚ್ಚುವರಿ ಪೊಲೀಸ್‌‍ ಭದ್ರತೆ ನಿಯೋಜಿಸಲಾಗಿದೆ.

ಇನ್ನು ಇದರ ಜತೆಗೆ ಬಿಜೆಪಿ ನಾಯಕರಿಗೆ ಹೈಕಮಾಂಡ್‌ನಿಂದ ಮಹತ್ವದ ಸೂಚನೆಯನ್ನು ಕೂಡ ನೀಡಲಾಗಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಹೇಳಿದ್ದಾರೆ. ಇಂದು ಬಳ್ಳಾರಿಗೆ ಬಿಜೆಪಿ ನಾಯಕರ ನಿಯೋಗ ಭೇಟಿ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

RELATED ARTICLES

Latest News