ಬೆಂಗಳೂರು,ಫೆ.12- ನೆಲಮಂಗಲ ಹಾಗೂ ಬೆಳ್ಳಂದೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸಂಭವಿಸಿದ 2 ಪ್ರತ್ಯೇಕ ಅಪಘಾತಗಳಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಸೇರಿ ಇಬ್ಬರು ಮೃತಪಟ್ಟಿದ್ದಾರೆ. ನೆಲಮಂಗಲದ ಟಿಸಿಐ ಫ್ಲೈ ಓವರ್ ಮೇಲೆ ಹೋಗುತ್ತಿದ್ದ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ
ಗಂಭೀರ ಗಾಯಗೊಂಡು ಬೈಕ್ ಸವಾರ, ತುಮಕೂರು ಜಿಲ್ಲೆಯ ಯಶವಂತ್ (29) ಮೃತಪಟ್ಟಿದ್ದಾನೆ. ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ ಯಶವಂತ್ ಅವರು ಇಂದು ಬೆಳಗ್ಗೆ ಬೈಕ್‌ನಲ್ಲಿ ಕೆಲಸಕ್ಕೆ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ.
ಸುದ್ದಿ ತಿಳಿದು ನೆಲಮಂಗಲ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಟೆಕ್ಕಿ ದುರ್ಮರಣ:
ಬೈಕ್‌ನಲ್ಲಿ ಹೋಗುವಾಗ ಆಯತಪ್ಪಿ ಕಾಂಪೌಂಡ್ ಗೋಡೆಗೆ ಡಿಕ್ಕಿ ಹೊಡೆದು ಸಾಫ್ಟ್ ವೇರ್ ಇಂಜಿನಿಯರ್ ಮೃತಪಟ್ಟರೆ,ಹಿಂಬದಿ ಸವಾರ ಗಾಯಗೊಂಡಿರುವ ದುರ್ಘಟನೆ ಬೆಳ್ಳಂದೂರು ಬಳಿ ಮುಂಜಾನೆ ನಡೆದಿದೆ.
ತಮಿಳುನಾಡು ಮೂಲದ ಸರ್ಜಾಪುರದ ನಿವಾಸಿ ಸಾಫ್‌್ಟವೇರ್ ಇಂಜಿನಿಯರ್ ವರ್ಷಿತ್(23)ಮೃತಪಟ್ಟವರು.ಗಾಯಗೊಂಡಿರುವ ಹಿಂಬದಿ ಸವಾರ ವಿಶಾಂತ ದತ್ತ ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಸ್ಥಿತಿ ಗಂಭೀರವಾಗಿದೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವರ್ಷಿತ್ ಅವರು ಸ್ನೇಹಿತ ವಿಶಾಂತ ದತ್ತ ಅವರನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಇಂದು ಮುಂಜಾನೆ 2.30ರ ಸುಮಾರಿನಲ್ಲಿ ಬರುತ್ತಿದ್ದಾಗ ಸರ್ಜಾಪುರ ರಸ್ತೆಯಲ್ಲಿ ಬೈಕ್ ಆಯತಪ್ಪಿ ಕಾಂಪೌಂಡ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಕೆಳಗೆ ಬಿದ್ದಿದ್ದಾರೆ.
ಡಿಕ್ಕಿಯ ರಭಸಕ್ಕೆ ವರ್ಷಿತ್‌ಗೆ ಗಂಭೀರ ಪೆಟ್ಟಾಗಿ ಮೃತಪಟ್ಟರೆ ಹಿಂಬದಿ ಸವಾರ ಗಾಯಗೊಂಡಿದ್ದಾರೆ.ಸುದ್ದಿ ತಿಳಿದು ಬೆಳ್ಳಂದೂರು ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
