Homeರಾಜ್ಯಬಿಕ್ಲು ಶಿವ ಕೊಲೆ ಪ್ರಕರಣ : ಶಾಸಕ ಬೈರತಿ ಬಸವರಾಜಗೆ ನಿರೀಕ್ಷಣಾ ಜಾಮೀನು ನೀಡಲು ಸುಪ್ರೀಂ...

ಬಿಕ್ಲು ಶಿವ ಕೊಲೆ ಪ್ರಕರಣ : ಶಾಸಕ ಬೈರತಿ ಬಸವರಾಜಗೆ ನಿರೀಕ್ಷಣಾ ಜಾಮೀನು ನೀಡಲು ಸುಪ್ರೀಂ ನಕಾರ

Biklu Shiva murder case: Supreme Court refuses to grant anticipatory bail to MLA Bairati Basavaraj

ನವದೆಹಲಿ, ಫೆ.12- ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಕರ್ನಾಟಕದ ಬಿಜೆಪಿ ಶಾಸಕ ಬಿ.ಎ.ಬಸವರಾಜ (ಬೈರತಿ ಬಸವರಾಜ) ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಮತ್ತು ನ್ಯಾಯಮೂರ್ತಿ ಜೋಯಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿದೆ.

ಅರ್ಜಿದಾರರ ಪರ ಹಿರಿಯ ವಕೀಲ ಮುಕುಲ್‌ ರೋಹಟಗಿ ವಾದ ಮಂಡಿಸಿದ್ದರು. ಕೊಲೆ ಆರೋಪಿ ಶಾಸಕ ನ್ಯಾಯಾಲಯಕ್ಕೆ ಶರಣಾದ ನಂತರ ಖಾಯಂ ಜಾಮೀನು ಪಡೆಯಲು ಅರ್ಜಿ ಸಲ್ಲಿಸಲು ಸ್ವಾತಂತ್ರ್ಯ ಹೊಂದಿದ್ದಾರೆ ಎಂದು ನ್ಯಾಯಾಲಯ ಹೇಳಿತ್ತು. ಈ ಮೂಲಕ ವಕೀಲರು ತಮ ಅರ್ಜಿಯನ್ನು ಹಿಂಪಡೆಯುವುದಾಗಿ ತಿಳಿಸಿದ್ದಾರೆ.

ಕಳೆದ ವರ್ಷ ಜುಲೈ 15 ರಂದು ಬೆಂಗಳೂರಿನಲ್ಲಿ ನಡೆದ ವಿ.ಜಿ. ಶಿವಪ್ರಕಾಶ್‌ ಅಲಿಯಾಸ್‌‍ ಬಿಕ್ಲಾ ಶಿವ ಅವರ ಕೊಲೆಗೆ ಸಂಬಂಧಿಸಿದಂತೆ ಶಾಸಕ ಬಸವರಾಜ ಅವರ ಕೈವಾಡ ಇದೆ ಎಂಬ ಆರೋಪ ಕೇಳಿ ಬಂದಿದೆ. ಕೊಲೆಯ ಹಿಂದೆ ರೂಪಿಸಲಾದ ಸಂಚಿನಲ್ಲಿ ಶಾಸಕರ ಕೈವಾಡ ಇದೆ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತ ಪಡಿಸಿದ್ದಾರೆ.

ಹಿರಿಯ ವಕೀಲ ಮುಕುಲ್‌ ರೋಹಟಗಿ, ಶಾಸಕರು ಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ವಾದಿಸಿದರು.ವಿವಾದಿತ ಆಸ್ತಿ ಶಾಸಕರ ಕ್ಷೇತ್ರದಲ್ಲಿಯೂ ಬರುವುದಿಲ್ಲ ಎಂದು ವಕೀಲರು ಹೇಳಿದಾಗ, ಶಾಸಕರು ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂದು ಗುರಿತಿಸಲು ಕೆಲ ಅಂಶಗಳಿವೆ ಎಂದು ಮುಖ್ಯನ್ಯಾಯಮೂರ್ತಿಯವರು ಪ್ರಸ್ತಾಪಿಸಿದರು.

ಶಾಸಕರು ಆಸ್ತಿ ಖರೀದಿಗೆ ಯಾವುದೇ ಆಸಕ್ತಿ ತೋರಿಸಿರಲಿಲ್ಲ. 2025ರ ಆಗಸ್ಟ್‌ನಿಂದ ಫೆಬ್ರವರಿ 2 ರವರೆಗೆ ಹೈಕೋರ್ಟ್‌ ಶಾಸಕರಿಗೆ ಮಧ್ಯಂತರ ರಕ್ಷಣೆ ನೀಡಿತ್ತು. ಆ ನಂತರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಕೊಲೆಯಾದ ಬಿಕ್ಲಾ ಶಿವ ಅವರ ತಾಯಿಯೂ ಶಾಸಕರ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ ಎಂದು ರೋಹಟಗಿ ಹೇಳಿದಾಗ, ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ನ್ಯಾಯಮೂರ್ತಿಗಳು, ಶಾಸಕರು ನೇರವಾಗಿ ಕೊಲೆ ಮಾಡುತ್ತಾರೆ ಎಂದು ನಿರೀಕ್ಷಿಸಲಾಗುವುದಿಲ್ಲ ಎಂದು ಸಿಜೆಐ ಹೇಳಿದರು.

ಈ ಭೂಗಳ್ಳರಿಗೆ ರಾಜಕೀಯ ರಕ್ಷಣೆ ಇದೆ. ಅವರೆಲ್ಲರೂ ಅಪರಾಧಿಗಳ ಗುಂಪು ಎಂದು ಸಿಜೆಐ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.ಶಾಸಕರನ್ನು ರಾಜಕೀಯ ಕಾರಣಕ್ಕಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ರೋಹಟಗಿ ವಾದ ಮಾಡಿದರು. ಈ ಹಿಂದೆ ಶಾಸಕರ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ, 2000 (ಕೋಕಾ) ಅನ್ವಯ ಕ್ರಮ ಕೈಗೊಳ್ಲಲು ಮುಂದಾದಾಗ ಹೈಕೋರ್ಟ್‌ 2025ರ ಡಿಸೆಂಬರ್‌ ಬಲ್ಲಿ ಪೂರ್ವಾನುಮತಿಯನ್ನು ರದ್ದುಗೊಳಿಸಿದೆ ಎಂದು ರೋಹಟಗಿ ಹೇಳಿದ್ದಾರೆ.

ಕೊಲೆ ಪ್ರಕರಣದಲ್ಲಿ, ನಾವು ಅತ್ಯಂತ ಜಾಗರೂಕರಾಗಿರಬೇಕು ಎಂದು ನ್ಯಾಯಮೂರ್ತಿ ಬಾಗ್ಚಿ ಹೇಳಿದರು.ಎರಡು ಗುಂಪುಗಳ ನಡುವೆ ಪೈಪೋಟಿ ಸೃಷ್ಟಿಸಿದ್ದ ಆಸ್ತಿ ವಿಷಯಕ್ಕೆ ಬಿಕ್ಲು ಶಿವ ತಲೆ ಹಾಕಿದ್ದಾರೆ. ಕೊಲೆಯಾದ ವ್ಯಕ್ತಿ ತಾವು ಜಿಪಿಎ ಭಾಧ್ಯಸ್ಥರು ಎಂದು ಹೇಳಿಕೊಂಡಿದ್ದಾರೆ. ಕೊಲೆ ಆರೋಪಿ ಜಗದೀಶ್‌ ಜಿಪಿಎ ಅನ್ನು ತಮಗೆ ಹಸ್ತಾಂತರಿಸುವಂತೆ ಒತ್ತಾಯಿಸಿ ದಾಳಿ ಮಾಡಿದ್ದಾರೆ. ಜಗದೀಶ್‌ ಶಾಸಕರ ಜೊತೆ ಸಂಪರ್ಕದಲ್ಲಿದ್ದರು ಎಂಬ ಆರೋಪ ಇದೆ ಎಂದು ಮುಖ್ಯನ್ಯಾಯಮೂರ್ತಿಗಳು ಹೇಳಿದರು.

ವಿವಾದಿತ ಜಾಗ 390 ಚದುರ ಅಡಿಯಷ್ಟು ಮಾತ್ರ ಇದೆ. ನಾಲ್ಕು ಬಾರಿ ಶಾಸಕರಾಗಿರುವ ಬಸವರಾಜು ಅವರು, ಇಷ್ಟು ಸಣ್ಣ ಜಮೀನನ್ನು ಕಬಳಿಸಲು ಯತ್ನಿಸುವುದಿಲ್ಲ ಎಂದು ರೋಹಟಗಿ ಹೇಳಿದ್ದಾರೆ. ಆರೋಪ ದೃಢೀಕರಿಸುವ ಯಾವುದೇ ಪುರಾವೆಗಳು ಲಭ್ಯವಿಲ್ಲ ಎಂದು ವಾದಿಸಿದ್ದಾಗ, ಹಾಗಿದ್ದರೆ ಧೈರ್ಯವಾಗಿ ವಿಚಾರಣೆಯನ್ನು ಎದುರಿಸಲಿ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ಒಂದು ವೇಳೆ ಶಾಸಕರು ಕೊಲೆ ಆರೋಪದ ಮೊದಲ ಆರೋಪಿಯೊಂದಿಗೆ ಸಂಪರ್ಕದಲ್ಲಿ ಇಲ್ಲದೆ ಇದ್ದರೆ ವಕೀಲರ ವಾದವನ್ನು ಒಪ್ಪಿಕೊಳ್ಳಬಹುದಿತ್ತು ಎಂದು ಬಾಗ್ಚಿ ಹೇಳಿದ್ದಾರೆ. ಆರಂಭದಲ್ಲಿ ಶಾಸಕರು ಆರೋಪಿ ಜಗದೀಶ್‌ ತಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಆದರೆ ದೂರವಾಣಿ ಕರೆ ದಾಖಲೆಗಳು ಕೊಲೆಯಾದ ದಿನ ಜಗದೀಶ್‌ ಮತ್ತು ಶಾಸಕರ ನಡುವೆ ಸಂಪರ್ಕವಾಗಿರುವುದಕ್ಕೆ ಪೂರಕವಾಗಿವೆ ಎಂದರು ನ್ಯಾಯಮೂರ್ತಿಗಳು ಪ್ರತಿಪಾದಿಸಿದರು.
ನಿರೀಕ್ಷಣಾ ಜಾಮೀನು ಅರ್ಜಿ ಶಾಸಕರು ತಪ್ಪಿಸಿಕೊಳ್ಳಲು ನಡೆಸಿರುವ ಯತ್ನ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ನ್ಯಾಯಾಲಯ ಅರ್ಜಿಯನ್ನು ವಜಾ ಮಾಡುವ ಸನ್ನಿವೇಶ ಸೃಷ್ಟಿಯಾದಾಗ ವಕೀಲರು ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹಿಂಪಡೆಯುವುದಾಗಿ ತಿಳಿಸಿದ್ದಾರೆ.

RELATED ARTICLES

Latest News