Sunday, April 12, 2026
Homeರಾಜ್ಯಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳ ಉಪಚುನಾವಣೆ : ಬಿಜೆಪಿ ಅಭ್ಯರ್ಥಿಗಳ ಹೆಸರು ಪ್ರಕಟ

ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳ ಉಪಚುನಾವಣೆ : ಬಿಜೆಪಿ ಅಭ್ಯರ್ಥಿಗಳ ಹೆಸರು ಪ್ರಕಟ

BJP announces names of candidates for Bagalkote and Davangere South by-elections

ಬೆಂಗಳೂರು,ಮಾ.20- ರಾಜ್ಯದ ಕುತೂಹಲ ಕೆರಳಿಸಿರುವ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ಹೈಕಮಾಂಡ್‌ ಅಭ್ಯರ್ಥಿಗಳ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದೆ. ಬಾಗಲಕೋಟೆಯಿಂದ ನಿರೀಕ್ಷೆಯಂತೆ ಮಾಜಿ ಶಾಸಕ ವೀರಭದ್ರಯ್ಯ ಚರಂತಿಮಠ ಅವರಿಗೆ ಟಿಕೆಟ್‌ ನೀಡಲಾಗಿದ್ದರೆ, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶ್ರೀನಿವಾಸ ಟಿ.ದಾಸಕರಿಯಪ್ಪ ಅವರಿಗೆ ಅವಕಾಶ ನೀಡುವ ಮೂಲಕ ಪಕ್ಷವು ಅಚ್ಚರಿಯ ನಡೆ ಪ್ರದರ್ಶಿಸಿದೆ. ದಾವಣಗೆರೆ ದಕ್ಷಿಣದಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯಾಗಿ ಶ್ರೀನಿವಾಸ್‌‍ ದಾಸ ಕರಿಯಪ್ಪ ಅವರನ್ನು ಕಣಕ್ಕಿಳಿಸಿದೆ.

ಬಿ.ಜೆ.ಅಜಯ್‌ ಕುಮಾರ್‌ ಅವರಿಗೆ ಟಿಕೆಟ್‌ ನೀಡಬೇಕು ಎಂದು ಬಿಎಸ್‌‍ ಯಡಿಯೂರಪ್ಪ ಬಣ ಪಟ್ಟು ಹಿಡಿದಿತ್ತು. ಆದರೆ ಹೈಕಮಾಂಡ್‌ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಇದು ಬಿಎಸ್‌‍ವೈ ಬಣಕ್ಕೆ ಆದ ಹಿನ್ನಡೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ದಾವಣಗೆರೆ ದಕ್ಷಿಣದಲ್ಲಿ ಜಾತಿ ಲೆಕ್ಕಾಚಾರದ ತಂತ್ರವನ್ನು ಬಿಜೆಪಿ ಹೆಣೆದಿದೆ. ಎಸ್‌‍ಟಿ ಸಮುದಾಯದ ಟಿ.ಶ್ರೀನಿವಾಸದಾಸ ಕರಿಯಪ್ಪಗೆ ಟಿಕೆಟ್‌ ನೀಡಿದೆ. ಈ ಮೂಲಕ ಅಹಿಂದ ಮತ್ತು ಲಿಂಗಾಯತ ವರ್ಗದ ಮತಗಳ ಮೇಲೆ ಪಕ್ಷ ಕಣ್ಣಿಟ್ಟಿದೆ.ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ವೀರಣ್ಣ ಚರಂತಿಮಠ್‌ ಅವರಿಗೆ ಬಿಜೆಪಿ ಮತ್ತೆ ಮಣೆ ಹಾಕಿದೆ.

ಕ್ಷೇತ್ರದಲ್ಲಿ ಲಿಂಗಾಯತ ಮತಗಳ ಪ್ರಾಬಲ್ಯ ಹೆಚ್ಚಿರುವುದರಿಂದ ಬಿಜೆಪಿ ಈ ನಿರ್ಧಾರ ತೆಗೆದುಕೊಂಡಿದೆ.ಕುರುಬ ಸಮುದಾಯದ ಜಿ.ಬಿ.ವಿನಯ್‌ ಕುಮಾರ್‌ ಅವರನ್ನು ಕಣಕ್ಕಿಳಿಸುವ ಬಗ್ಗೆ ಬಲವಾದ ಮಾತುಗಳು ಕೇಳಿ ಬರುತ್ತಿದ್ದವು. 2024 ರ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ಕಾಂಗ್ರೆಸ್‌‍ ಅಭ್ಯರ್ಥಿಯಾಗಲು ಪ್ರಯತ್ನಿಸಿ ವಿಫಲರಾದ ವಿನಯ್‌‍, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ 42,907 ಮತಗಳನ್ನು ಗಳಿಸಿದ್ದರು. ದಾವಣಗೆರೆಗೆ ಅಚ್ಚರಿ ಅಭ್ಯರ್ಥಿ ಆದರೆ, ಅಚ್ಚರಿ ಎಂಬಂತೆ ಬಿಜೆಪಿ ಹೈ ಕಮಾಂಡ್‌ ಸ್ಥಳೀಯ ಬಣ ರಾಜಕೀಯ ಮಧ್ಯೆ ಎಸ್‌‍ಟಿ ಸಮುದಾಯದ ಶ್ರೀನಿವಾಸ ದಾಸ ಕರಿಯಪ್ಪರಿಗೆ ಮಣೆ ಹಾಕಿದೆ.

ದಾವಣಗೆರೆ ಜಿಲ್ಲೆಯ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್‌ ಜಾಧವ್‌, ಸ್ಥಳೀಯ ಮುಖಂಡ ಅಜಯ್‌ ಕುಮಾರ್‌, ರಾಜೇನಹಳ್ಳಿ ಶಿವಕುಮಾರ್‌ ಸೇರಿದಂತೆ ಹಲವರು ಟಿಕೆಟ್‌ ರೇಸ್‌‍ನಲ್ಲಿದ್ದರು. ಆದರೆ, ಕೊನೆಯದಾಗಿ ಶ್ರೀನಿವಾಸ್‌‍ ದಾಸ ಕರಿಯಪ್ಪ ಟಿಕೆಟ್‌ ನೀಡಲಾಗಿದೆ.

ದಾವಣಗೆರೆ ಕ್ಷೇತ್ರದಲ್ಲಿ ಸಿದ್ದೇಶ್ವರ ಬಣದ ಶ್ರೀನಿವಾಸ್‌‍ ದಾಸ ಕರಿಯಪ್ಪಗೆ ಟಿಕೆಟ್‌ ನೀಡಿರುವುದು ಅಚ್ಚರಿ ಮೂಡಿಸಿದೆ. ದಾವಣಗರೆಯಲ್ಲಿ ಪ್ರಬಲ ಲಿಂಗಾಯತ, ಮರಾಠ ಸಮುದಾಯ ಬಿಟ್ಟು ಎಸ್‌‍ಟಿ ಸಮುದಾಯಕ್ಕೆ ಟಿಕೆಟ್‌ ಘೋಷಣೆ ಮಾಡಿರುವುದು ಕುತೂಹಲ ಕೆರಳಿಸಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಸುಮಾರು 13 ಸಾವಿರ ಎಸ್‌‍ ಟಿ ಸಮುದಾಯದ ಮತಗಳಿವೆ. ಶ್ರೀನಿವಾಸ್‌‍ ದಾಸ ಬಿಜೆಪಿಯ ರಾಜ್ಯ ಎಸ್‌‍ಟಿ ಮೋರ್ಚಾ ಉಪಾಧ್ಯಕ್ಷರಾಗಿದ್ದಾರೆ. ಈ ಹಿಂದೆ ಚುನಾವಣೆಗಳಲ್ಲಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಅವರು, ಇತ್ತೀಚೆಗೆ ಪಕ್ಷೇತರರಾಗಿ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು.

ಬಾಗಲಕೋಟೆಯಲ್ಲಿ ನಿರೀಕ್ಷೆಯಂತೆ ಚರಂತಿಮಠಗೆ ಟಿಕೆಟ್‌ ನೀಡಲಾಗಿದೆ. ಚರಂತಿಮಠ ಬಾಗಲಕೋಟೆ ಕ್ಷೇತ್ರದ ಮಾಜಿ ಶಾಸಕರಾಗಿದ್ದಾರೆ. ಬಾಗಲಕೋಟೆ ವಿಧಾನಸಭಾ ಕ್ಷೇತ್ರದಿಂದ ಅವರು ಮೂರು ಬಾರಿ ಶಾಸಕರಾಗಿದ್ದರು. ಬಾಗಲಕೋಟೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ವಿಧಾನ ಪರಿಷತ್‌ ಸದಸ್ಯ ಪಿ.ಎಚ್‌.ಪೂಜಾರ, ಹಿಂದುಳಿದ ವರ್ಗಕ್ಕೆ ಸೇರಿದ ವೀರಣ್ಣ ಹಳೇಗೌಡರ ಸಹ ಟಿಕೆಟ್‌ ಆಕಾಂಕ್ಷಿಗಳಾಗಿದ್ದರು.

ಬಾಗಲಕೋಟೆಯಲ್ಲಿ ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿ ಬಿಜೆಪಿಯಲ್ಲಿ ಅಷ್ಟೊಂದು ಗೊಂದಲವಿರಲಿಲ್ಲ. ಲಿಂಗಾಯತ ಸಮುದಾಯದ ಚರಂತಿಮಠ ಅವರಿಗೆ ಟಿಕೆಟ್‌ ಬಹುತೇಕ ಖಚಿತ ಆಗಿತ್ತು. ಆದರೆ, ದಾವಣಗೆರೆಗೆ ಬಿಜೆಪಿಯ ಎರಡು ಬಣಗಳ ಮೇಲಾಟ ಜೋರಾಗಿತ್ತು ಮತ್ತು ಐವರು ಹೆಸರು ಕೇಳಿ ಬರುತ್ತಿತ್ತು. ಬಾಗಲಕೋಟೆಯಲ್ಲಿ ಆ ಭಾಗದ ವರ್ಚಸ್ವೀ ನಾಯಕ ಮುರುಗೇಶ್‌ ನಿರಾಣಿಗೆ ಟಿಕೆಟ್‌ ನೀಡಲು ಹೈಕಮಾಂಡ್‌ ಮುಂದೆ ಬಂದಿತ್ತು.

ಆದರೆ, ನಿರಾಣಿ ಸ್ಪರ್ಧೆ ಮಾಡಲು ಆಸಕ್ತಿಯನ್ನು ತೋರಿರಲಿಲ್ಲ. ಹಾಗಾಗಿ, ಪಿಎಚ್‌ ಪೂಜಾರ, ವೀರಣ್ಣ ಚರಂತಿಮಠ ಮತ್ತು ವೀರಣ್ಣ ಹಳೆಗೌಡರ ಹೆಸರು ಮುನ್ನೆಲೆಯಲ್ಲಿತ್ತು. ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ದಾವಣಗೆರೆ ದಕ್ಷಿಣ ಮತ್ತು ಎಚ್‌.ವೈ.ಮೇಟಿ ಅವರ ನಿಧನದಿಂದಾಗಿ ಬಾಗಲಕೋಟೆ ಉಪಚುನಾವಣೆ ನಡೆಯುತ್ತಿದೆ. ಏ. 9 ರಂದು ಉಪಚುನಾವಣೆಗೆ ಮತದಾನ ನಡೆಯಲಿದ್ದು, ಮೇ. 4 ರಂದು ಫಲಿತಾಂಶ ಪ್ರಕಟವಾಗಲಿದೆ.

RELATED ARTICLES

Latest News