Homeರಾಜ್ಯಡಿಕೆಶಿ ಸಿಎಂ ಆಗುತ್ತಿದ್ದಂತೆ ವಿಧಾನಸಭೆಯ ಪ್ರತಿಪಕ್ಷದ ನಾಯಕನ ಸ್ಥಾನದಲ್ಲೂ ಬದಲಾವಣೆ ವದಂತಿ..?

ಡಿಕೆಶಿ ಸಿಎಂ ಆಗುತ್ತಿದ್ದಂತೆ ವಿಧಾನಸಭೆಯ ಪ್ರತಿಪಕ್ಷದ ನಾಯಕನ ಸ್ಥಾನದಲ್ಲೂ ಬದಲಾವಣೆ ವದಂತಿ..?

Change in the position of Leader of the Opposition in the Legislative Assembly..?

ಬೆಂಗಳೂರು, ಜೂ.2- ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್‌ ಪ್ರಮಾಣ ವಚನ ಸ್ವೀಕರಿಸಲು ಕ್ಷಣಗಣನೆ ಆರಂಭವಾಗಿರುವಂತೆ, ಇತ್ತ ವಿಧಾನಸಭೆಯ ಪ್ರತಿಪಕ್ಷದ ನಾಯಕನ ಸ್ಥಾನ ಪಲ್ಲಟವಾಗಲಿದೆ ಎಂಬ ವದಂತಿ ಹಬ್ಬಿದೆ.

ಶಾಡೋ ಸಿ.ಎಂ (ಛಾಯಾ ಮುಖ್ಯಮಂತ್ರಿ) ಎಂದೇ ಕರೆಯಲ್ಪಡುವ ವಿಧಾನಸಭೆಯ ಪ್ರತಿಪಕ್ಷದ ನಾಯಕನ ಸ್ಥಾನ ರಾಜಕೀಯವಾಗಿ ಅತ್ಯಂತ ಮಹತ್ವದ ಸಂವಿಧಾನಿಕ ಹುದ್ದೆಯಾಗಿದೆ.ಸರ್ಕಾರವನ್ನು ಸದನದ ಹೊರಗೆ ಹಾಗೂ ಒಳಗೆ ಇಕ್ಕಟ್ಟಿಗೆ ಸಿಲುಕಿಸುವುದು, ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವುದು ಸೇರಿದಂತೆ ಹಲವು ನಿರ್ಧಾರಗಳಲ್ಲಿ ಪ್ರತಿಪಕ್ಷದ ನಾಯಕನ ಸ್ಥಾನ ಪ್ರಮುಖ ಪಾತ್ರ ವಹಿಸುತ್ತದೆ.

ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗುತ್ತಿರುವ ಹಿನ್ನೆಲೆಯಲ್ಲಿ ತನ್ನ ಕಾರ್ಯತಂತ್ರವನ್ನು ಬದಲಾಯಿಸಿರುವ ಬಿಜೆಪಿ ಅಕ್ರಮಣ ಶೈಲಿಯ ಹಾಗೂ ಸದನದಲ್ಲಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಲ್ಲಿ ಕೊಂಚ ಯಶಸ್ವಿಯಾಗಿರುವ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಸುನಿಲ್‌ ಕುಮಾರ್‌ ಅವರಿಗೆ ಈ ಸ್ಥಾನವನ್ನು ನೀಡಲು ಗಂಭೀರ ಚಿಂತನೆ ನಡೆಸಿದೆ ಎಂದು ಗೊತ್ತಾಗಿದೆ.

ಸರ್ಕಾರದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಟ ನಡೆಸುವಲ್ಲಿ ಮತ್ತು ಆಡಳಿತ ಪಕ್ಷವನ್ನು ತೀವ್ರವಾಗಿ ಇಕ್ಕಟ್ಟಿಗೆ ಸಿಲುಕಿಸುವಲ್ಲಿ ಬಿಜೆಪಿ ನಾಯಕತ್ವ ವಿಫಲವಾಗಿದೆ ಎಂಬ ಅಭಿಪ್ರಾಯವು ಪಕ್ಷದ ಆಂತರಿಕ ವಲಯದಲ್ಲಿ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಪಕ್ಷದ ನಾಯಕನ ಬದಲಾವಣೆಯ ಚರ್ಚೆ ಮುನ್ನೆಲೆಗೆ ಬಂದಿದೆ.

ಸದ್ಯಕ್ಕೆ ರಾಜ್ಯ ಬಿಜೆಪಿ ನಾಯಕತ್ವ ಅಥವಾ ಹೈಕಮಾಂಡ್‌ನಿಂದ ಆರ್‌.ಅಶೋಕ್‌ ಅವರ ಬದಲಾವಣೆ ಕುರಿತು ಯಾವುದೇ ಅಧಿಕೃತ ಘೋಷಣೆಯಾಗಿಲ್ಲ. ರಾಜಕೀಯ ಪಕ್ಷಗಳಲ್ಲಿ ಇಂತಹ ಬದಲಾವಣೆಯ ಚರ್ಚೆಗಳು ಸಾಮಾನ್ಯವಾಗಿದ್ದರೂ, ಪ್ರತಿಪಕ್ಷದ ನಾಯಕನ ನೇಮಕವು ಪಕ್ಷದ ಹೈಕಮಾಂಡ್‌ ನಿರ್ಧಾರದ ಮೇಲೆ ಅವಲಂಬಿತವಾಗಿರುತ್ತದೆ. ಪ್ರಸ್ತುತ ಬಿಜೆಪಿ ನಾಯಕತ್ವವು ರಾಜಕೀಯ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ತಂತ್ರಗಳನ್ನು ರೂಪಿಸುತ್ತಿದೆ.

ವಿರೋಧ ಪಕ್ಷದ ನಾಯಕನಾದವರು ಸರ್ಕಾರವನ್ನು ಸದನದ ಒಳಗೆ ಮತ್ತು ಹೊರಗೆ ಕಠಿಣ ಪ್ರಶ್ನೆಗಳ ಮೂಲಕ ಇಕ್ಕಟ್ಟಿಗೆ ಸಿಲುಕಿಸುವುದು ಪ್ರಜಾಪ್ರಭುತ್ವದ ಆಶಯವಾಗಿದೆ.
ಆದರೆ, ಆರ್‌.ಅಶೋಕ್‌ ಅವರ ವಿರುದ್ಧ ಕೇಳಿಬರುತ್ತಿರುವ ಆರೋಪವೆಂದರೆ, ಮೃದು ಧೋರಣೆ. ಸರ್ಕಾರವನ್ನು ಉರುಳಿಸುವ ಅಥವಾ ಭ್ರಷ್ಟಾಚಾರದ ವಿಷಯಗಳಲ್ಲಿ ದೊಡ್ಡ ಮಟ್ಟದ ಆಂದೋಲನಗಳನ್ನು ರೂಪಿಸುವಲ್ಲಿ ಅವರು ವಿಫಲರಾಗಿದ್ದಾರೆ ಎಂಬುದು ಅವರ ಪಕ್ಷದ ಒಳಗಿನವರೇ ಕೆಲವೊಮೆ ವ್ಯಕ್ತಪಡಿಸುವ ಅಸಮಾಧಾನ.

ಬಿಜೆಪಿ ಮತ್ತು ಜೆಡಿಎಸ್‌‍ ಮೈತ್ರಿಕೂಟದ ನಡುವೆ ಹಾಗೂ ಪಕ್ಷದ ಹಿರಿಯ ನಾಯಕರ ನಡುವೆ ಸಂಪೂರ್ಣ ಸಮನ್ವಯದ ಕೊರತೆಯಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದು ಸರ್ಕಾರದ ವಿರುದ್ಧದ ಹೋರಾಟವನ್ನು ದುರ್ಬಲಗೊಳಿಸುತ್ತಿದೆ.

ಬೆಂಗಳೂರಿಗೆ ಸೀಮಿತ ಎಂಬ ಆರೋಪ :
ಆರ್‌.ಅಶೋಕ್‌ ಅವರ ಮೇಲೆ ಅತಿ ಹೆಚ್ಚು ಕೇಳಿಬರುತ್ತಿರುವ ಆರೋಪವೆಂದರೆ ಅವರು ಕೇವಲ ಬೆಂಗಳೂರು ಕೇಂದ್ರಿತ ನಾಯಕರಾಗಿದ್ದಾರೆ ಎಂಬುದು. ಅವರ ರಾಜಕೀಯ ಹಿನ್ನೆಲೆ ಮತ್ತು ವರ್ಚಸ್ಸುಬೆಂಗಳೂರಿನಲ್ಲಿ ಬಲವಾಗಿದ್ದರೂ, ಉತ್ತರ ಕರ್ನಾಟಕ ಅಥವಾ ಹಳೆಯ ಮೈಸೂರು ಭಾಗದ ಸಮಸ್ಯೆಗಳ ಬಗ್ಗೆ ಅವರು ಅಷ್ಟೊಂದು ಪ್ರಬಲವಾಗಿ ಧ್ವನಿ ಎತ್ತುತ್ತಿಲ್ಲ ಎಂಬ ಭಾವನೆ ರಾಜ್ಯದ ಇತರ ಭಾಗಗಳ ಮತದಾರರಲ್ಲಿ ಇದೆ.

ರಾಜ್ಯ ಮಟ್ಟದ ಸಮಸ್ಯೆಗಳಿಗಿಂತ ಹೆಚ್ಚಾಗಿ ಬೆಂಗಳೂರಿನ ನಾಗರಿಕ ಸಮಸ್ಯೆಗಳು, ಬಡಾವಣೆಗಳ ಸಮಸ್ಯೆಗಳಿಗೆ ಸೀಮಿತವಾಗುವ ಮೂಲಕ ಅವರು ತಮ ವ್ಯಾಪ್ತಿಯನ್ನು ತಾವೇ ಮಿತಿಗೊಳಿಸಿಕೊಂಡಿದ್ದಾರೆ ಎಂಬ ಅಭಿಪ್ರಾಯ ಇದೆ. ಬಿಜೆಪಿಯಲ್ಲಿನ ಗುಂಪುಗಾರಿಕೆ ಮತ್ತು ನಾಯಕತ್ವಕ್ಕಾಗಿರುವ ಪೈಪೋಟಿ ಅಶೋಕ್‌ ಅವರ ಕಾರ್ಯಕ್ಷಮತೆಯ ಮೇಲೆ ಪ್ರಭಾವ ಬೀರುತ್ತಿರಬಹುದು.

ಅಶೋಕ್‌ ಅವರು ಮೂಲತಃ ಆಕ್ರಮಣಕಾರಿ ರಾಜಕಾರಣಕ್ಕಿಂತ ಹೆಚ್ಚಾಗಿ ಸಂಘಟನಾತಕವಾಗಿ ಕೆಲಸ ಮಾಡುವ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಇದು ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಬೇಕಾದ ಆಕ್ರಮಣಶೀಲತೆಯನ್ನು ಮರೆ ಮಾಚಿರಬಹುದು. ರಾಜ್ಯವ್ಯಾಪಿ ಪ್ರಭಾವ ಬೀರಲು ಅವರು ಬೆಂಗಳೂರು ಕೇಂದ್ರಿತ ರಾಜಕಾರಣದಿಂದ ಹೊರಬಂದು, ರಾಜ್ಯದ ಪ್ರಮುಖ ಸಾರ್ವಜನಿಕ ಸಮಸ್ಯೆಗಳ ವಿಷಯದಲ್ಲಿ ಹೆಚ್ಚು ಗಟ್ಟಿಯಾಗಿ ಧ್ವನಿ ಎತ್ತಬೇಕಾದ ಅವಶ್ಯಕತೆಯಿದೆ ಎಂಬ ಮಾತು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದೆ.

ಸುನಿಲ್‌ ಕುಮಾರ್‌ ಹೆಗಲಿಗೆ? :
ಸುನಿಲ್‌ ಕುಮಾರ್‌ ಅವರು ಹಿಂದುಳಿದ ವರ್ಗಗಳ ಪ್ರಬಲ ನಾಯಕರಾಗಿದ್ದು, ಪಕ್ಷದ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ. ಅವರನ್ನು ಮುಂಚೂಣಿಗೆ ತರುವ ಮೂಲಕ ಹಿಂದುಳಿದ ವರ್ಗಗಳ ಮತಬ್ಯಾಂಕ್‌ ಅನ್ನು ಬಲಪಡಿಸುವುದು ಮತ್ತು ಆಕ್ರಮಣಕಾರಿ ರಾಜಕೀಯವನ್ನು ಮುಂದುವರಿಸುವುದು ಬಿಜೆಪಿಯ ತಂತ್ರವಾಗಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಸುನಿಲ್‌ ಕುಮಾರ್‌ ಅವರು ಸದನದ ಒಳಗೆ ಮತ್ತು ಹೊರಗೆ ಸರ್ಕಾರದ ವೈಫಲ್ಯಗಳನ್ನು ಬಲವಾಗಿ ಪ್ರಶ್ನಿಸುವಲ್ಲಿ ಹೆಸರುವಾಸಿ. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಮರ್ಥ್ಯವನ್ನು ಅವರು ಹಲವಾರು ಬಾರಿ ಪ್ರದರ್ಶಿಸಿದ್ದಾರೆ. ಬಿಜೆಪಿಯು ಸಾಮಾಜಿಕ ನ್ಯಾಯದ ಸಮೀಕರಣವನ್ನು ಗಮನದಲ್ಲಿಟ್ಟುಕೊಂಡು, ಹಿಂದುಳಿದ ವರ್ಗಗಳ ಬಲಿಷ್ಠ ನಾಯಕನಿಗೆ ಮಣೆ ಹಾಕಲು ನಿರ್ಧರಿಸಿದರೆ, ಸುನಿಲ್‌ ಕುಮಾರ್‌ ಅವರ ಹೆಸರು ಮುಂಚೂಣಿಯಲ್ಲಿರುವುದು ಸಹಜ. ಇದು ಪಕ್ಷಕ್ಕೆ ಮತಬ್ಯಾಂಕ್‌ ದೃಷ್ಟಿಯಿಂದಲೂ ಲಾಭದಾಯಕವಾಗಬಹುದು.

ದಕ್ಷಿಣ ಕನ್ನಡ ಭಾಗದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಅವರ ಪಾತ್ರ ದೊಡ್ಡದಿದೆ. ಸಂಘಟನೆಯಲ್ಲಿನ ದೀರ್ಘಕಾಲದ ಅನುಭವ ಮತ್ತು ಹೈಕಮಾಂಡ್‌ನೊಂದಿಗಿನ ಉತ್ತಮ ಬಾಂಧವ್ಯ ಅವರಿಗೆ ಪ್ಲಸ್‌‍ ಪಾಯಿಂಟ್‌ ಆಗಬಲ್ಲದು. ಪ್ರತಿಪಕ್ಷದ ನಾಯಕನ ಆಯ್ಕೆಯು ಕೇವಲ ಒಂದು ವ್ಯಕ್ತಿಯ ಆಯ್ಕೆಯಲ್ಲ, ಅದು ಪಕ್ಷದ ಒಟ್ಟಾರೆ ತಂತ್ರಗಾರಿಕೆಯಾಗಿದೆ. ಬಿಜೆಪಿಯಲ್ಲಿನ ವಿವಿಧ ಪ್ರಬಲ ಸಮುದಾಯಗಳ ನಾಯಕರ ನಡುವೆ ಸಮತಿ ಮೂಡಿಸುವುದು ಪಕ್ಷದ ಮುಂದಿರುವ ದೊಡ್ಡ ಸವಾಲು. ಪಕ್ಷದಲ್ಲಿ ಸುನಿಲ್‌ ಕುಮಾರ್‌ ಅವರ ಹೊರತಾಗಿ ಇನ್ನೂ ಹಲವು ಹಿರಿಯ ಮತ್ತು ಪ್ರಭಾವಿ ನಾಯಕರು ಈ ಸ್ಥಾನದ ಆಕಾಂಕ್ಷಿಗಳಾಗಿರಬಹುದು.

ಅವರ ನಡುವೆ ಹೇಗೆ ಸಮನ್ವಯ ಸಾಧಿಸಲಾಗುತ್ತದೆ ಎಂಬುದು ಮುಖ್ಯ.ಅಂತಿಮವಾಗಿ, ಕೇಂದ್ರದ ನಾಯಕತ್ವವು ರಾಜ್ಯದ ರಾಜಕೀಯ ಪರಿಸ್ಥಿತಿಯನ್ನು ಅಳೆದು ತೂಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ. ಸುನಿಲ್‌ ಕುಮಾರ್‌ ಅವರು ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಸಮರ್ಥ ಅಭ್ಯರ್ಥಿ ಎಂಬುದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿರುವ ವಿಷಯವೇ ಹೌದು. ಅವರು ಪ್ರತಿಪಕ್ಷದ ನಾಯಕರಾದರೆ, ಸದನದಲ್ಲಿ ಸರ್ಕಾರದ ವಿರುದ್ಧದ ಚರ್ಚೆಗಳು ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

RELATED ARTICLES

Latest News