Homeರಾಜ್ಯವಿಜಯಾನಂದ ಕಾಶಪ್ಪನವರ್‌ರವರಿಗೆ ಸಚಿವ ಸ್ಥಾನ ನೀಡಲು ಆಗ್ರಹ

ವಿಜಯಾನಂದ ಕಾಶಪ್ಪನವರ್‌ರವರಿಗೆ ಸಚಿವ ಸ್ಥಾನ ನೀಡಲು ಆಗ್ರಹ

Demand to give ministerial position to Vijayananda Kashpanavar

ಬೆಂಗಳೂರು, ಜೂ.2- ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್‌ ಅಧಿಕಾರ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌‍ ಯುವಮುಖಂಡ ಹಾಗೂ ಪಂಚಮಸಾಲಿ ಸಮುದಾಯದ ಪ್ರಭಾವಿ ನಾಯಕ ಶಾಸಕ ವಿಜಯಾನಂದ ಎಸ್‌‍. ಕಾಶಪ್ಪನವರ್‌ಗೆ ಸಚಿವ ಸ್ಥಾನ ನೀಡಬೇಕೆಂದು ಇಳಕಲ್‌ ಕಾಂಗ್ರೆಸ್‌‍ ಘಟಕ ಆಗ್ರಹಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇಳಕಲ್‌ ಬ್ಲಾಕ್‌ ಕಾಂಗ್ರೆಸ್‌‍ ಅಧ್ಯಕ್ಷ ಅಬ್ದುಲ್‌ ರಜಾಕ್‌ ತಟಗಾರ್‌ರವರು ವಿಜಯಾನಂದ ಕಾಶಪ್ಪನವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡುವುದರಿಂದ ಬಾಗಲಕೋಟೆ, ವಿಜಾಪುರ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌‍ ಪಕ್ಷದ ಸಂಘಟನೆಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದರು.

ಇತ್ತೀಚೆಗೆ ನಡೆದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌‍ ಅಭ್ಯರ್ಥಿ ಗೆಲುವಿಗೆ ಸಾಕಷ್ಟು ಶ್ರಮಿಸಿದ್ದರು. ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡಿ ವಿಶೇಷವಾಗಿ ಪಂಚಮಸಾಲಿ ಸಮುದಾಯದ ಮತಗಳನ್ನು ಕಾಂಗ್ರೆಸ್‌‍ಗೆ ಸೆಳೆಯುವಲ್ಲಿ ಅವರ ಪಾತ್ರ ನಿರ್ಣಾಯಕವಾಗಿತ್ತು. ಈ ಬಾರಿ ವರಿಷ್ಠರು ಸಚಿವ ಸ್ಥಾನ ನೀಡಬೇಕೆಂದು ಮನವಿ ಮಾಡಿದರು.

ಕಾಂಗ್ರೆಸ್‌‍ ಪಕ್ಷಕ್ಕೆ ಕಳೆದ 50 ವರ್ಷಗಳಿಂದ ಕಾಶಪ್ಪನವರ ಮನೆತನವು ಶ್ರಮಿಸಿದ್ದು, ಮಾಜಿ ಸಚಿವರಾದ ದಿ.ಎಸ್‌‍.ಆರ್‌.ಕಾಶಪ್ಪನವರ್‌ ಅವರ ಪತ್ನಿ ಗೌರಮ ಕಾಶಪ್ಪನವರ್‌ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ವಿಜಯಾನಂದ ಎಸ್‌‍ ಕಾಶಪ್ಪನವರ ಅವರು ಎರಡನೇ ಬಾರಿ ಶಾಸಕರಾಗಿ ಹಾಗೂ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಪಂಚಮಸಾಲಿ ಸಮುದಾಯದ ಸಂಘಟನೆಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ ಎಂದು ತಿಳಿಸಿದರು.

ವಿದ್ಯಾರ್ಥಿ ಕಾಂಗ್ರೆಸ್‌‍ನ ರಾಜ್ಯ ಅಧ್ಯಕ್ಷರಾಗಿ ಯುವ ಕಾಂಗ್ರೆಸ್‌‍ನ ಉಪಾಧ್ಯಕ್ಷರಾಗಿ, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷವನ್ನು ಬೇರು ಮಟ್ಟದಲ್ಲಿ ಸಂಘಟಿಸಿದ ಕ್ರಿಯಾಶೀಲ ಸಂಘಟನಾತಕ ವ್ಯಕ್ತಿತ್ವ ಹೊಂದಿರುವ ಕಾಶಪ್ಪನವರನ್ನು ಸಂಪುಟಕ್ಕೆ ತೆಗೆದುಕೊಂಡರೆ 2028 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌‍ ಪಕ್ಷಕ್ಕೆ ಆನೆಬಲ ಬರಲಿದೆ ಎಂದು ಹೇಳಿದರು.

ತಮಗೆ ನೀಡಿರುವ ಯಾವುದೇ ಕೆಲಸವನ್ನು ಅತ್ಯಂತ ಸಮಪರ್ಕವಾಗಿ ನಿಭಾಯಿಸುವ ಜವಾಬ್ದಾರಿ ಅವರಲ್ಲಿದೆ. ನಿಗಮದ ಅಧ್ಯಕ್ಷರಾಗಿ ಕಾಯಕ ಕಿರಣ, ಸಾರಥಿ, ಜೀವಜಲ, ಬಸವ ಬೆಳಗು, ವಿಭೂತಿ ನಿರ್ಮಾಣ ಘಟಕ, ಸಂಚಾರಿ ಕ್ಯಾಂಟೀನ್‌ ಅಂತಹ ಯೋಜನೆಗಳನ್ನು ನಾಡಿನ ಜನರಿಗೆ ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿದ್ದಾರೆ ಎಂದು ಅಬ್ದುಲ್‌ ರಜಾಕ್‌ ತಟಗಾರ್‌ ತಿಳಿಸಿದರು.

ಶೈಕ್ಷಣಿಕವಾಗಿ ಗ್ರಾಮೀಣ ಪ್ರದೇಶದಲ್ಲಿ ಮೊರಾರ್ಜಿ ವಸತಿ ಶಾಲೆ, ಅಲ್ಪಸಂಖ್ಯಾತರ ವಸತಿ ಶಾಲೆ, ಡಾಕ್ಟರ್‌ ಬಿ. ಆರ್‌. ಅಂಬೇಡ್ಕರ್‌ ವಸತಿ ಶಾಲೆ, ಕಸ್ತೂರಿಬಾ ಶಾಲೆ ಹಾಗೂ ಹಿಂದುಳಿದ ಎಸ್‌‍.ಸಿ ಎಸ್‌‍.ಟಿ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳನ್ನು ಸ್ಥಾಪಿಸಿ ಮೂಲಭೂತ ಸೌಕರ್ಯವನ್ನು ಒದಗಿಸಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಪ್ರಥಮ ಬಾರಿಗೆ ನೂರು ಶಾಲೆಗಳಿಗೆ ಸಾರ್ಟ್‌ ಕ್ಲಾಸ್‌‍ ಬೋರ್ಡ್‌ಗಳನ್ನು ಒದಗಿಸಿದ ಶಿಕ್ಷಣ ಪ್ರೇಮಿ ಎಂದು ಹೊಗಳಿದರು.

ಕೆಪಿಸಿಸಿ ಸದಸ್ಯ ಶಾಂತಪ್ಪ ಸುರಪುರ ಮಾತನಾಡಿ, ವಿಜಯಾನಂದ ಕಾಶಪ್ಪನವರ್‌ರವರು ಆರೋಗ್ಯ ಕ್ಷೇತ್ರದಲ್ಲಿ ಹುನಗುಂದ್‌ ಇಳಕಲ್‌ ಅವಳಿ ನಗರದಲ್ಲಿ ನೂರು ಹಾಸಿಗೆ ಸಾರ್ವಜನಿಕರ ಆಸ್ಪತ್ರೆ, ಇಳಕಲ್‌ನಲ್ಲಿ 30 ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಹುನುಗುಂದದಲ್ಲಿ 50 ಹಾಸಿಗೆಯ ತಾಯಿ ಮಕ್ಕಳ ಆಸ್ಪತ್ರೆಗಳನ್ನು ಸ್ಥಾಪಿಸಿ ಜನಸಾಮಾನ್ಯರ ಆರೋಗ್ಯ ಕಾಳಜಿಯುಳ್ಳ ಶಾಸಕರಾಗಿದ್ದಾರೆ ಇಂತವರನ್ನು ಸಂಪುಟಕ್ಕೆ ತೆಗೆದುಕೊಳ್ಳುವುದು ಕಾಂಗ್ರೆಸ್‌‍ಗೆ ಶೋಭೆ ತರುತ್ತದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಮಹಾಂತೇಶ್‌ ನರಗುಂದ, ಮಲ್ಲಣ್ಣ ಎಲೆಗಾರ, ರವಿ ಹುಚ್ಚನೂರ, ಮುತ್ತಣ್ಣ ಕಲಗುಡಿ, ಅಮರೇಶ್‌ ನಾಗೂರ್‌, ರಾಘವೇಂದ್ರ ಧಾರವಾಡ, ವಿಠಲ್‌ ಜಕ್ಕ, ಮೌನೇಶ್‌ ಬಂಡಿವಡ್ಡರ್‌ ಉಪಸ್ಥಿತರಿದ್ದರು.

RELATED ARTICLES

Latest News