ಬೆಂಗಳೂರು,ಅ.5- ಭಾರೀ ಚರ್ಚೆಗೆ ಗ್ರಾಸವಾಗಿರುವ ನಮೂನೆ 7ರ ಕುರಿತಂತೆ ಚುನಾವಣಾ ಆಯೋಗ ಸ್ಪಷ್ಟ ಮಾತುಗಳಲ್ಲಿ ಯಾವುದೇ ಲೋಪ ಉಂಟಾಗಿಲ್ಲ ಮತ್ತು ಯಾವುದೇ ಹೆಸರನ್ನು ಕೈಬಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಅವರು, ನಮೂನೆ 7ಸಲ್ಲಿಸಿದ ನಂತರ ಪೂರ್ಣ ಪ್ರಮಾಣದಲ್ಲಿ ಅದನ್ನು ಪರಿಶೀಲಿಸಲಾಗುತ್ತದೆ ಮತ್ತು ತಕ್ಷಣದಲ್ಲೇ ಯಾವುದೇ ಮತದಾರರ ಹೆಸರನ್ನು ಕೈಬಿಡುವ ಸಾಧ್ಯತೆಯೇ ಇಲ್ಲ ಎಂದು ತಿಳಿಸಿದರು. ಈಗಾಗಲೇ ಶೇ.85ರಷ್ಟು ಈ ಪ್ರಕ್ರಿಯೆ ಮುಗಿದಿದ್ದು, ಅ.27ರಂದು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಹೇಳಿದರು.
ಒಂದು ದಿನಕ್ಕೆ 10ರಷ್ಟು ನಮೂನೆ 7 ನೀಡಬಹುದು. ಬಿಎಲ್ಎಗಳು 50 ಫಾರಂಗಳನ್ನು ಮಾತ್ರ ನೀಡಬಹುದು. ಅದಕ್ಕಿಂತ ನೀಡಲು ಸಾಧ್ಯವಿಲ್ಲ. ಆದರೂ ಸಾಮೂಹಿಕವಾಗಿ ನಮೂನೆ 7ನ್ನು ಹೆಚ್ಚಾಗಿ ನೀಡಿದ್ದರೆ ಇಆರ್ಒಗಳು ಅದರ ಬಗ್ಗೆ ಪರಿಶೀಲಿಸುತ್ತಾರೆ ಎಂದು ಅವರು ತಿಳಿಸಿದರು.ಉದ್ದೇಶಪೂರ್ವಕವಾಗಿ ತಪ್ಪುಗಳಾಗಿದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬಹುದು. ಇದುವರೆಗೆ ನಮೂನೆ 7ಕ್ಕೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಈವರೆಗೆ 91,278 ನಮೂನೆ 7 ಸಲ್ಲಿಕೆಯಾಗಿದೆ. 4,667 ನಮೂನೆ 6ಎ ಸಲ್ಲಿಕೆಯಾಗಿದೆ. ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಅವರಿಗೆ ಅನ್ಯಾಯವಾಗುವುದಿಲ್ಲ. ಎಸ್ಐಆರ್ ಪ್ರಕ್ರಿಯೆ ಮುಗಿದ ಬಳಿಕ ವಿಶೇಷ ಜಾಗೃತಿ ಅಭಿಯಾನ ಕೈಗೊಂಡು ಮತದಾರರ ಪಟ್ಟಿಯಿಂದ ಹೊರಗುಳಿದ ಅರ್ಹರನ್ನು ಸೇರ್ಪಡೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಸ್ಪಷ್ಟಪಡಿಸಿದರು. ಹೊಸದಾಗಿ ಮತದಾರರ ಪಟ್ಟಿಗೆ ಸೇರುವವರು ನಮೂನೆ 6ರ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಅವರು ತಿಳಿಸಿದರು.
