Homeರಾಜ್ಯನೈಸ್‌ ಸಂಸ್ಥೆಗೆ ಸುಪ್ರೀಂ ಶಾಕ್‌ : ಹೈಕೋರ್ಟ್‌ ಆದೇಶದ ತಡೆಗೆ ನಿರಾಕರಣೆ

ನೈಸ್‌ ಸಂಸ್ಥೆಗೆ ಸುಪ್ರೀಂ ಶಾಕ್‌ : ಹೈಕೋರ್ಟ್‌ ಆದೇಶದ ತಡೆಗೆ ನಿರಾಕರಣೆ

ನವದೆಹಲಿ,ಅ.5- ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ರಸ್ತೆ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ನಡೆಸಿದ್ದ ಭೂಸ್ವಾಧೀನ ಪ್ರಕ್ರಿಯೆ ಹಾಗೂ ಅಕ್ರಮಗಳ ಕುರಿತು ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶಕ್ಕೆ ಮಧ್ಯಂತರ ತಡೆ ನೀಡಲು ಸುಪ್ರೀಂಕೋರ್ಟ್‌ ನಿರಾಕರಿಸಿದೆ.

ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ನೈಸ್‌‍ ಸಂಸ್ಥೆಯು ಸಲ್ಲಿಸಿದ್ದ ಮೇಲನವಿ ಅರ್ಜಿಯ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ, ವಿಚಾರಣೆ ಪೂರ್ಣಗೊಳ್ಳುವವರೆಗೆ ಆದೇಶಕ್ಕೆ ತಡೆ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್‌ 2ಕ್ಕೆ ಮುಂದೂಡಿದೆ.

ಜುಲೈ 2026 ರಲ್ಲಿ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠವು (ನ್ಯಾಯಮೂರ್ತಿ ಡಿ.ಕೆ. ಸಿಂಗ್‌ ಹಾಗೂ ನ್ಯಾಯಮೂರ್ತಿ ಟಿ.ಎಂ. ನದಾಫ್‌ ಅವರನ್ನೊಳಗೊಂಡ ಪೀಠ) ಬಿಎಂಐಸಿ ಯೋಜನೆಯನ್ನು ರಾಜ್ಯದ ಅತಿದೊಡ್ಡ ಹಗರಣಗಳಲ್ಲಿ ಒಂದು ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು.

ನೈಸ್‌‍ ಸಂಸ್ಥೆಯು ಸುಪ್ರೀಂಕೋರ್ಟ್‌ ಆದೇಶ ಹಾಗೂ ಫ್ರೇಮ್‌ವರ್ಕ್‌ ಒಪ್ಪಂದವನ್ನು ಉಲ್ಲಂಘಿಸಿ 20 ಸಾವಿರ ಎಕರೆಗೂ ಅಧಿಕ ಭೂಮಿ ವಶಪಡಿಸಿಕೊಂಡು ವಂಚನೆ ಎಸಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಯೋಜನೆಗೆ ಸಂಬಂಧಿಸಿದಂತೆ ಸ್ವತಂತ್ರ ತಜ್ಞರ ತಂಡದಿಂದ ತನಿಖೆ ಹಾಗೂ ಫೊರೆನ್ಸಿಕ್‌ ಆಡಿಟ್‌ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಕಡ್ಡಾಯ ನಿರ್ದೇಶನ ನೀಡಿತ್ತು.

ಕಳೆದ 25 ವರ್ಷಗಳಲ್ಲಿ ಯೋಜಿತ 111 ಕಿ.ಮೀ. ಪೈಕಿ ಕೇವಲ ಕೆಲವೇ ಭಾಗಗಳಷ್ಟು ರಸ್ತೆ ನಿರ್ಮಿಸಿ, ಸೂಕ್ತ ಪರಿಹಾರ ನೀಡದೆ ಅಕ್ರಮವಾಗಿ ಟೋಲ್‌ ಸಂಗ್ರಹಿಸಲಾಗುತ್ತಿದೆ ಎಂದು ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿತ್ತು. ದಶಕಗಳಿಂದ ರೈತರಿಗೆ ನೀಡದೆ ಬಾಕಿ ಉಳಿಸಿಕೊಂಡಿದ್ದ ಭೂಸ್ವಾಧೀನ ಪ್ರಕ್ರಿಯೆಗಳನ್ನು ರದ್ದುಗೊಳಿಸಿ ಸಂತ್ರಸ್ತ ರೈತರಿಗೆ ಬಿಗ್‌ ರಿಲೀಫ್‌ ನೀಡಿತ್ತು.

ಹೈಕೋರ್ಟ್‌ ಆದೇಶದ ವಿರುದ್ಧ ತಡೆಜ್ಞೆ ಕೋರಿ ನೈಸ್‌‍ ಸಂಸ್ಥೆ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತಾದರೂ, ಸುಪ್ರೀಂ ಕೋರ್ಟ್‌ ತಡೆ ನೀಡಲು ನಿರಾಕರಿಸುವ ಮೂಲಕ ಹೈಕೋರ್ಟ್‌ ನಿರ್ದೇಶಿಸಿದ ತನಿಖಾ ಪ್ರಕ್ರಿಯೆಗಳು ಹಾಗೂ ಕಾನೂನು ಕ್ರಮಗಳು ಮುಂದುವರಿಯಲು ಹಸಿರುನಿಶಾನೆ ತೋರಿದಂತಾಗಿದೆ. ಇದು ಕಳೆದ ಎರಡು ದಶಕಗಳಿಂದ ಹೋರಾಟ ನಡೆಸುತ್ತಿರುವ ಸಂತ್ರಸ್ತ ರೈತರ ಹೋರಾಟಕ್ಕೆ ಮತ್ತಷ್ಟು ಬಲ ತಂದಿದೆ.

ಏನಿದು ನೈಸ್‌‍ ವಿವಾದ?
ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಯೋಜನೆಯು ಹಲವು ವರ್ಷಗಳಿಂದ ಭೂಸ್ವಾಧೀನ, ಪರಿಹಾರ, ಯೋಜನೆಯ ಅನುಷ್ಠಾನ ಹಾಗೂ ಒಪ್ಪಂದದ ಷರತ್ತುಗಳ ವಿಚಾರದಲ್ಲಿ ವಿವಾದಕ್ಕೆ ಕಾರಣವಾಗಿದೆ. ಯೋಜನೆಗಾಗಿ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡರೂ ಸೂಕ್ತ ಪರಿಹಾರ ನೀಡಿಲ್ಲ, ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಭೂಮಿ ವಶಪಡಿಸಿಕೊಳ್ಳಲಾಗಿದೆ ಮತ್ತು ಯೋಜನೆಯ ಉದ್ದೇಶಕ್ಕೆ ವಿರುದ್ಧವಾಗಿ ಭೂಮಿಯನ್ನು ಬಳಸಲಾಗಿದೆ ಎಂಬ ಆರೋಪಗಳು ಹಲವು ವರ್ಷಗಳಿಂದ ಕೇಳಿಬರುತ್ತಿವೆ.

ಭೂಮಿ ಕಳೆದುಕೊಂಡ ರೈತರು ಪರಿಹಾರ ಹಾಗೂ ತಮ ಜಮೀನು ಮರಳಿ ನೀಡುವಂತೆ ಒತ್ತಾಯಿಸಿ ದೀರ್ಘಕಾಲದಿಂದ ಹೋರಾಟ ನಡೆಸುತ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಯ ಕಾನೂನುಬದ್ಧತೆ ಮತ್ತು ಯೋಜನೆಯ ಅನುಷ್ಠಾನದ ಕುರಿತು ನ್ಯಾಯಾಲಯಗಳಲ್ಲಿ ಹಲವು ಸುತ್ತಿನ ವಿಚಾರಣೆಗಳು ನಡೆದಿವೆ.

ಬಿಎಂಐಸಿ ಯೋಜನೆಯಡಿ ಸುಮಾರು 111 ಕಿ.ಮೀ. ರಸ್ತೆ ನಿರ್ಮಾಣದ ಗುರಿ ಇತ್ತು. ಆದರೆ ಹಲವು ವರ್ಷಗಳು ಕಳೆದರೂ ಯೋಜನೆಯ ನಿರೀಕ್ಷಿತ ಪ್ರಮಾಣದಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ ಎಂಬ ವಿಚಾರವೂ ನ್ಯಾಯಾಲಯದ ಮುಂದೆ ಬಂದಿತ್ತು. ಇದೇ ವೇಳೆ, ಯೋಜನೆಗಾಗಿ ದೊಡ್ಡ ಪ್ರಮಾಣದ ಭೂಮಿ ಸ್ವಾಧೀನಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ, ಆ ಭೂಮಿಯ ಬಳಕೆ ಮತ್ತು ರೈತರಿಗೆ ನೀಡಬೇಕಾದ ಪರಿಹಾರದ ಕುರಿತು ಪ್ರಶ್ನೆಗಳು ತೀವ್ರಗೊಂಡಿದ್ದವು.

ಹೈಕೋರ್ಟ್‌ ವಿಚಾರಣೆಯಲ್ಲಿ ಯೋಜನೆಯನ್ನು ರಾಜ್ಯದ ದೊಡ್ಡ ಹಗರಣಗಳಲ್ಲಿ ಒಂದೆಂದು ಕಠಿಣವಾಗಿ ಟೀಕಿಸಿರುವುದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿತ್ತು. 20 ಸಾವಿರ ಎಕರೆಗೂ ಅಧಿಕ ಭೂಮಿಯ ನಿರ್ವಹಣೆ ಮತ್ತು ಬಳಕೆಯ ಕುರಿತೂ ನ್ಯಾಯಾಲಯದ ಮುಂದೆ ಪ್ರಶ್ನೆಗಳು ಎದ್ದಿದ್ದವು ಎಂಬುದು ಗಮನಾರ್ಹ.

ನವೆಂಬರ್‌ 2ರಂದು ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ. ಅಲ್ಲಿ ಹೈಕೋರ್ಟ್‌ನ ಆದೇಶದ ಕಾನೂನುಬದ್ಧತೆ, ಭೂಸ್ವಾಧೀನದ ಪ್ರಕ್ರಿಯೆ, ಪರಿಹಾರದ ವಿಚಾರ, ಯೋಜನೆಯ ಅನುಷ್ಠಾನ ಹಾಗೂ ತನಿಖೆಯ ಅಗತ್ಯತೆ ಸೇರಿದಂತೆ ಹಲವು ಅಂಶಗಳು ಮತ್ತಷ್ಟು ಪರಿಶೀಲನೆಗೆ ಒಳಪಡಲಿವೆ.

ಒಟ್ಟಿನಲ್ಲಿ, ಸುಮಾರು ಎರಡು ದಶಕಗಳಿಗೂ ಹೆಚ್ಚು ಕಾಲ ಭೂಸ್ವಾಧೀನ ಮತ್ತು ಪರಿಹಾರದ ಪ್ರಶ್ನೆಗಳನ್ನು ಎದುರಿಸುತ್ತಿರುವ ನೈಸ್‌‍ ಬಿಎಂಐಸಿ ವಿವಾದ ಇದೀಗ ಮತ್ತೆ ರಾಷ್ಟ್ರಮಟ್ಟದ ಕಾನೂನು ವೇದಿಕೆಯಲ್ಲಿ ಮಹತ್ವ ಪಡೆದಿದೆ. ಸುಪ್ರೀಂ ಕೋರ್ಟ್‌ ತಕ್ಷಣದ ತಡೆ ನಿರಾಕರಿಸಿರುವುದು ರೈತರ ಪಾಲಿಗೆ ತಾತ್ಕಾಲಿಕ ನೆಮದಿ ತಂದಿದ್ದರೂ, ಪ್ರಕರಣದ ಅಂತಿಮ ತೀರ್ಪು ಇನ್ನೂ ಬಾಕಿಯಿರುವುದರಿಂದ ನವೆಂಬರ್‌ 2ರ ವಿಚಾರಣೆಯತ್ತ ಎಲ್ಲರ ಗಮನ ನೆಟ್ಟಿದೆ.

RELATED ARTICLES
spot_img

Latest News