ಬೆಂಗಳೂರು, ಫೆ.6- ಅಧಿಕಾರ ಹಂಚಿಕೆಯ ಗೊಂದಲಗಳು ತಣ್ಣ ಗಾಗಿದ್ದು, ಸದ್ಯಕ್ಕೆ ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಳ್ಳುವು ದಿಲ್ಲ ಎಂಬುದು ಸ್ಪಷ್ಟವಾಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರುಮಳವಾಗಿ ಬಜೆಟ್ ತಯಾರಿಕೆಯಲ್ಲಿ ತೊಡಗಿದ್ದಾರೆ.
ನಿನ್ನೆ 10 ಇಲಾಖೆಗಳ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಬಜೆಟ್ ಪೂರ್ವ ಸಮಾಲೋಚನೆ ನಡೆಸಿದರು. ಇಂದು ಪರಿಶಿಷ್ಟ ವರ್ಗಗಳ ಕಲ್ಯಾಣ, ಯುವ ಸಬಲೀಕರಣ-ಕ್ರೀಡೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಇ-ಆಡಳಿತ, ವೈದ್ಯಕೀಯ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಜೀವನೋಪಾಯ, ಮೂಲಸೌಕರ್ಯ ಬೃಹತ್ ಮತ್ತು
ಮಧ್ಯಮ ಕೈಗಾರಿಕೆ, ಮಾಹಿತಿ ತಂತ್ರಜ್ಞಾನ
ಮತ್ತು ಜೈವಿಕ ತಂತ್ರಜ್ಞಾನ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಮುಖ್ಯಸ್ಥರ ಜೊತೆ ಸಮಾಲೋಚನೆ ನಡೆಸಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಅವರು ಸಭೆಯಲ್ಲಿ ಭಾಗವಹಿಸಿದ್ದರು. ಉಳಿದಂತೆ ಎಲ್ಲಾ ಇಲಾಖೆಗಳ ಜವಾಬ್ದಾರಿಯೂ ಮುಖ್ಯಮಂತ್ರಿಯವರ ಬಳಿಯಲ್ಲೇ ಇವೆ.
ಹಾಗಾಗಿ ಸಚಿವರ ಬದಲಾಗಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳ ಜೊತೆ ಚರ್ಚೆ ನಡೆಸಲಾಗಿದೆ. ವಿಧಾನಮಂಡಲ ಅಧಿವೇಶನದ ಬಳಿಕ ನಾಯಕತ್ವ ಬದಲಾವಣೆಗೆ ಹೈಕಮಾಂಡ್ ನಾಯಕರು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಇಬ್ಬರನ್ನೂ ದೆಹಲಿಗೆ ಕರೆಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಅಂತಹ ಯಾವ ಲಕ್ಷಣಗಳೂ ಸದ್ಯಕ್ಕೆ ಕಂಡು ಬರುತ್ತಿಲ್ಲ.
ಡಿ.ಕೆ.ಶಿವಕುಮಾರ್ ಬೆಂಬಲಿ ಗರು ಕೆಲವೆಡೆ ಬಹಿರಂಗ ಹೇಳಿಕೆಗಳನ್ನು ನೀಡಿ ನಾಯಕತ್ವ ಬದಲಾವಣೆಯ ಗೊಂದಲವನ್ನು ಹೈಕಮಾಂಡ್ ಮಧ್ಯ ಪ್ರವೇಶಿಸಿ ಕೂಡಲೇ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ. ಸಿದ್ದರಾಮಯ್ಯ ಬಣದ ಸಚಿವ ಸತೀಶ್ ಜಾರಕಿಹೊಳಿ ಕೂಡ ಇದಕ್ಕೆ ಧ್ವನಿಗೂಡಿಸಿದ್ದಾರೆ. ನಾಯಕತ್ವದ ಗೊಂದಲವನ್ನು ಹೈಕಮಾಂಡ್ ಸೃಷ್ಟಿಸಿದ್ದಲ್ಲ, ಸ್ಥಳೀಯ ನಾಯಕರು ಸೃಷ್ಟಿ ಮಾಡಿಕೊಂಡಿದ್ದಾರೆ. ಅವರಾಗಿಯೇ ಗೊಂದಲ ಬಗೆ ಹರಿಸಿಕೊಳ್ಳಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು. ಡಿ.ಕೆ.ಶಿವಕುಮಾರ್ ಮೈಸೂರಿನಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕರ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ, ತಮ ನೆರವಿಗೆ ಬರುವಂತೆ ಮನವಿ ಮಾಡಿದ್ದರು.
ಅನಂತರ ಡಿ.ಕೆ.ಶಿವಕುಮಾರ್ ದೆಹಲಿಗೆ ಹೋದಾಗ ಪ್ರತ್ಯೇಕ ಭೇಟಿಗೆ ಸಮಯವನ್ನೇ ನೀಡದೆ ಬರಿಗೈನಲ್ಲಿ ವಾಪಾಸ್ ಕಳುಹಿಸಿದ್ದರು. ಡಿ.ಕೆ.ಶಿವಕುಮಾರ್ ದೆಹಲಿಯಿಂದ ಮರಳಿದ ಬಳಿಕ ರಾಜ್ಯ ರಾಜಕೀಯದಲ್ಲಿ ಬೇರೆಯದೇ ಚಿತ್ರಣ ಕಂಡು ಬಂತು. ಹೈಕಮಾಂಡ್ ಗೊಂದಲವನ್ನು ಬಗೆ ಹರಿಸದೆ ಇಬ್ಬರ ನಡುವೆ ಪೈಪೋಟಿ ಬೆಳೆಯಲು ಬಿಟ್ಟು ತನ್ನ ಬೆಳೆ ಬೇಯಿಸಿಕೊಳ್ಳುತ್ತಿದೆ ಎಂಬ ಆಕ್ರೋಶಗಳು ಡಿ.ಕೆ.ಶಿವಕುಮಾರ್ ಬಣದಲ್ಲಿ ಕೇಳಿ ಬರುತ್ತಿದೆ.
ನಾಯಕತ್ವ ಗೊಂದಲವನ್ನು ನಿವಾರಿಸುವುದೇ ಕಾಂಗ್ರೆಸ್ ವರಿಷ್ಠರಿಗೆ ಕಬ್ಬಿಣದ ಕಡಲೆಯಾಗಿದೆ. ಈಗಿರುವ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾವಣೆ ಮಾಡಿದರೆ ಅಹಿಂದ ವರ್ಗ ಸಿಡಿದು ಬೀಳುವ ಆತಂಕ ಇದೆ. ಡಿ.ಕೆ.ಶಿವಕುಮಾರ್ ಪಕ್ಷಕ್ಕಾಗಿ ದುಡಿದವರು, ನಿಷ್ಠರು. ಅವರಿಗೆ ಅವರಿಗೆ ಅವಕಾಶ ನೀಡದೆ ಇದ್ದರೆ ಪಕ್ಷಕ್ಕಾಗಿ ದುಡಿದವರಿಗೆ ಮಾನ್ಯತೆ ಇರುವುದಿಲ್ಲ ಎಂಬ ಕೆಟ್ಟ ಸಂದೇಶ ರವಾನೆಯಾಗುತ್ತದೆ.
ಈ ಇಬ್ಬಂದಿತನದಲ್ಲೇ ಹೈಕಮಾಂಡ್ ಉಳಿದಂತಿದೆ.
ನಾಯಕತ್ವ ಬದಲಾವಣೆ ಇಲ್ಲ ಎಂಬ ಸಂದೇಶ ರವಾನಿಸಿದರೆ ಸಿದ್ದರಾಮಯ್ಯ ಮತ್ತವರ ಬೆಂಬಲಿಗರು ಏಕಮೇವಾದ್ವಿತೀಯರಾಗಿ ಮೆರೆಯುವ ಸಾಧ್ಯತೆ ಇದೆ. ಕೆಲ ಸಂದರ್ಭಗಳಲ್ಲಿ ಹೈಕಮಾಂಡ್ ಮಾತಿಗೂ ಕವಡೆ ಕಾಸಿನ ಕಿಮತ್ತು ನೀಡದೆ ಹೋಗಬಹುದು. ಅದಕ್ಕಾಗಿ ಡಿ.ಕೆ.ಶಿವಕುಮಾರ್ ಅವರಂತಹ ಪ್ರಬಲ ಸ್ಪರ್ಧಿ ಅಖಾಡದಲ್ಲೇ ಉಳಿದಿರುವುದು ಹೈಕಮಾಂಡ್‌ಗೆ ಹೆಚ್ಚು ಲಾಭದಾಯಕ ಎಂಬ ಚರ್ಚೆಗಳಿವೆ.
ಅದಕ್ಕಾಗಿ ನಾಯಕತ್ವ ಬದಲಾವಣೆ ಕುರಿತು ಬಹಿರಂಗವಾಗಿ ಹೇಳಿಕೆ ನೀಡುವ ಡಿ.ಕೆ.ಶಿವಕುಮಾರ್ ಬಣದ ಶಾಸಕರ ವಿರುದ್ಧ ಈವರೆಗೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹೇಳಲಾಗಿದೆ. ರಾಜ್ಯದಲ್ಲಿ ಗೊಂದಲ ತೀವ್ರಗೊಂಡರೆ ಉಕ್ಕುವ ಹಾಲಿಗೆ ನೀರು ಚಿಮುಕಿಸಿದಂತೆ ಆಗೊಂದಿಷ್ಟು ಸಮಾಧಾನ ಮಾಡಿ ಹೈಕಮಾಂಡ್ ತನ್ನ ಪಾಡಿಗೆ ತಾನು ಉಳಿದು ಬಿಡುತ್ತಿದೆ.
ಹೈಕಮಾಂಡ್ ನಿಲುವು ಮತ್ತು ಒಲವುಗಳನ್ನು ಅರ್ಥೈಸಿಕೊಂಡಿರುವ ಸಿದ್ದರಾಮಯ್ಯ ಸದ್ಯಕ್ಕೆ ನಿರಾಳರಾಗಿದ್ದಾರೆ. ತಮ ಪಾಡಿಗೆ ತಾವು ಬಜೆಟ್ ಪೂರ್ವ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ದಿನಕ್ಕೆ ಹತ್ತು ಇಲಾಖೆಗಳ ಅಧಿಕಾರಿಗಳು ಮತ್ತು ಸಚಿವರ ಜೊತೆ ಚರ್ಚೆ ನಡೆಸುತ್ತಿದ್ದಾರೆ. ಪ್ರಖರವಾದ ಭರವಸೆಯ ಬಜೆಟ್ ಮಂಡನೆಯ ಮೂಲಕ ಮತ್ತೊಮೆ ತಾವು ಅಹಿಂದ ಛಾಂಪಿಯನ್ ಎಂದು ಬಿಂಬಿಸಿಕೊಳ್ಳಲು ಸಿದ್ದರಾಮಯ್ಯ ಪ್ರಯತ್ನಿಸುತ್ತಿದ್ದಾರೆ.
ಪಕ್ಷದ ಹೈಕಮಾಂಡ್ ನಿಂದ ಯಾವುದೇ ಸಕಾರಾತಕ ಬೆಂಬಲ ಸಿಗದೆ ಹಿನ್ನಡೆ ಅನುಭವಿಸುತ್ತಿರುವ ಡಿ.ಕೆ.ಶಿವಕುಮಾರ್ ಸುಲಭಕ್ಕೆ ಕೈಚೆಲ್ಲದೆ ಎಲ್ಲಾ ಸಾಧ್ಯತೆಗಳ ಬಗ್ಗೆಯೂ ರಣತಂತ್ರ ರೂಪಿಸುತ್ತಿದ್ದಾರೆ ಎಂದು ಹೇಳಲಾಗಿದೆ.
