ಬೆಂಗಳೂರು, ಜೂ. 4- ಸಿದ್ಧಗಂಗಾ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರು ಇಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಉಪಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಮನೆಗೆ ಭೇಟಿ ನೀಡಿ ಶುಭ ಹಾರೈಸಿದ್ದಾರೆ.
ತುಮಕೂರು ಜಿಲ್ಲೆಯವರಾದ ಪರಮೇಶ್ವರ್ ಅವರು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದರು. ಕಾಂಗ್ರೆಸ್ ಹೈಕಮಾಂಡ್ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ತುಮಕೂರಿನ ಸಿದ್ದಗಂಗ ಮಠದ ಶ್ರೀಗಳು ಇಂದು ಬೆಂಗಳೂರಿಗೆ ಆಗಮಿಸಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದರು.
ಪರಮೇಶ್ವರ್ ಅವರ ಮನೆಯ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ಧಲಿಂಗ ಸ್ವಾಮೀಜಿಯವರು, ಪರಮೇಶ್ವರ್ ಹಿರಿಯ ವ್ಯಕ್ತಿ. ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಿದ್ದರು. ಸಚಿವರಾಗಿ ಹಲವು ಖಾತೆಗಳನ್ನು ನಿಭಾಯಿಸಿದ್ದಾರೆ. ಯಾವುದೇ ಜವಾಬ್ದಾರಿ ಕೊಟ್ಟರೂ ಅದನ್ನು ಸಮರ್ಥವಾಗಿ ನಿರ್ವಹಣೆ ಮಾಡುತ್ತಾರೆ ಎಂದರು.
ಪರಮೇಶ್ವರ್ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಿರುವುದು ಸಂತೋಷದ ವಿಚಾರ. ಅವರು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದರು. ಹಲವು ಬಾರಿ ಅವಕಾಶ ತಪ್ಪಿಹೋಗಿದೆ. ಬಹುಶಃ ಅದಕ್ಕಾಗಿಯೇ ಈಗ ಉಪ ಮುಖ್ಯಮಂತ್ರಿ ಮಾಡಿರಬಹುದು ಎಂದು ಸ್ವಾಮೀಜಿ ಹೇಳಿದರು.
ಇಂದು ತಾವು ಭೇಟಿ ಮಾಡಿದ ವೇಳೆಯಲ್ಲಿ ಮಠದ ವತಿಯಿಂದ ಆಶೀರ್ವದಿಸಿರುವುದಾಗಿ ಹೇಳಿದರು. ಪರಮೇಶ್ವರ್ ಅವರ ಮನೆಗೆ ಇಂದು ಸಚಿವರಾದ ಯು.ಟಿ.ಖಾದರ್, ಮಾಜಿ ಸಚಿವ ಸಂತೋಷ್ ಲಾಡ್, ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಸೇರಿದಂತೆ ಹಲವರು ಭೇಟಿ ನೀಡಿದರು.
ಸಚಿವ ಎಂ.ಬಿ.ಪಾಟೀಲರ ಕುಟುಂಬಕ್ಕೆ ಸಿದ್ಧಗಂಗಾ ಶ್ರೀ ಆಶೀರ್ವಾದ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಎಂ.ಬಿ.ಪಾಟೀಲ ಅವರ ಇಲ್ಲಿನ ಸದಾಶಿವ ನಗರದ ನಿವಾಸಕ್ಕೆ ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರು ಆಗಮಿಸಿ, ಸಚಿವರ ಕುಟುಂಬ ಪರಿವಾರಕ್ಕೆ ಆಶೀರ್ವಚನ ಮಾಡಿ, ಹರಸಿದರು.
ಬೆಳಿಗ್ಗೆಯಿಂದಲೇ ಶಾಸಕರು, ಕಾರ್ಯಕರ್ತರು, ಅಧಿಕಾರಿಗಳ ಆಗಮನ ಮತ್ತು ಅಭಿಮಾನಿಗಳ ಕಲರವದಿಂದ ತುಂಬಿದ್ದ ಸಚಿವರ ಸ್ವಂತ ನಿವಾಸಕ್ಕೆ ಆಗಮಿಸಿದ ಶ್ರೀಗಳನ್ನು ಸಚಿವರ ಕುಟುಂಬ ಪರಿವಾರ ಗೌರವದಿಂದ ಬರಮಾಡಿಕೊಂಡಿತು.
ನಂತರ ಎಂ ಬಿ ಪಾಟೀಲ, ಅವರ ಪತ್ನಿ ಆಶಾ ಪಾಟೀಲ, ಮಕ್ಕಳಾದ ಬಸಂತ್ ಮತ್ತು ಧ್ರುವ ಪಾಟೀಲ ಎಲ್ಲರೂ ಸ್ವಾಮೀಜಿಗಳ ಪಾದಪೂಜೆ ನೆರವೇರಿಸಿದರು. ಅವರೆಲ್ಲರ ಭಕ್ತಿಯನ್ನು ಸ್ವೀಕರಿಸಿದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಕೆಲ ಹೊತ್ತು ಲೋಕಾಭಿರಾಮವಾಗಿ ಮಾತನಾಡಿ, ಬಳಿಕ ಆಶೀರ್ವಚನಗೈದು, ಒಳಿತನ್ನು ಹಾರೈಸಿದರು.
ಈ ಸಂದರ್ಭದಲ್ಲಿ ಸಚಿವ ಪಾಟೀಲರು ಕೂಡ ತಮ ಇದುವರೆಗಿನ ಸಾಧನೆಗಳ ನೆನಪಿನೊಂದಿಗೆ, ಇನ್ನು ಮುಂದೆಯೂ ಶ್ರೀಗಳ ಸಲಹೆ, ಮಾರ್ಗದರ್ಶನ ತಮಗೆ ಇರಬೇಕೆಂದು ಕೋರಿದರು.
ರಾಜ್ಯದ ಸ್ಥಿತಿಗತಿ, ಮಳೆ-ಬೆಳೆ ಇತ್ಯಾದಿಗಳ ಬಗ್ಗೆ ಅಭಿಪ್ರಾಯ ವಿನಿಮಯ ಮಾಡಿಕೊಂಡ ಶ್ರೀಗಳು, ತಾವು ಸಕುಟುಂಬ ಪರಿವಾರ ಸಮೇತರಾಗಿ ಸಿದ್ಧಗಂಗೆಯ ಶ್ರೀಮಠಕ್ಕೆ ಆಗಮಿಸಬೇಕೆಂದು ಆಹ್ವಾನ ನೀಡಿದರು. ಇದಕ್ಕೆ ಸಚಿವರು ಸಕಾರಾತಕವಾಗಿ ಸ್ಪಂದಿಸಿದರು.
ಇದೇ ಸಂದರ್ಭದಲ್ಲಿ ಶ್ರೀಗಳು ಸಚಿವರ ಪುತ್ರರಾದ ವನ್ಯಜೀವಿ ಮಂಡಳಿ ಸದಸ್ಯ ಧ್ರುವ ಪಾಟೀಲ ಅವರು ತೆಗೆದಿರುವ ವನ್ಯ ಜೀವಿ ಪ್ರಾಣಿಗಳ ಛಾಯಾಚಿತ್ರಗಳನ್ನು ನೋಡಿ ಮೆಚ್ವುಗೆ ವ್ಯಕ್ತಪಡಿಸಿದರು. ಅವರ ಪರಿಸರ ಕಾಳಜಿ ಕೇಳಿಯೂ ಹರ್ಷ ವ್ಯಕ್ತಪಡಿಸಿದರು. ವೀರಶೈವ ಲಿಂಗಾಯತ ಸಮುದಾಯದ ಹಿರಿಯ ನಾಯಕರಲ್ಲಿ ಒಬ್ಬರಾಗಿರುವ ಎಂ.ಬಿ.ಪಾಟೀಲ ಅವರು ಮೊದಲಿನಿಂದಲೂ ಶ್ರೀಮಠದೊಂದಿಗೆ ನಿಕಟ ಬಾಂಧವ್ಯ ಇಟ್ಟುಕೊಂಡು ಬಂದಿದ್ದಾರೆ. ವಿಶೇಷವಾಗಿ ಮಠದ ಕಾಯಕ ಪರಂಪರೆ, ಶಿಕ್ಷಣ ಪ್ರಸಾರ ಮತ್ತು ಅನ್ನ ದಾಸೋಹಗಳನ್ನು ಸಚಿವರು ಮೆಚ್ಚಿಕೊಂಡಿರುವುದನ್ನು ಇಲ್ಲಿ ನೆನೆಯಬಹುದು.
ಏತನಧ್ಯೆ ಸಚಿವರ ನಿವಾಸಕ್ಕೆ ಸಾವಿರಾರು ಅಭಿಮಾನಿಗಳು ಲಗ್ಗೆ ಇಟ್ಟಿದ್ದರು. ಅದರಲ್ಲೂ ಸಚಿವರ ತವರು ಜಿಲ್ಲೆ ವಿಜಯಪುರದಿಂದ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಬೆಂಗಳೂರಿಗೆ ಬಂದಿದ್ದರು. ಸಚಿವರು ತಮ ತವರಿನ ಜನರ ಜತೆ ಲವಲವಿಕೆಯಿಂದ ಓಡಾಡುತ್ತಾ, ಕೈ ಕುಲುಕುತ್ತಾ, ಅವರಿಗೆ ಆತಿಥ್ಯ ನೀಡುತ್ತಾ ಚಟುವಟಿಕೆಯಿಂದಿದ್ದರು. ಇನ್ನೊಂದು ಕಡೆಯಲ್ಲಿ ಅಧಿಕಾರಿಗಳು ಸಚಿವರನ್ನು ಅಭಿನಂದಿಸಿದರು.ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ಕೆ.ಹರಿಪ್ರಸಾದ್ ಅವರನ್ನು ಅವರ ಮನೆಯಲ್ಲಿ ಭೇಟಿ ಮಾಡಿ ಸಚಿವ ಎಂ.ಬಿ.ಪಾಟೀಲ ಅವರು ಅಭಿನಂದನೆ ಸಲ್ಲಿಸಿದರು.
