Saturday, January 3, 2026
Homeರಾಜ್ಯಕಾಂಗ್ರೆಸ್‌‍ ಕಾರ್ಯಕರ್ತ ರಾಜಶೇಖರ್‌ ಕೊಲೆ ಆರೋಪಿಯನ್ನು ಶೀಘ್ರದಲ್ಲೇ ಬಂಧಿಸುತ್ತೇವೆ : ಹಿತೇಂದ್ರ

ಕಾಂಗ್ರೆಸ್‌‍ ಕಾರ್ಯಕರ್ತ ರಾಜಶೇಖರ್‌ ಕೊಲೆ ಆರೋಪಿಯನ್ನು ಶೀಘ್ರದಲ್ಲೇ ಬಂಧಿಸುತ್ತೇವೆ : ಹಿತೇಂದ್ರ

Congress worker Rajashekar murder accused will be arrested soon: Hitendra

ಬೆಂಗಳೂರು,ಜ.3-ಬಳ್ಳಾರಿಯ ಕಾಂಗ್ರೆಸ್‌‍ ಕಾರ್ಯಕರ್ತ ರಾಜಶೇಖರ್‌ ಅವರ ಸಾವಿನ ಪ್ರಕರಣದ ಆರೋಪಿಯನ್ನು ಸದ್ಯದಲ್ಲೇ ಬಂಧಿಸಲಾಗುವುದೆಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್‌‍ ಮಹಾ ನಿರ್ದೇಶಕ ಹಿತೇಂದ್ರ ಅವರು ತಿಳಿಸಿದ್ದಾರೆ. ಈ ಸಂಜೆಯೊಂದಿಗೆ ಮಾತನಾಡಿದ ಅವರು, ರಾಜಶೇಖರ್‌ ದೇಹದೊಳಗೆ ಹೊಕ್ಕಿರುವ ಗುಂಡು ಹಾಗೂ ಖಾಸಗಿ ಅಂಗರಕ್ಷಕರೊಬ್ಬರ ಗನ್‌ನಿನ ಗುಂಡುಗಳು ಹೊಂದಾಣಿಕೆಯಾಗುತ್ತಿವೆ ಎಂದು ವಿವರಿಸಿದರು.

ಈಗಾಗಲೇ ನಾವು ಖಾಸಗಿ ಅಂಗ ರಕ್ಷಕರ ಐದು ಗನ್‌ಗಳು ಹಾಗೂ ಗುಂಡುಗಳನ್ನು ವಶಪಡಿಸಿಕೊಂಡು ಎಫ್‌ಎಸ್‌‍ಎಲ್‌ಗೆ ಕಳುಹಿಸಿದ್ದೇವೆ. ಅದೇ ರೀತಿ ರಾಜಶೇಖರ್‌ ದೇಹದೊಳಗೆ ಸಿಕ್ಕಿರುವ ಗುಂಡನ್ನು ಸಹ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ಅವುಗಳ ವರದಿ ಬಂದ ತಕ್ಷಣವೇ ಆರೋಪಿಯನ್ನು ಬಂಧಿಸುತ್ತೇವೆಂದು ಅವರು ಹೇಳಿದರು.

ಖಾಸಗಿ ಗನ್‌ಮ್ಯಾನ್‌ಗಳನ್ನು ಸಹ ವಿಚಾರಣೆಗೆ ಒಳಪಡಿಸಲಾಗಿದೆ. ಮತ್ತು ಅಂದಿನ ಘಟನೆಗೆ ಸಂಬಂಧಿಸಿದಂತೆ ಸ್ಥಳದಲ್ಲಿನ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗಿದೆ. ವಿಡಿಯೋ ತುಣುಕುಗಳನ್ನು ನೋಡಿದ್ದೇವೆ ಎಂದರು.

ಘಟನೆಗೆ ಸಂಬಂಧಿಸಿದಂತೆ ಇದುವರೆಗೂ ಒಟ್ಟು ಆರು ಪ್ರಕರಣಗಳು ಬ್ರೂಸ್‌‍ಪೇಟೆ ಪೊಲೀಸ್‌‍ ಠಾಣೆಯಲ್ಲಿ ದಾಖಲಾಗಿವೆ. ಕಾಂಗ್ರೆಸ್‌‍ ಶಾಸಕ ನಾರಾ ಭರತ್‌ ರೆಡ್ಡಿ ಕಡೆಯವರು ಮೂರು ಪ್ರಕರಣ ದಾಖಲಿಸಿದ್ದಾರೆ. ಅದೇ ರೀತಿ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಮತ್ತು ಅವರ ಬೆಂಬಲಿಗರು ಎರಡು ಪ್ರತಿದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದರು.

ಅಲ್ಲದೇ ನಾವೇ ಒಂದು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದೇವೆ. ಎಲ್ಲಾ ಪ್ರಕರಣಗಳ ತನಿಖೆ ನಡೆಯುತ್ತಿದೆ. ಪ್ರಸುತ್ತ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಬಿಗಿ ಪೊಲೀಸ್‌‍ ಬಂದೋಬಸ್ತ್‌ ಮಾಡಲಾಗಿದೆ. ಹಿರಿಯ ಅಧಿಕಾರಿಗಳು ಬಳ್ಳಾರಿಗೆ ಮೊಕ್ಕಾಂ ಹೂಡಿದ್ದಾರೆ ಎಂದು ಅವರು ತಿಳಿಸಿದರು.

RELATED ARTICLES

Latest News