Thursday, April 16, 2026
Homeರಾಜ್ಯಇಂದೂ ಕೂಡ ಆಡಳಿತ-ಪ್ರತಿಪಕ್ಷಗಳ ಪ್ರತಿಷ್ಠೆಗೆ ಪರಿಷತ್‌ ಕಲಾಪ ಬಲಿ

ಇಂದೂ ಕೂಡ ಆಡಳಿತ-ಪ್ರತಿಪಕ್ಷಗಳ ಪ್ರತಿಷ್ಠೆಗೆ ಪರಿಷತ್‌ ಕಲಾಪ ಬಲಿ

Council proceedings are a waste of the prestige of the ruling and opposition parties

ಬೆಂಗಳೂರು,ಜ.29- ಹಾವೂ ಸಾಯಲಿಲ್ಲ, ಕೋಲೂ ಮುರಿಯಲಿಲ್ಲ ಎಂಬಂತಾಗಿದೆ ವಿಧಾನಪರಿಷತ್‌ನ ಕಲಾಪ. ಒಂದು ಕಡೆ ರಾಜ್ಯಪಾಲರ ಭಾಷಣ ಕುರಿತು ಅಗೌರವ ತೋರಿರುವ ಸಭಾನಾಯಕ ಬೋಸರಾಜು ಅವರು ಕ್ಷಮೆ ಕೇಳಬೇಕೆಂದು ಪ್ರತಿಪಕ್ಷಗಳ ಪಟ್ಟು. ಕಲಾಪದ ನಿಯಮದ ಪುಸ್ತಕ ಹರಿದು ಅಗೌರವ ತೋರಿರುವ ಪ್ರತಿಪಕ್ಷದ ನಾಯಕರನ್ನು ಸದನದಿಂದ ಹೊರಹಾಕಬೇಕೆಂಬುದು ಆಡಳಿತ ಪಕ್ಷದವರ ಒತ್ತಾಯ.

ಹೀಗೆ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ತಮ್ಮತಮ್ಮ ಪಟ್ಟಿನಿಂದ ಹಿಂದೆ ಸರಿಯದ ಕಾರಣ ವಿಧಾನಪರಿಷತ್‌ ಕಲಾಪ ಇಂದೂ ಕೂಡ ಹೊಳೆಯಲ್ಲಿ ಹುಣಿಸೆಹಣ್ಣು ಕಿವುಚಿದಂತಾಗಿದೆ.
ದಿನದ ಕಲಾಪ ಪ್ರಾರಂಭವಾಗುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರು, ಕಲಾಪವನ್ನು ಕೈಗೆತ್ತಿಕೊಳ್ಳಲು ಮುಂದಾದರು. ಈ ವೇಳೆ ಬುಧವಾರದಂತೆ ತಮ ಧರಣಿಯನ್ನು ಮುಂದುವರೆಸಿದ ಪ್ರತಿಪಕ್ಷದ ಸದಸ್ಯರು ಸದನದ ಬಾವಿಯಲ್ಲಿದ್ದರು.

ಈ ವೇಳೆ ಸಭಾಪತಿ ಬಸವರಾಜ ಹೊರಟ್ಟಿಯವರು ಕಲಾಪವನ್ನು ನಡೆಸಬೇಕು. ಪದೇಪದೇ ಈ ರೀತಿ ಅಡ್ಡಿಪಡಿಸುವುದು ಸರಿಯಲ್ಲ. ಪ್ರಶ್ನೋತ್ತರ ಅವಧಿ, ರಾಜ್ಯಪಾಲರ ವಂದನಾ ನಿರ್ಣಯಕ್ಕೆ ಮುಖ್ಯಮಂತ್ರಿಗಳು ಉತ್ತರ ನೀಡಬೇಕು. ಸದಸ್ಯರು ಧರಣಿಯನ್ನು ಕೈಬಿಟ್ಟು ತಮತಮ ಆಸ್ಥಾನಗಳಿಗೆ ಮರಳುವಂತೆ ಸೂಚಿಸಿದರು.

ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ನಾವು ಸದನಕ್ಕೆ ಅಡ್ಡಿಪಡಿಸುತ್ತಿಲ್ಲ. ಕಲಾಪವು ಸುಗಮವಾಗಿ ನಡೆಯಬೇಕೆಂಬುದು ನಮ ಆಶಯ. ಆದರೆ ಸರ್ಕಾರ ಇಲ್ಲಿ ಹಠಮಾರಿ ಧೋರಣೆ ತೋರುತ್ತಿದೆ. ರಾಜ್ಯಪಾಲರಿಗೆ ಅಗೌರವ ತೋರಿರುವ ಸಭಾನಾಯಕ ಬೋಸರಾಜು ಅವರು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ವಿಷಾದ ವ್ಯಕ್ತಪಡಿಸಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಸಭಾನಾಯಕರು ಮಾತನಾಡಿರುವ ಪದವನ್ನು ನಾನು ಕಡತದಿಂದ ತೆಗೆದುಹಾಕಿದ್ದೇನೆ. ಅಂದರೆ ಆ ವಿಷಯ ಅಲ್ಲಿಗೇ ಮುಗಿದಿದೆ ಎಂದು ಪರಿಭಾವಿಸಬೇಕಾಗುತ್ತದೆ. ಪುನಃ ಪುನಃ ಅದೇ ಚರ್ಚೆ ಮಾಡುವುದು ಬೇಡ. ಕಲಾಪ ನಡೆಯಲು ಎಲ್ಲರೂ ಅವಕಾಶ ಕೊಡಿ ಎಂದು ಮನವಿ ಮಾಡಿದರು.

ಈ ವೇಳೆ ಸಭಾನಾಯಕ ಬೋಸರಾಜು ಅವರು ಸಲಹಾ ಸಮಿತಿ ಸಭೆಯಲ್ಲಿ ನಡೆದ ಮಾತುಕತೆಯಂತೆ ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಚರ್ಚೆಗೆ ಅವಕಾಶ ಕಲ್ಪಿಸುತ್ತೇವೆ ಎಂದು ಪ್ರತಿಪಕ್ಷದ ನಾಯಕರು ಹೇಳಿದ್ದರು. ಆದರೆ ಇಲ್ಲಿ ಅದಕ್ಕೆ ಅವರು ವ್ಯತಿರಿಕ್ತವಾಗಿ ಮಾತನಾಡುತ್ತಿದ್ದಾರೆ.

ನೀವು ನಾನು ಆಡಿದ ಮಾತನ್ನು ಕಡತದಿಂದ ತೆಗೆದುಹಾಕುತ್ತೇನೆ ಎಂದ ಮೇಲೆ ವಿಷಯ ಮುಗಿಯಿತು. ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಲು ಸದಸ್ಯ ಐವಾನ್‌ ಡಿಸೋಜಾ ಅವರಿಗೆ ಸೂಚಿಸಿದ್ದೀರಿ. ಪ್ರತಿಪಕ್ಷದ ಸದಸ್ಯರು ಪದೇಪದೇ ಒಂದೇ ವಿಷಯವನ್ನಿಟ್ಟುಕೊಂಡು ಕಲಾಪಕ್ಕೆ ಅಡ್ಡಿಪಡಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಆಗ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಕೆಲಹೊತ್ತು ಮಾತಿನ ಚಕಮಕಿ, ಗದ್ದಲ ನಡೆಯಿತು.

ಈ ವೇಳೆ ಬಸವರಾಜ ಹೊರಟ್ಟಿಯವರು ನನಗೆ ಸದನ ನಡೆಸಲು ತುಂಬಾ ಬೇಸರವಾಗುತ್ತದೆ. ಈ ರೀತಿ ಎಂದೂ ಆಗಿರಲಿಲ್ಲ. ಸದಸ್ಯರು ಯಾವ ರೀತಿ ಸದನದಲ್ಲಿ ನಡೆದುಕೊಳ್ಳಬೇಕು ಎಂಬ ಸೌಜನ್ಯವೂ ಇಲ್ಲ. ಎಷ್ಟು ಬಾರಿ ನಾನು ಮನವಿ ಮಾಡಿಕೊಂಡರೂ ಕಲಾಪಕ್ಕೆ ಅಡ್ಡಿಪಡಿಸುತ್ತೀರಿ ಎಂದರೆ ಇನ್ನು ಯಾವ ಭಾಷೆಯಲ್ಲಿ ನಿಮಗೆ ಹೇಳಬೇಕು. ನನ್ನ ಸಹನೆಗೂ ಒಂದು ಇತಿಮಿತಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯ ಸಿ.ಟಿ.ರವಿ ನಿಯಮಗಳನ್ನು ಓದಿ ಸಭಾನಾಯಕರು ರಾಜ್ಯಪಾಲರಿಗೆ ಅಗೌರವ ತೋರಿದ್ದಾರೆ. ನೀವು ಕಡತದಿಂದ ತೆಗೆದುಹಾಕಿದ್ದೇನೆ ಎಂದರೆ ಅದು ಮುಗಿಯುವುದಿಲ್ಲ. ಯಾರು ಪದವನ್ನು ಬಳಸಿದ್ದಾರೋ ಅವರೇ ಕ್ಷಮೆ ಕೇಳಬೇಕು. ಇಲ್ಲವೇ ಬೇಸತ್ತು ವಿಷಾದ ವ್ಯಕ್ತಪಡಿಸಬೇಕು ಎಂದು ಒತ್ತಾಯ ಮಾಡಿದರು.

ಮುಖ್ಯ ಸಚೇತಕ ಸಲೀಂ ಮಾತನಾಡಿ, ಬಿಜೆಪಿಯವರಿಗೆ ಕಲಾಪ ನಡೆಯಬಾರದು ಎಂಬ ದುರುದ್ದೇಶವಿದೆ. ಹೀಗಾಗಿಯೇ ಸದನ ನಡೆಯಲು ಅವಕಾಶ ಕೊಡುತ್ತಿಲ್ಲ. ಸದನದ ನಿಯಮದ ಪುಸ್ತಕ ಹರಿದುಹಾಕಿರುವ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರನ್ನು ಸದನದಿಂದ ಹೊರಗೆ ಹಾಕಬೇಕೆಂದು ಆಗ್ರಹಿಸಿದರು.

ಕಾಂಗ್ರೆಸ್‌‍ನ ನಾಗರಾಜ ಯಾದವ್‌, ಬಿ.ಕೆ.ಹರಿಪ್ರಸಾದ್‌ ಸೇರಿದಂತೆ ಅನೇಕ ಸದಸ್ಯರು ನಿಯಮಗಳನ್ನು ಓದಿ ಪ್ರತಿಪಕ್ಷದ ವಿರುದ್ಧ ಆಕ್ರೋಶ ಹೊರಹಾಕಿದರು. ಹೀಗೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದ ವೇಳೆ ಸದನದ ಕಲಾಪಕ್ಕೆ ಅಡ್ಡಿಯಾಗಲು ಹರಿಪ್ರಸಾದ್‌ ಅವರೇ ಕಾರಣ. ಅವರನ್ನು ಸದನದಿಂದ ಹೊರಗೆ ಹಾಕಿ ಎಂದು ಬಿಜೆಪಿಯ ರವಿಕುಮಾರ್‌ ಒತ್ತಾಯಿಸಿದರು.

ಅವರಿಗೆ ಕೈ ತೋರಿದ್ದಾರೆ ಎಂದು ಹೇಳಿದಾಗ ಹರಿಪ್ರಸಾದ್‌ ಇನ್ನೇನು ಕಾಲು ತೋರಿಸಬೇಕಿತ್ತೇ ಎಂದು ಪ್ರಶ್ನೆ ಮಾಡಿದರು.ಇದರಿಂದ ಕೆರಳಿದ ಬಿಜೆಪಿ ಸದಸ್ಯರು ಹರಿಪ್ರಸಾದ್‌ರನ್ನು ಸದನದಿಂದ ಹೊರಹಾಕಬೇಕೆಂದು ಕೋಲಾಹಲ ಸೃಷ್ಟಿಸಿದಾಗ ಸದನದಲ್ಲಿ ಭಾರೀ ಗದ್ದಲ ಉಂಟಾದ ಪರಿಣಾಮ ಸಭಾಪತಿಯವರು ಸದನವನ್ನು ಮುಂದೂಡಿದರು.

RELATED ARTICLES

Latest News