Homeರಾಜ್ಯದೆಹಲಿ ಸಭೆ ವಿಫಲ : ರಾಷ್ಟ್ರೀಯ ಹೆದ್ದಾರಿ ತಡೆದು ಕಬ್ಬು ಬೆಳೆಗಾರರ ಆಕ್ರೋಶ

ದೆಹಲಿ ಸಭೆ ವಿಫಲ : ರಾಷ್ಟ್ರೀಯ ಹೆದ್ದಾರಿ ತಡೆದು ಕಬ್ಬು ಬೆಳೆಗಾರರ ಆಕ್ರೋಶ

ಬೆಂಗಳೂರು, ಅ.13- ಕಬ್ಬು ಬೆಳೆಗಾರರಿಗೆ ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆ ನೀಡ ಬೇಕೆಂದು ಆಗ್ರಹಿಸಿ, ರಾಜ್ಯದ ಹತ್ತಕ್ಕೂ ಹೆಚ್ಚು ಕಡೆ ರೈತರು ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಪ್ರಮುಖ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ.

ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಕಬ್ಬು ಬೆಳೆಗಾರರು ಜಂಟಿ ಹೋರಾಟ ಹಮಿಕೊಂಡಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ತಲೆ ನೋವಾಗಿ ಪರಿಣಮಿಸಿದೆ.ಕೇಂದ್ರ ಆಹಾರ ಮತ್ತು ನಾಗರೀಕ ಪೂರೈಕೆ ಹಾಗೂ ಸಕ್ಕರೆ ಸಚಿವ ಪ್ರಹ್ಲಾದ್‌ ಜೋಷಿ ರಾಜ್ಯದ ಕಬ್ಬು ಬೆಳೆಗಾರರ ಜೊತೆ ನಿನ್ನೆ ದೆಹಲಿಯಲ್ಲಿ ಮಹತ್ವದ ಚರ್ಚೆ ನಡೆಸಿದರು. ಬಳಿಕ ಸಭೆ ಯಶಸ್ವಿಯಾಗಿದೆ. ಕಬ್ಬಿಗೆ ನ್ಯಾಯೋಚಿತ ದರ ನಗದಿ ಕುರಿತು ಪರಿಶೀಲಿಸಲು ರೈತರ ಬೇಡಿಕೆ ಆಧರಿಸಿ ಸಮಿತಿ ರಚಿಸಲಾಗುತ್ತಿದೆ ಎಂದು ಘೋಷಿಸಿದರು.

ಸಭೆಯ ಬಳಿಕ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಮುಖಂಡರು, ಕೇಂದ್ರ ಸರ್ಕಾರ ಬೇಡಿಕೆಗಳನ್ನು ಈಡೇರಿಸಲು ಒಂದು ತಿಂಗಳ ಕಾಲಾವಕಾಶ ಕೇಳಿತ್ತು. ಆದರೆ ಒಂದುವಾರ ಮಾತ್ರ ಕಾಲಾವಕಾಶ ನೀಡಿದ್ದೇವೆ ಎಂದು ಹೇಳಿದರು. ಈ ನಡುವೆ ರಾಜ್ಯದಲ್ಲಿ ರೈತರು ದೆಹಲಿಯಲ್ಲಿನ ಸಭೆ ವಿಫಲವಾಗಿದೆ ಎಂದು ಹೇಳಿದ್ದು, ಪ್ರತಿಭಟನೆ ಆರಂಭಿಸಿದ್ದಾರೆ. ಬೆಳಗಾವಿ, ಬಾಗಲಕೋಟೆ, ಗದಗ, ರಾಯಚೂರು, ಹಾವೇರಿ, ಧಾರವಾಡ, ವಿಜಯಪುರ, ಮಂಡ್ಯ, ಚಾಮರಾಜನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್‌ ಮಾಡಿ ಹೋರಾಟ ನಡೆಸಿದ್ದಾರೆ. ಟೋಲ್‌ ಪ್ಲಾಜಾಗಳಿಗೆ ಮುತ್ತಿಗೆ ಹಾಕಲಾಗಿದೆ.

ಕಬ್ಬು ಬೆಳೆಗಾರರ ಹೋರಾಟದಿಂದಾಗಿ ಹಲವು ಕಡೆ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು. ಬಾಗಲಕೋಟೆಯಲ್ಲಿ ರೈತರು ಹೆದ್ದಾರಿಯ ನಡುವೆಯೇ ಪೆಂಡಾಲ್‌ ಹಾಕಲು ಮುಂದಾಗಿದ್ದರಿಂದ ಪೊಲೀಸರ ಜೊತೆ ಮಾತಿನ ಚಕಮಕಿ ನಡೆದಿದೆ. ಪೊಲೀಸರು ರೈತರ ಮನವೊಲಿಸಿ ರಸ್ತೆ ಬಳಿಯಲ್ಲಿ ಪೆಂಡಾಲ್‌ ಹಾಕಲು ಅವಕಾಶ ಮಾಡಿಕೊಟ್ಟಿದ್ದಾರೆ. ಬಾಗಲಕೋಟೆ-ಹುನಗುಂದದ ಹೆದ್ದಾರಿ ಬಂದ್‌ ಮಾಡಿದ್ದರಿಂದ ವಾಹನಗಳು ಕಿ.ಮೀ.ಗಟ್ಟಲೇ ಸಾಲುಗಟ್ಟಿ ನಿಂತಿದ್ದವು. ಬೆಳಗಾವಿಯಲ್ಲಿ ಮೂರು ಕಡೆ ಹೆದ್ದಾರಿ ಬಂದ್‌ ಮಾಡಲಾಗಿದೆ. ಹಿರೇಬಾಗವಾಡಿಯಲ್ಲಿ ರೈತರು ರಸ್ತೆ ನಡುವೆಯೇ ಧರಣಿ ನಡೆಸಿದರು.

ಹುಕ್ಕೇರಿಯ ಹುತ್ತರಗಿಯಲ್ಲಿ ಪುಣೆ-ಬೆಂಗಳೂರು ಮಾರ್ಗದ ಹೆದ್ದಾರಿಯ ಸಂಚಾರವನ್ನು ತಡೆಯಲಾಗಿತ್ತು. ಕೂಗನಾಳ ಟೋಲ್‌ ಬಳಿಯೂ ರೈತರು ರಸ್ತೆ ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು. ಹೀಗಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕ ಎರಡೂ ರಾಜ್ಯಗಳ ನಡುವೆ ಸಂಪರ್ಕ ಕಡಿತಗೊಂಡಿತ್ತು. ಅತ್ತ ಮಹಾರಾಷ್ಟ್ರದಲ್ಲೂ ಮಾಜಿ ಸಂಸದ ರಾಜೀವ್‌ ಶೆಟ್ಟಿ ನೇತೃತ್ವದಲ್ಲಿ ಕಬ್ಬು ಬೆಳೆಗಾರರು ಹೆದ್ದಾರಿ ತಡೆ ಮಾಡಿದರು. ಮಹಾರಾಷ್ಟ್ರ ಮತ್ತು ಕರ್ನಾಟಕದ ಕಬ್ಬು ಬೆಳೆಗಾರರು ಜಂಟಿ ಹೋರಾಟ ಆರಂಭಿಸಿದ್ದಾರೆ. ಹೆದ್ದಾರಿಯಲ್ಲಿ ಟೋಲ್‌ಗಳ ಸಮೀಪ ಆಹೋರಾತ್ರಿ ಧರಣಿಗೆ ಮುಂದಾಗಿದ್ದಾರೆ. ಇದರಿಂದಾಗಿ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿದೆ.

ವಿಜಯಪುರ ಜಿಲ್ಲೆಯ ನಿಡಗುಂದಿಯ ಹೆದ್ದಾರಿ ಟೋಲ್‌ ಬಳಿ ರೈತರು ಧರಣಿ ನಡೆಸಿದರು. ವಿಜಯಪುರ-ಬೆಂಗಳೂರು ಸಂಪರ್ಕಿಸುವ ಈ ಹೆದ್ದಾರಿ ತಡೆದಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು. ಧಾರವಾಡದ ಯರಿಕೊಪ್ಪ ಹೆದ್ದಾರಿ ಟೋಲ್‌ ಪ್ಲಾಜಾಗೆ ಮುತ್ತಿಗೆ ಹಾಕಿದ ರೈತರು ರಸ್ತೆ ತಡೆ ನಡೆಸಿದರು. 15 ದಿನಗಳ ಹಿಂದೆ ಕಬ್ಬು ಬೆಳೆಗಾರರು ಇಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು. ಅದರ ಪರಿಣಾಮ ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ದೆಹಲಿಯಲ್ಲಿ ನಿನ್ನೆ ವಿಶೇಷ ಸಭೆ ನಡೆಸಿದರು.

ಸಭೆಯ ಬಳಿಕ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಈಡೇರಿಸಲು ಕಾಲಾವಕಾಶ ನೀಡಲಾಗಿದೆ ಎಂದು ಕೆಲ ರೈತರು ಹೇಳಿದರು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಬೆಳಗಾವಿಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜಾರಿ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಮಾತುಕತೆಯ ನಾಟಕವಾಡುತ್ತಿದ್ದಾರೆ. ವಿವಿಧ ಇಲಾಖೆಗಳ ಮತ್ತು ರಾಜ್ಯ ಸರ್ಕಾರದ ಜೊತೆ ಚರ್ಚಿಸಿ ದರ ಹೆಚ್ಚಳದ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಹೇಳುತ್ತಿದ್ದಾರೆ. ಗೊಬ್ಬರದ ಬೆಲೆಯನ್ನು ನೂರಾರು ರೂ.ಗಳು ಹೆಚ್ಚಿಸಿದಾಗ ಯಾರನ್ನಾದರೂ ಕೇಳಿದರೇ? ಪೆಟ್ರೋಲ್‌, ಡೀಸೆಲ್‌ ಬೆಲೆಯನ್ನು ಸದ್ದಿಲ್ಲದೇ ಹೆಚ್ಚಿಸಿದರು. ಆದರೆ ರೈತರ ವಿಚಾರ ಬಂದಾಗ ಚರ್ಚೆಯಾಗಬೇಕು ಎಂಬ ನಾಟಕವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನ್ಯಾಯಯುತವಾದ ಬೇಡಿಕೆಗಳು ಈಡೇರುವವರೆಗೂ ರೈತರು ಹೆದ್ದಾರಿಯಲ್ಲೇ ವಾಸ ಮಾಡಲಿದ್ದಾರೆ. ನಿನ್ನೆ ರಾತ್ರಿಯಿಂದಲೇ ಆರಂಭವಾಗಿರುವ ಧರಣಿ ಆಹೋರಾತ್ರಿ ಮುಂದುವರೆಯಲಿದೆ ಎಂದು ಅವರು ಘೋಷಿಸಿದ್ದಾರೆ. ಕಬ್ಬಿಗೆ 35 ರೂಪಾಯಿಗಳಿರುವ ಎಮ್‌ಎಸ್‌‍ಪಿಯನ್ನು 60 ರೂ.ಗೆ ಹೆಚ್ಚಿಸಬೇಕು. ಪ್ರತಿ ಟನ್‌ ಕಬ್ಬಿಗೆ 5,500 ರಿಂದ 6 ಸಾವಿರ ರೂ.ಗೆ ಬೆಲೆ ನಿಗದಿ ಮಾಡಬೇಕು. ಸ್ವಾಮಿನಾಥನ್‌ ವರದಿ ಯಥಾವತ್‌ ಜಾರಿ ಮಾಡಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ.

RELATED ARTICLES

Latest News